ಜಿಲ್ಲೆ

ಕರಾವಳಿಯ 73 ಸಂಸ್ಥೆಗಳಿಗೆ ಮತ್ತೆ ‘ದಾಸೋಹ’ ಭಾಗ್ಯ ನಿರೀಕ್ಷೆ

ವೇಣುವಿನೋದ್ ಕೆ.ಎಸ್. ಮಂಗಳೂರು

ದಾಸೋಹ ಯೋಜನೆಯಡಿ ರಾಜ್ಯ ಸರ್ಕಾರ ಆಹಾರ ಧಾನ್ಯ ಪೂರೈಕೆಯನ್ನು ಕಳೆದ ನವೆಂಬರ್‌ನಿಂದ ಸ್ಥಗಿತಗೊಳಿಸಿದ್ದ ಕಲ್ಯಾಣ ಸಂಸ್ಥೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 52 ಹಾಗೂ ಉಡುಪಿಯ 21 ಸಂಸ್ಥೆಗಳೂ ಸೇರಿದ್ದವು.

ರಾಜ್ಯ ಸರ್ಕಾರದ ಈ ಆಹಾರಧಾನ್ಯ ಪೂರೈಕೆ ಸ್ಥಗಿತ ಆದೇಶಕ್ಕೆ ಪ್ರಬಲ ವಿರೋಧ ಬಂದ ಕೂಡಲೇ ಆದೇಶವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಮತ್ತೆ ಸಂಸ್ಥೆಗಳಿಗೆ ಆಹಾರ ಪೂರೈಕೆಯಾಗಲಿದೆ.

ಮಂಗಳೂರಿನ ಸಂತ ಜೋಸೆಫ್ ಪ್ರಶಾಂತ ನಿವಾಸ, ಬೆಳ್ತಂಗಡಿಯ ಸಿಯೋನ್ ಆಶ್ರಮ, ಕನ್ಯಾಡಿ ಸದ್ಗುರು ನಿತ್ಯಾನಂದ ಮಕ್ಕಳ ಅನಾಥಾಶ್ರಮ, ಬಂಟ್ವಾಳದ ದಾರುಲ್ ಇರ್ಶಾದ್, ಪುತ್ತೂರು ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ ಕಳೆದ ಒಂದೂವರೆ ವರ್ಷದಿಂದ ಆಹಾರ ಪೂರೈಕೆಯಾಗುತ್ತಿತ್ತು.

ಯು.ಟಿ.ಖಾದರ್ ಆಹಾರ ಸಚಿವರಾಗಿದ್ದಾಗ ಈ ಆದೇಶ ಹೊರಡಿಸಿ ಕಲ್ಯಾಣ ಸಂಸ್ಥೆಗಳಿಗೂ ಅಕ್ಕಿ ಹಾಗೂ ಗೋಧಿ ವಿತರಿಸುವಂತೆ ಸೂಚಿಸಿದ್ದು, ಅದರಂತೆ ಆಗ ಇಲಾಖೆಗೆ ಬೇಡಿಕೆ ಪತ್ರಗಳು ಬಂದಿದ್ದವು. ಅನೇಕ ನೋಂದಾಯಿತ, ನೋಂದಣಿಯಾಗದ ಸಂಸ್ಥೆಗಳು ಅರ್ಜಿ ಹಾಕಿದ್ದವು, ಅಂತಿಮವಾಗಿ ಅವುಗಳಲ್ಲಿ ಅಧಿಕೃತವೆನಿಸಿದ ಅರ್ಹ ಸಂಸ್ಥೆಗಳಿಗೆ ಆಹಾರ ವಿತರಣೆಗೆ ನಿರ್ಧರಿಸಲಾಗಿತ್ತು.

ಈ ವ್ಯವಸ್ಥೆಯಲ್ಲಿ ಮೋಸ ಮಾಡುವುದಕ್ಕೆ ಅವಕಾಶವಿಲ್ಲ. ಯಾಕೆಂದರೆ ಸಂಸ್ಥೆಯಲ್ಲಿರುವ ನಿವಾಸಿಗಳ ಆಧಾರ್ ಸಂಖ್ಯೆ ಪಡೆಯಲಾಗಿತ್ತು. ಅದರ ಆಧಾರದಲ್ಲಿ ಆಯಾ ಸಂಸ್ಥೆಯಲ್ಲಿನ ನಿವಾಸಿಗಳಿಗೆ ತಲಾ 10 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿ ನೀಡಲಾಗುತ್ತಿತ್ತು.

ಇದಕ್ಕೆ ಆನ್‌ಲೈನ್ ಮೂಲಕವೇ ಪ್ರತಿ ಸಂಸ್ಥೆಯವರು ಲಾಗಿನ್ ಆಗಿ ಬೇಡಿಕೆ ಸಲ್ಲಿಸಬೇಕಿದ್ದು, ಆಯಾ ಸಂಸ್ಥೆಯ ಮೇಲಿನ ಇಲಾಖೆ(ಉದಾಹರಣೆಗೆ ಅಲ್ಪಸಂಖ್ಯಾತ ಇಲಾಖೆ, ವಿಕಲಚೇತನರ ಇಲಾಖೆ) ಅಧಿಕಾರಿಗಳು ನಿಯಂತ್ರಣಾಧಿಕಾರಿಗಳು ಅದನ್ನು ಅನುಮೋದಿಸಿ ಆಹಾರ ಇಲಾಖೆ ಉಪನಿರ್ದೇಶಕರಿಗೆ ಫಾರ್ವರ್ಡ್ ಮಾಡುತ್ತಿದ್ದರು. ಅದನ್ನು ಉಪನಿರ್ದೇಶಕರು ಆಯಾ ತಿಂಗಳಿಗೆ ಇಷ್ಟು ಪ್ರಮಾಣದ ಆಹಾರ ಒದಗಿಸುವಂತೆ ಆಹಾರ ಇಲಾಖೆ ಆಯುಕ್ತರಿಗೆ ಬೇಡಿಕೆ ಸಲ್ಲಿಸುತ್ತಿದ್ದರು. ಆಯುಕ್ತರಿಂದಲೂ ಅನುಮೋದನೆಗೊಂಡು ಆಯಾ ತಿಂಗಳಿನ ಆಹಾರ ಧಾನ್ಯದ ಒದಗಣೆ ಗೋದಾಮಿಗೆ ಬರುತ್ತಿದ್ದು, ಅಲ್ಲಿಂದ ಸಂಬಂಧಿತ ಸಂಸ್ಥೆಯವರು ಅದನ್ನು ಪಡೆದುಕೊಳ್ಳುತ್ತಿದ್ದರು.

ಆದರೆ ಅಕ್ಟೋಬರ್‌ನಲ್ಲಿ ಸರ್ಕಾರದ ಆದೇಶದಂತೆ ಸಂಸ್ಥೆಗಳಿಗೆ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳಿಸಲಾಗಿದೆ. ಈಗ ಮತ್ತೆ ಸರ್ಕಾರ ಆಹಾರ ವಿತರಣೆಗೆ ನಿರ್ಧರಿಸಿರುವುದರಿಂದ ಆಹಾರ ಪೂರೈಕೆ ಮುಂದುವರಿಯುವ ನಿರೀಕ್ಷೆ ಇದೆ.

3300 ನಿವಾಸಿಗಳಿಗೆ ಆಹಾರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 52 ಸಂಸ್ಥೆಗಳ 3,300 ನಿವಾಸಿಗಳಿಗೆ ತಲಾ 10 ಕೆ.ಜಿ.ಯಂತೆ 33,000 ಕೆ.ಜಿ ಅಕ್ಕಿ ಹಾಗೂ ತಲಾ 5 ಕೆ.ಜಿ.ಯಂತೆ 16,500 ಕೆ.ಜಿ ಗೋಧಿ ವಿತರಣೆಯಾಗುತ್ತಿತ್ತು. ಇದರಲ್ಲಿ ಸರ್ಕಾರದ ಅಧೀನದಲ್ಲಿ ಬರುವ ಮಂಗಳೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರ ಹಾಗೂ ಬಾಲವಿಕಾಸ ಕೇಂದ್ರದ ನಿವಾಸಿಗಳಿಗೆ ಮಾತ್ರ ಆಧಾರ್ ಕಾರ್ಡ್ ಇಲ್ಲದೆ ಆಹಾರ ನೀಡಲಾಗುತ್ತಿದೆ. ಇಲ್ಲಿ ಬರುವವರು ನಿರಾಶ್ರಿತರೂ, ಭಿಕ್ಷೆ ಬೇಡುವವರೂ ಆಗಿದ್ದು ಅವರ ಸಂಖ್ಯೆ ಏರಿಳಿತ ಆಗುತ್ತಿರುತ್ತದೆ. ಉಳಿದಂತೆ ಇತರ 50 ಸಂಸ್ಥೆಗಳೂ ಖಾಸಗಿ ಕಲ್ಯಾಣ ಸಂಸ್ಥೆಗಳು.ಚ್ಟ........... ರಿಯಾಯಿತಿ ದರದಲ್ಲಿ ಪಡೆಯಲೂ ಸಿದ್ಧವಿದ್ದ ಸಂಸ್ಥೆ: ಜಿಲ್ಲೆಯಲ್ಲಿ ಈ ಆಹಾರಧಾನ್ಯ ನೀಡುತ್ತಿದ್ದುದು ಬಹಳಷ್ಟು ಸಂಸ್ಥೆಗಳಿಗೆ ನೆರವಾಗಿತ್ತು. ಹಾಗಾಗಿ ಸ್ಥಗಿತಕ್ಕೆ ಆದೇಶ ಬಂದಾಗ ರಿಯಾಯಿತಿ ದರದಲ್ಲಾದರೂ ಆಹಾರಧಾನ್ಯ ನೀಡುವಂತೆ ಕೋರಿಕೊಂಡಿದ್ದವು. ಉಚಿತದ ಬದಲು ಕಿಲೊಗೆ 3-4 ರೂ. ನೀಡಲು ಸಂಸ್ಥೆಗಳು ಸಿದ್ಧವಿದ್ದವು ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯಲ್ಲಿ 21 ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ ಸರಬರಾಜು ಆಗುತ್ತಿತ್ತು. ಡಿಸೆಂಬರ್‌ನಲ್ಲಿ ಸರ್ಕಾರದ ಆದೇಶದಂತೆ ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಅಧೀನ ಸಂಸ್ಥೆಗಳಿಗೆ ಮಾತ್ರ ಪಡಿತರ ನೀಡಲು ಸೂಚನೆ ಬಂದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಶೇಷ ಚೇತನರ ಇಲಾಖೆ ವ್ಯಾಪ್ತಿಯ 2 ಸಂಸ್ಥೆಗಳಿಗೆ ಮಾತ್ರ ಅಕ್ಕಿ par ಪೂರೈಸಲಾಗುತ್ತಿದೆ. - ಕುಸುಮಾಧರ್, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಉಡುಪಿ ಕೇಂದ್ರ ಸರ್ಕಾರ ನೀಡುವ 3 ರೂ.ನ ಅಕ್ಕಿಯಲ್ಲಿ ಶೇ.5ನ್ನು ಸೇವಾ ಚಟುವಟಿಕೆಗಳಿಗೆ ಬಳಸುವುದಕ್ಕೆ ಅವಕಾಶವಿದೆ, ಅದನ್ನು ಬಳಸಿಕೊಂಡು ನಮ್ಮ ರಾಜ್ಯದಲ್ಲಿ ಉಚಿತವಾಗಿ ವಸತಿ, ಊಟ ನೀಡುತ್ತಿರುವ ಸಂಸ್ಥೆಗಳಿಗೆ ಅಕ್ಕಿ, ಗೋಧಿ ಉಚಿತವಾಗಿ ನೀಡುವುದಕ್ಕೆ ನಾನು ಹಾಗೂ ಆಯುಕ್ತರಾಗಿದ್ದ ಹರ್ಷ ಗುಪ್ತ ನಿರ್ಧರಿಸಿದ್ದೆವು. ದುರ್ಬಳಕೆಯಾಗದಂತೆ ಯೋಜನೆ ರೂಪಿಸಿ ಅದಕ್ಕೆ ದಾಸೋಹ ಎಂಬ ಹೆಸರಿಟ್ಟಿದ್ದೆವು. ವೆಚ್ಚ ಕಡಿತ ಹೆಸರಿನಲ್ಲಿ ಸರ್ಕಾರ ಸಂಸ್ಥೆಗಳಿಗೆ ಅಕ್ಕಿ, ಗೋಧಿ ನೀಡುವುದನ್ನು ನಿಲ್ಲಿಸಿದ್ದು ಖಂಡನೀಯ. ಸರ್ಕಾರ ಯೋಜನೆ ಮುಂದುವರಿಸಲು ಆದೇಶಿಸಿದ್ದು ಸ್ವಾಗತಾರ್ಹ. -ಯು.ಟಿ.ಖಾದರ್, ಮಾಜಿ ಆಹಾರ ಸಚಿವ