ಜಿಲ್ಲೆ

ದೇವಲೋಕಕ್ಕೆ ಕರೆದೊಯ್ದ ದಶಮಂಟಪಗಳು

ಮಡಿಕೇರಿ: ಮಡಿಕೇರಿ ಜನೋತ್ಸವದ ಶೋಭಯಾತ್ರೆಯಲ್ಲಿ ಶ್ರೀ ಕೋದಂಡ ರಾಮ ದೇವಾಲಯ ಪ್ರಥಮ ಸ್ಥಾನ ಪಡೆದರೆ, ಶ್ರೀ ಕೋಟೆ ಮಹಾ ಗಣಪತಿ ದೇವಾಲಯ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದ್ವಿತೀಯ, ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯದ ಮಂಟಪ ತೃತೀಯ ಸ್ಥಾನ ಪಡೆದಿದೆ.


ನಗರದ ಮುಖ್ಯ ಬೀದಿಗಳಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾದ ೧೦ ಮಂಟಪಗಳ ಮೆರವಣಿಗೆ ಹಾಗೂ ಪೌರಾಣಿಕ ಕಥಾ ಪ್ರಸಂಗ ಆಧಾರಿತ ಕಲಾಕೃತಿಗಳ ಶೋಭಾಯಾತ್ರೆ ಬುಧವಾರ ಮುಂಜಾನೆವರೆಗೆ ನಡೆಯಿತು. ಪ್ರತಿಯೊಂದು ದೇವಾಲಯ ಮಂಟಪ ಸಮಿತಿಗಳು ೨ ಟ್ರ್ಯಾಕ್ಟರ್ ಬಳಸಿ ೧೫ಕ್ಕೂ ಹೆಚ್ಚಿನ ಕಲಾಕೃತಿಗಳಿಂದ ಕಥೆಗೆ ತಕ್ಕಂತೆ ಚಲನೆ ಮಾಡಲಾಯಿತು. ಕಥಾ ಸಾರಾಂಶ ಕಲಾಕೃತಿ, ಪ್ರಭಾವಳಿ ಸ್ಟುಡಿಯೋ, ಚಾಲನೆಗೆ ೨ ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಧ್ವನಿ ಮುದ್ರಣ-ಶುಚಿತ್ವ-ಸಮಯಪಾಲನೆ ಆಲಿಸಿ ನಗರ ದಸರಾ ಸಮಿತಿ ವತಿಯಿಂದ ವರ್ಷಂಪ್ರತಿ ಪ್ರಶಸ್ತಿ ಹಾಗೂ ಚಿನ್ನದ ನಾಣ್ಯ ವಿತರಿಸಲಾಯಿತು. ಅಂತೆಯೇ ಪ್ರಸಕ್ತ ವರ್ಷದ ಪ್ರಶಸ್ತಿಯನ್ನು ಕ್ರಮವಾಗಿ ಕೋದಂಡ ರಾಮ ದೇವಾಲಯ, ಶ್ರೀ ಕೋಟೆ ಮಹಾ ಗಣಪತಿ ದೇವಾಲಯ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ಮೂರನೇ ಸ್ಥಾನ ಪಡೆದುಕೊಂಡಿತು.


ಶ್ರೀ ಕೋದಂಡ ರಾಮ ದೇವಾಲಯ(ಪ್ರಥಮ ಸ್ಥಾನ): ೪೯ನೇ ವರ್ಷದ ದಸರಾ ಉತ್ಸವ ಆಚರಣೆಯಲ್ಲಿರುವ ಮಡಿಕೇರಿಯ ಶ್ರೀ ಕೋದಂಡ ದೇವಾಲಯದ ವತಿಯಿಂದ ಈ ಬಾರಿ ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನ ಎಂಬ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು. ಮಂಟಪ ನಿರ್ಮಾಣಕ್ಕಾಗಿ ಸುಮಾರು ೨೦ ಲಕ್ಷ ರೂ. ವೆಚ್ಚಮಾಡಲಾಗಿತ್ತು. ಮಂಟಪದಲ್ಲಿ ಒಟ್ಟು ೨೫ ಕಲಾಕೃತಿಗಳನ್ನು ಅಳವಡಿಸಲಾಗಿತ್ತು. ದಸರಾ ಸಮಿತಿಯಲ್ಲಿ ಸುಮಾರು ೩೦೦ ಮಂದಿ ಸದಸ್ಯರು ಕಾರ್ಯನಿರ್ವಹಿಸಿದರು.


ಶ್ರೀ ಕೋಟೆ ಮಹಾಗಣಪತಿ ದೇವಾಲಯ(ದ್ವಿತೀಯ ಸ್ಥಾನ): ಮಡಿಕೇರಿ ೪೭ನೇ ವರ್ಷದ ದಸರಾ ಉತ್ಸವದಲ್ಲಿರುವ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು. ಮಂಟಪಕ್ಕಾಗಿ ಸುಮಾರು ೩೧.೫ ಲಕ್ಷ ರೂ ವೆಚ್ಚ ಮಾಡಲಾಗಿದ್ದು, ಮಂಟಪದಲ್ಲಿ ೩೦ ಕಲಾಕೃತಿಗಳು ಗಮನ ಸೆಳೆದವು. ದೇವಾಲಯ ಸಮಿತಿಯಲ್ಲಿ ಸುಮಾರು ೩೭೨ ಮಂದಿ ಸದಸ್ಯರಿದ್ದು, ಮಂಟಪಕ್ಕೆ ಹೆಚ್ಚಿನ ಮೆರುಗನ್ನ ನೀಡಿದರು. ಸೌಂಡ್ಸ್ ಸೆಟ್ಟಿಂಗ್, ಆರ್ಚ್ ಬೋರ್ಡ್ ವ್ಯವಸ್ಥೆ ಚಲನವಲನ ಹಾಗೂ ಫ್ಲಾರ್ಟ್ ಫಾರಂ ಸೆಟ್ಟಿಂಗ್ ಗಮನ ಸೆಳೆದರೆ, ಕಲಾಕೃತಿಗಳಿಗೆ ನೀಡಿದ ವಿಶೇಷ ಎಫೆಕ್ಟ್ ಗಮನ ಸೆಳೆಯಿತು.


ಶ್ರೀ ಕೋಟೆ ಮಾರಿಯಮ್ಮ ದೇವಾಲಯ(ದ್ವಿತೀಯ ಸ್ಥಾನ): ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಸಮಿತಿಯಿಂದ ೪೮ನೇ ವರ್ಷದ ಪ್ರಯುಕ್ತ ಪಂಚಮುಖಿ ಆಂಜನೇಯನಿಂದ ಅಹಿರಾವಣ-ಮಹಿರಾವಣ ವಧೆ ಕಥಾ ಸಾರಾಂಶ ಅಳವಡಿಸಲಾಗಿತ್ತು. ಮಂಟಪಕ್ಕಾಗಿ ಸುಮಾರು ರೂ.೨೫ ಲಕ್ಷ ವೆಚ್ಚ ಮಾಡಲಾಗಿದ್ದು, ಮಂಟಪದಲ್ಲಿ ಒಟ್ಟು ೧೭ ಕಲಾಕೃತಿಗಳನ್ನು ಬಳಸಿ ಪ್ರದರ್ಶನ ನೀಡಲಾಯಿತು. ಫಯರ್ ಎಫೆಕ್ಟ್, ಲೈಟಿಂಗ್, ಸೌಂಡ್ಸ್ ಗಮನ ಸೆಳೆಯಿತು.


ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ(ತೃತೀಯ ಸ್ಥಾನ): ೨೮ನೇ ವರ್ಷದ ದಸರಾ ಸಂಭ್ರಮದಲ್ಲಿ ನಗರದ ಶ್ರೀ ಕರವರೆ ಭಗವತಿ ಮಹಿಷ ಮರ್ಧಿನಿ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ ಉಗ್ರ ನರಸಿಂಹನಿಂದ ಹಿರಣ್ಯಕಶ್ಯಪು ವಧೆ ಕಥಾ ಸಾರಾಂಶ ಪ್ರಸ್ತುತ ಪಡಿಸಿದೆ. ಮಂಟಪ ಸುಮಾರು ರೂ.೨೨ ಲಕ್ಷ ವೆಚ್ಚ ಮಾಡಲಾಗಿದ್ದು, ಮಂಟಪದ ಕಥೆಯನ್ನು ಸಮಿತಿಯೇ ನಿರ್ದೇಶಿಸಿತ್ತು. ಮಂಟಪದಲ್ಲಿ ಒಟ್ಟು ೨೧ ಕಲಾಕೃತಿಗಳನ್ನು ಬಳಸಿಕೊಳ್ಳಲಾಗಿದ್ದು, ಸಮಿತಿಯಲ್ಲಿ ೩೫೦ ಸದಸ್ಯರಿದ್ದರು.

ಪ್ರಥಮಸ್ಥಾನಕ್ಕೆ ೨೪ ಗ್ರಾಂ ಚಿನ್ನ
ನಗರ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶೋಭಾಯಾತ್ರೆಯಲ್ಲಿ ಮೊದಲ ಸ್ಥಾನ ಪಡೆದ ಮಂಟಪ ಸಮಿತಿಗೆ ೨೪ ಗ್ರಾಂ ಚಿನ್ನ, ದ್ವಿತೀಯ ಬಹುಮಾನ ೨೦ ಗ್ರಾಂ ಚಿನ್ನ, ತೃತೀಯ ಬಹುಮಾನ ೧೬ ಗ್ರಾಂ ಚಿನ್ನ ಬಹುಮಾನವಾಗಿ ನೀಡಲಾಯಿತು.

ಶ್ರೀ ಪೇಟೆ ಶ್ರೀರಾಮ ಮಂದಿರ ಮಂಟಪ
ಮಡಿಕೇರಿ ದಸರಾ ಜನೋತ್ಸವದಲ್ಲಿ ಪೇಟೆ ಶ್ರೀ ರಾಮ ಮಂದಿರ ಮುಖ್ಯಪಾತ್ರ ವಹಿಸುತ್ತದೆ. ಈ ಬಾರಿಯ ಮಂಟಪದಲ್ಲಿ ವೈಕುಂಠ ದರ್ಶನ ಎಂಬ ಸಾರಂಶ ಅಳವಡಿಸಲಾಗಿದ್ದು, ೮ ಲಕ್ಷ ವೆಚ್ಚ ಮಾಡಲಾಗಿತ್ತು. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮೊದಲು ಹೊರಡುವ ಮಂಟಪ ಕೂಡ ಇದಾಗಿದೆ. ಸಮಿತಿ ೫೫ ಸದಸ್ಯರ ತಂಡದೊಂದಿಗೆ ಕೆಲಸ ನಿರ್ವಹಿಸಿದೆ. ವಿಜಯದಶಮಿಯಂದು ರಾತ್ರಿ ೭.೩೦ಕ್ಕೆ ಸರಿಯಾಗಿ ಶೋಭಾಯಾತ್ರೆಯ ಸಂದರ್ಭದಲ್ಲಿ ವೇಳೆ ಶ್ರೀ ರಾಮ ಮಂದಿರ ಮಂಟಪವು ಮೊದಲು ಹೊರಡುವ ಮೂಲಕ ನಾಲ್ಕು ಶಕ್ತಿ ದೇವತೆಗಳಾದ ಕುಂದುರು ದೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗಗಳನ್ನು ಆಹ್ವಾನಿಸಿತು. ಆ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ದಶ ಮಂಟಪಗಳ ಶೋಭಾಯಾತ್ರೆ ಆರಂಭಗೊಂಡಿತ್ತು.

ಶ್ರೀ ಚೌಡೇಶ್ವರಿ ದೇವಾಲಯ
ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ೬೧ನೇ ವರ್ಷದ ಪ್ರಯುಕ್ತ ಶ್ರೀ ಕಟೀಲು ಕ್ಷೇತ್ರ ಕಥಾ ಸಾರಾಂಶ ಅಳವಡಿಸಲಾಗಿತ್ತು. ಮಂಟಪಕ್ಕಾಗಿ ಸಮಾರು ೨೦ ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ತಂಡದಲ್ಲಿ ಸುಮಾರು ೨೦೦ ಸದಸ್ಯರಿದ್ದರು. ಈ ಬಾರಿ ಮಂಟಪವನ್ನು ವಿಶೇಷ ರೀತಿಯಲ್ಲಿ ಹೊರ ತರಲು ಸಮಿತಿ ಶ್ರಮಿಸಿತ್ತು. ಹಾಗೂ ಬಹುಮಾನಕ್ಕಾಗಿ ಹೆಚ್ಚು ವೆಚ್ಚ ಕೂಡ ಮಾಡಲಾಗಿತ್ತು. ಮಂಟಪದ ಬಹುತೇಕ ಕೆಲಸವನ್ನು ಸಮಿತಿಯ ಸದಸ್ಯರೇ ಮಾಡಿದ್ದರು.

ಶ್ರೀ ದಂಡಿನ ಮಾರಿಯಮ್ಮ ದೇಗುಲ
ಮಡಿಕೇರಿಯಲ್ಲಿ ೯೩ನೇ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯನ್ನು ದೇವಾಲಯ ದಸರಾ ಸಮಿತಿಯಿಂದ ಪರಶಿವನಿಂದ ಜಲಂಧರನ ಸಂಹಾರ ಎಂಬ ಕಥಾ ಸಾರಾಂಶ ಅಳವಡಿಸಲಾಗಿತ್ತು. ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ಮಂಟಪಕ್ಕೆ ಮೆರುಗು ನೀಡಲಾಗಿತ್ತು. ಕಳೆದ ಬಾರಿ ದಂಡಿನ ಮಾರಿಯಮ್ಮ ದೇವಾಲಯ ಸಮಿತಿಯ ಮಂಟಪ ದ್ವಿತೀಯ ಬಹುಮಾನ ಪಡೆಯುವುದರೊಂದಿಗೆ ಅಪಾರ ಜನ ಮೆಚ್ಚುಗೆಗಳಿಸಿತ್ತು. ಮಂಟಪದಲ್ಲಿ ಸುಮಾರು ೨೩ ಕಲಾಕೃತಿ ಬಳಸಲಾಗಿತ್ತು. ೧೫೦ಕ್ಕೂ ಅಧಿಕ ಸದಸ್ಯರು ತಂಡದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಶ್ರೀ ಕಂಚಿ ಕಾಮಾಕ್ಷಿ ದೇಗುಲ
ಕರಗ ದೇವತೆಗಳಲ್ಲಿ ಕಿರಿಯಕ್ಕಳೆಂದು ಕರೆಯಲಾಗುವ ನಗರದ ಗಳಿ ಬೀದಿಯ ಶ್ರೀ ಕಂಚಿಕಾಮಾಕ್ಷಿ ದೇವಾಲಯದ ವತಿಯಿಂದ ೧೦ನೇ ವರ್ಷದ ಉತ್ಸವ ಆಚರಣೆ ಅಂಗವಾಗಿ ಶಿವನಿಂದ ತ್ರಿಪುರಾಸುರನ ಸಂಹಾರ ಕಥಾ ಸಾರಾಂಶವನ್ನು ಪ್ರಸ್ತು ಪಡಿಸಲಾಯಿತು. ಈ ಬಾರಿ ವಿಶೇಷವಾಗಿ ಮಂಟದ ಹೊರ ತರಲು ಪ್ರಯತ್ನಿಸಿ, ಸಮಿತಿ ಸುಮಾರು ರು.೨೫ ಲಕ್ಷ ವೆಚ್ಚ ಮಾಡಿತ್ತು. ಮಂಟಪದಲ್ಲಿ ಸುಮಾರು ೩೦ ಕಲಾಕೃತಿಗಳನ್ನು ಬಳಸಲಾಗಿತ್ತು. ತಂಡದಲ್ಲಿ ಸುಮಾರು ೧೫೦ ಮಂದಿ ಸದಸ್ಯರು ಕಾರ್ಯ ನಿರ್ವಹಿಸಿದರು. ಫೈಯರ್‌ವರ್ಕ್, ಸೇಷಲ್ ಎಫೆಕ್ಟ್ ಕೂಡ ಆಕರ್ಷಕವಾಗಿತ್ತು. ಲೇಸರ್ ಶೋ ಪ್ರಮುಖ ಆಕರ್ಷಣೆಯಾಗಿತ್ತು.

ಶ್ರೀ ದೇಚೂರು ಶ್ರೀರಾಮ ಮಂದಿರ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳಲ್ಲೊಂದಾದ ದೇಚೂರು ಶ್ರೀ ರಾಮ ಮಂದಿರ ಮಂಟಪ ೧೦೫ನೇ ವರ್ಷದ ಉತ್ಸವದಲ್ಲಿ ಪಾಲ್ಗೊಂಡಿತ್ತು. ಸಮಿತಿಯಿಂದ ಈ ಬಾರಿ ವಿಷ್ಣುವಿನಿಂದ ಮಧು ಕೈಟಭರ ಸಂಹಾರ ಎಂಬ ಸಾರಾಂಶವನ್ನು ಅಳವಡಿಸಲಾಗಿದ್ದು, ಮಂಟಪಕ್ಕೆ ಸುಮಾರು ರೂ.೧೦ ಲಕ್ಷ ವೆಚ್ಚ ಮಾಡಲಾಯಿತು. ಮಂಟಪದಲ್ಲಿ ಒಟ್ಟು ೧೩ ಕಲಾಕೃತಿಗಳನ್ನು ಬಳಸಿಕೊಳ್ಳಲಾಯಿತು. ತಂಡದಲ್ಲಿ ೧೫೦ ಸದಸ್ಯರು ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ ತೀರ್ಪುಗಾರಿಕ ಪ್ರದರ್ಶನ ನೀಡುವ ಸಂದರ್ಭ ಕಲಾಕೃತಿಗಳು ಹಾನಿಗೊಳಗಾಯಿತು ಈ ಹಿನ್ನೆಲೆ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ ಕಳೆದ ಬಾರಿಯ ಸಾರಾಂಶವನ್ನೇ ಈ ಬಾರಿ ಕೂಡಾ ಮಂಟಪದಲ್ಲಿ ಅಳವಡಿಸಲಾಗಿತ್ತು.

ನೆಲಕ್ಕುರುಳಿದ ಶ್ರೀ ಕುಂದುರುಮೊಟ್ಟೆ ದೇಗುಲ

ಮಡಿಕೇರಿ ನಗರದ ನಾಲ್ಕುಶಕ್ತಿ ದೇವತೆಗಳಲ್ಲಿ ಹಿರಿಯಕ್ಕಳೆನಿಸಿರುವ ನಗರದ ರಾಜಾಸೀಟು ಸಮೀಪವಿರುವ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ ೫೦ನೇ ವರ್ಷದ ದಸರಾ ಉತ್ಸವಕ್ಕೆ ತಯರಾಗಿತ್ತು. ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ ೬ ರಿಂದ ೧೦ರ ವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ೨೬ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಸಜ್ಜುಗೊಳಿಸಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಶೋಭಾಯಾತ್ರೆಗೂ ಮುನ್ನ ಟ್ರಾಕ್ಟರ್ ನೆಲಕ್ಕುರುಳಿತ್ತು. ಆರ್ಚ್ ಬೋರ್ಡ್ ಸಹಿತ ದೇವಿ ಕಲಾಕೃತಿ ನೆಲಕ್ಕೆ ಬಿದ್ದ ಪರಿಣಾಮ ೭ ಜನರಿಗೆ ಗಾಯಗಳಾಗಿದೆ. ಇವರಲ್ಲಿ ಇಬ್ಬರು ಸಮಿತಿ ಸದಸ್ಯರು, ಒಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ ನಾಲ್ವರು ಸಾರ್ವಜನಿಕರಿಗೆ ಗಾಯಗಳಾಗಿದೆ. ಅವರಲ್ಲಿ ಸೆಂದಿಲ್‌ಕುಮಾರ್ ಎಂಬುವವರಿಗೆ ಎರಡೂ ಕಾಲುಗಳು ಮುರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಈ ಕುರಿತು ಟ್ರಾಕ್ಟರ್ ಚಾಲಕ ಜಯಕುಮಾರ್ ಎಂಬುವವರ ವಿರುದ್ಧ ಮಡಿಕೇರಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದ್ಧೂರಿಯಾಗಿ ಪ್ರದರ್ಶನಕ್ಕೆ ತಯರಾಗಿದ್ದ ಮಂಟಪ ಯಾವುದೇ ಪ್ರದರ್ಶನ ನೀಡದಿರುವುದು ಜನತೆಯಲ್ಲಿ ನಿರಾಸೆ ಮೂಡಿಸಿತು.