ಬಾಳೆಲೆಯಲ್ಲಿ ದಿ. ಬಿ ಎಸ್ ಗೋಪಾಲಕೃಷ್ಣ ದತ್ತಿ ನಿಧಿ ಕಾರ್ಯಕ್ರಮವನ್ನು ಅಳಂಮೇಂಗಡ ಬೋಸ್ ಮಂದಣ್ಣ ಉದ್ಘಾಟಿಸಿದರು. ಮುಕ್ಕಾಟಿರ ಜಾನಕಿ ಕಾವೇರಪ್ಪ, ಕೆ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. 
ಜಿಲ್ಲೆ

ಅಜ್ಜಿ ಹೇಳಿದ್ದನ್ನು ಬರಹಕ್ಕೆ ಇಳಿಸಿದರೆ ಉತ್ತಮ ಕಥೆ

ನಾಗೇಶ ಎಸ್

ಗೋಣಿಕೊಪ್ಪ: ಕಥೆಯ ರಚನೆಯ ಪ್ರಾರಂಭ ನಮ್ಮ ಮನೆಯಲ್ಲಿ ತಾಯಿ ಅಥವಾ ಅಜ್ಜಿ ಅವರು ಹೇಳುವ ಕಥೆಗಳಿಂದ ಪ್ರಾರಂಭವಾಗುತ್ತದೆ. ಅವರು ಹೇಳಿದ ಕಥೆಗಳನ್ನು ನೆನಪಿಸಿಕೊಂಡು ಬರಹ ರೂಪಕ್ಕೆ ಇಳಿಸಿದರೆ, ಉತ್ತಮ ಕಥೆಗಳಾಗುತ್ತವೆ ಎಂದು ಪತ್ರಕರ್ತೆ ಉಷಾ ಪ್ರೀತಮ್ ಹೇಳಿದರು.

ಬಾಳೆಲೆಯ ವಿಜಯಲಕ್ಷ್ಮೀ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಸಂಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಿ.ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಥೆ ಸರಳ ಭಾಷೆಯಲ್ಲಿ ಇರಬೇಕು. ಆಗ ಅದು ಎಲ್ಲರ ಮನಸ್ಸನ್ನು ತಲುಪುತ್ತದೆ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಹಿರಿಯ ಪತ್ರಕರ್ತ ದಿ.ಬಿ.ಎಸ್.ಗೋಪಾಲಕೃಷ್ಣ ಅವರ ಜ್ಞಾಪಕವಾಗಿ ಅವರ ಪುತ್ರ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ ಅನಂತಶಯನ ದತ್ತಿ ಸ್ಥಾಪಿಸಿದ್ದು, ಕೊಡಗಿನ ಲೇಖಕರಿಗೆ ಕಥೆ ಬರೆಯುವ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು.

ಮುಕ್ತ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಶಾಲನಗರದ ಕುಕ್ಕನೂರು ರೇಷ್ಮಾ ಮನೋಜ್ ಮತ್ತು ದ್ವಿತೀಯ ಸ್ಥಾನ ಪಡೆದ ನಾಪೋಕ್ಲುವಿನ ಮಧುಸೂಧನ್ ಬಿಳಿಗುಲಿ, ತೃತಿಯ ಸ್ಥಾನ ಪಡೆದ ಮೂರ್ನಾಡಿನ ಕಿಗ್ಗಾಲು ಗಿರೀಶ್ ಅವರಿಗೆ ಬಹುಮಾನ ನೀಡಲಾಯಿತು.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುಕ್ಕಾಟಿರ ಜಾನಕಿ ಕಾವೇರಪ್ಪ, ಪ್ರಭು, ವಿಜಯಲಕ್ಷ್ಮೀ ಪೌಢಶಾಲೆ ಮುಖ್ಯೋಪಾಧ್ಯಾಯ ಕೆ.ಚಂದ್ರಶೇಖರ್, ಕಿರದಂಡ ದೇವಯ್ಯ, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ವಿ.ರಾಮಕೃಷ್ಣ ಮತ್ತು ಶೀಲಾ ಬೋಪಣ್ಣ ಬಾಳೆಲೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಿ.ವಿ.ಚಂದ್ರಕಲಾ ಉಪಸ್ಥಿತರಿದ್ದರು.