ಎನ್.ಆರ್.ಪುರ ತಾಪಂನಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇಒ ಎಚ್.ಡಿ.ನವೀನ್‌ಕುಮಾರ್, ರೋಹಿಣಿ, ಎನ್.ಎಲ್.ಮನೀಶ, ಭರತ್, ಸುಬ್ರಹ್ಮಣ್ಯ ಇತರರಿದ್ದರು. 
ಜಿಲ್ಲೆ

ಲೋಕೋಸ್ ತಂತ್ರಾಂಶದಲ್ಲಿ ಮಾಹಿತಿ ಸಂಗ್ರಹ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಎನ್‌ಆರ್‌ಎಲ್‌ಎಂ ಯೊಜನೆಯಡಿಯ ಸ್ವ ಸಹಾಯ ಸಂಘಗಳ ಹಣ ಹಾಗೂ ಸದಸ್ಯರ ಮಾಹಿತಿಯನ್ನು ಲೋಕೋಸ್ ತಂತ್ರಾಂಶದ ಮೂಲಕ ದಾಖಲಿಸಲಾಗುತ್ತಿದೆ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಹೇಳಿದರು.

ಬುಧವಾರ ತಾಪಂನಲ್ಲಿ ನಡೆದ ಎನ್‌ಆರ್‌ಎಲ್‌ಎಂ ಯೋಜನೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಲೋಕೋಸ್ ತಂತ್ರಾಂಶದ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಮಂತ್ರಾಲಯದ ಮಾರ್ಗಸೂಚಿಯಂತೆ ಲೋಕೋಸ್ ಎಂಬ ಮೊಬೈಲ್ ಅಪ್ಲಿಕೇಷನ್ ತಂತ್ರಾಂಶದಲ್ಲಿ ಎನ್‌ಆರ್‌ಎಲ್‌ಎಂ ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರ ವಿವರವನ್ನು ಆಧಾರ್ ಸಂಖ್ಯೆ ಸಹಿತ ದಾಖಲಿಸಲಾಗುತ್ತಿದೆ ಎಂದರು.
ವಾರ್ಡ್ ಮತ್ತು ಗ್ರಾಪಂ ಮಟ್ಟದ ಒಕ್ಕೂಟಗಳ ವಿವರವನ್ನು ತಂತ್ರಾಂಶದಲ್ಲಿ ಕಾಲಮಿತಿಯೊಳಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ದಾಖಲಿಸಬೇಕು. ಈ ಸಂಬಂಧ ಮೂರು ದಿನಗಳ ತರಬೇತಿ ನೀಡಲಾಗಿದೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯವನ್ನು ಹೊರೆ ಎಂದು ಭಾವಿಸದೆ ಸಮಯಕ್ಕೆ ಸರಿಯಾಗಿ ಎಲ್ಲ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸುವುದರ ಮೂಲಕ ತಾಲೂಕನ್ನು ಮೊದಲನೇ ಸ್ಥಾನಕ್ಕೆ ತರಬೇಕೆಂದು ಹೇಳಿದರು.
ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಕಾರ್ಯದರ್ಶಿ ರೋಹಿಣಿ ಮಾತನಾಡಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ಅಧಿಕ ಕಾರ್ಯ ವಹಿಸಲಾಗುತ್ತಿದೆ. ಈಗ ನೀಡುತ್ತಿರುವ ಗೌರವಧನ ಸಾಕಾಗುವುದಿಲ್ಲ. ಆದ್ದರಿಂದ ಗೌರವಧನ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.
ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಪಡೆದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ, ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಉಪಾಧ್ಯಕ್ಷೆ ಶಿಬಿಮರಿಯಮ್ಮ, ಕಾರ್ಯದರ್ಶಿ ರೋಹಿಣಿ, ಚಿಕ್ಕಮಗಳೂರು ಎನ್‌ಆರ್‌ಎಲ್‌ಎಂ ಯೋಜನೆಯ ಡಿಎಂಎಂಯು ಭರತ್, ಜಿಲ್ಲಾ ಕೌಶಲ ಅಧಿಕಾರಿ ರಾಜೇಶ್, ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ, ಚೇತನ್, ಗಿರೀಶ್, ಕಿಶೋರ್‌ಕುಮಾರ್, ಎನ್.ವಿ.ಶೈನಿ, ಶ್ವೇತಾ ಇತರರಿದ್ದರು.