ವಿಜಯವಾಣಿ ಸುದ್ದಿಜಾಲ ವಿಜಯಪುರ
ಶ್ರೀ ಸಿದ್ಧಗಂಗಾ ಕ್ಷೇತ್ರ ಸಿದ್ಧಪುರುಷರು ಸಂಚರಿಸಿದ ನೆಲಬೀಡಾಗಿದ್ದು, ಶ್ರೀ ಶಿವಕುಮಾರ ಸ್ವಾಮೀಜಿ ಬಸವಣ್ಣವರ ಭಕ್ತಿ, ಬುದ್ಧನ ಕಾರುಣ್ಯ, ಸರ್ವಸಮಾನತೆ, ಕಾಯಕತತ್ವ, ಗಾಂಧಿ ಅವರಂತೆ ಸತ್ಯನಿಷ್ಠ ಮತ್ತು ಸರಳತೆ, ಕೆಂಪೇಗೌಡರಂತೆ ಅನ್ನದಾಸೋಹ, ಶಿಕ್ಷಣಾಭಿವೃದ್ಧಿ, ರಾಷ್ಟ್ರನಿರ್ಮಾಣಕ್ಕೆ ಶ್ರಮಿಸಿ ಮಹಾಸಂತರಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನಬಳಗ ಸೇವಾಟ್ರಸ್ಟ್, ಶರಣಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿ, ದಾಸೋಹ ದಿನಾಚರಣೆ, ಶ್ರೀ ಜ್ಞಾನಾಶ್ರಮದ ಶ್ರೀ ಸಿದ್ದೇಶ್ವರಸ್ವಾಮಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
21ನೇ ಶತಮಾನದಲ್ಲಿ ಜರುಗಿದ ಕಲ್ಯಾಣ ಕ್ರಾಂತಿಯಂತೆಯೇ ಅಲ್ಲಮಪ್ರಭುದೇವರ ಅಧ್ಯಾತ್ಮಗುಣ, ಬಸವಣ್ಣವರ ದಾಸೋಹಂಭಾವನೆ, ಚನ್ನಬಸವಣ್ಣನಂತೆ ಅಪೂರ್ವ ಜ್ಞಾನ, ಕಾಯಕಗಳ ಆಧುನಿಕ ಪ್ರತಿರೂಪದಂತಿದ್ದರು. ಜಗತ್ತಿನ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ನೈತಿಕ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಶ್ರೀ ವೀರೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ಅನಿಲ್‌ಕುಮಾರ್ ಮಾತನಾಡಿ, ವಿಜಯಪುರದ ಶ್ರೀ ಜ್ಞಾನಾಶ್ರಮದ ಶ್ರೀ ಸಿದ್ದೇಶ್ವರಸ್ವಾಮಿ ನೀಡಿದ ಆಧ್ಯಾತ್ಮಿಕ ಪ್ರವಚನಗಳಲ್ಲಿ ಚಿಂತನೆ, ಸರಳತೆ, ಯೋಗದ ಅನುಭವಗಳು, ಸಹಾನುಭೂತಿ ತುಂಬಿರುತ್ತಿತ್ತು ಎಂದರು.
ಶ್ರೀ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನಬಳಗ ಸೇವಾಟ್ರಸ್ಟ್ ಅಧ್ಯಕ್ಷ ಸಿ.ಬಸಪ್ಪ ಮಾತನಾಡಿ, ಶಿವಕುಮಾರ ಶ್ರೀಗಳು ಮತ್ತು ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಎಲ್ಲ ದಾರ್ಶನಿಕರು, ತತ್ವಜ್ಞಾನಿಗಳ ಆದರ್ಶಗಳನ್ನು ಕ್ರಿಯಾರೂಪದಲ್ಲಿ ಕಾರ್ಯರೂಪಕ್ಕೆ ತಂದು ಈ ಶತಮಾನದ ನಡೆದಾಡುವ ಕಣ್ಣಿಗೆ ಕಾಣುವ ದೇವರಾಗಿದ್ದಾರೆ ಎಂದರು.
ಪೌರಾಡಳಿತ ಇಲಾಖೆ ನಿವೃತ್ತ ಆಯುಕ್ತ ವಿ.ಶಿವಕುಮಾರ್, ಮುಖಂಡರಾದ ಎಂ.ಶಿವಪ್ರಸಾದ್, ಎಸ್.ಪ್ರಕಾಶ್, ಪವನ್, ಅರಿವಿನಮನೆಯ ಸದಸ್ಯರಾದ ಮೀನಾ, ಮಹದೇವಮ್ಮ, ಪಾರ್ವತಮ್ಮ, ರಾಷ್ಟ್ರೀಯ ಬಸವದಳದ ಸದಸ್ಯರಾದ ಮ.ಜಯದೇವ್, ಬಾಲಗೋಕುಲದ ಕೃಷ್ಣಪ್ಪದಾಸರು, ಮಹದೇವ್, ಕವಿ ಮೂರ್ತೀಶ್ವರಯ್ಯ, ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರಹಡಪದ್, ಮತ್ತಿತರರು ಇದ್ದರು.