ಬಾಗಲಕೋಟೆ : ಪಂಡಿತರಿಗೆ ಅರ್ಥವಾಗುವ ರೀತಿಯಲ್ಲಿ ಕೃತಿಗಳ ರಚನೆ ಮತ್ತು ಜನ ಸಾಮಾನ್ಯರಿಗೆ ಅರ್ಥವಾಗಿಸಲು ಗೆಜ್ಜೆ ಕಟ್ಟಿ ಕೀರ್ತನೆಗಳನ್ನು ತಲುಪಿಸುವ ಮೂಲಕ ಭಕ್ತಿ ಪಂಥದ ದಾರ್ಶನಿಕರು ದಾಸ ಸಾಹಿತ್ಯದ ಮೆರಗು ಹೆಚ್ಚಿಸಿದ್ದಾರೆ ಎಂದು ಶಿಕ್ಷಣ ತಜ್ಞ, ಹರಿದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗುರುರಾಜ ಕರಜಗಿ ಹೇಳಿದರು.
ನವನಗರದ ಪ್ರಸನ್ನ ಮಾರುತಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್, ಶ್ರೀ ಪ್ರಸನ್ನ ವೆಂಕಟ ಕಲ್ಚರಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಮತ್ತು ಪ್ರಸನ್ನ ವೆಂಕಟ ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ‘ಶ್ರೀ ಪ್ರಸನ್ನವೆಂಕಟದಾಸರ ಕೃತಿಗಳ ಒಳನೋಟ ಮತ್ತು ಚಿಂತನೆ’ ಕುರಿತಾದ 12ನೇ ಒಂದು ದಿನದ ಹರಿದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
15ನೇ ಶತಮಾನದಲ್ಲಿ ಭಕ್ತಿ ಪಂಥ ಅನೇಕ ದಾರ್ಶನಿಕರನ್ನು ಕಂಡಿದೆ. ಅದರಲ್ಲೂ ವ್ಯಾಸರು ಅಗ್ರಗಣ್ಯರು. ಯಾವುದೇ ಕ್ಷೇತ್ರವನ್ನೂ ಪರಿಗಣಿಸಿದರೂ ಮಹೋನ್ನತ ವ್ಯಕ್ತಿಗಳು ಒಂದೇ ಅವಧಿಯಲ್ಲಿ ಬಂದು ಹೋಗುತ್ತಾರೆ. 15ನೇ ಶತಮಾನದಲ್ಲಿ ಭಕ್ತಿ ಪಂಥದ ದಾರ್ಶನಿಕರಲ್ಲಿ ಒಬ್ಬರಾದ ನಂತರ ಮತ್ತೊಬ್ಬರು ಮಹತ್ವದ ಕೊಡುಗೆ ನೀಡಿದೆ. 1900 ನೇ ಇಸವಿಯಿಂದ 1950ನೇ ಇಸವಿ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಬಂದು ಹೋದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು, ಮಾಸ್ತಿ, ಬೇಂದ್ರೆ ಸೇರಿ ಅನೇಕರು ಒಂದೇ ಅವಧಿಯಲ್ಲಿ ಬಂದು ಹೋದರು. ಈ ರೀತಿ ಒಂದೊಂದು ಕ್ಷೇತ್ರ ಆಯಾ ಕಾಲಘಟ್ಟದಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ ಎಂದು ವಿವರಿಸಿದರು.
ರಾಮನಷ್ಟೇ ನನಗೆ ವಾಲ್ಮೀಕಿಯೂ ಪ್ರಮುಖರು ಎನಿಸುತ್ತಾರೆ. ಮಹಾಭಾರತದಷ್ಟೇ ವ್ಯಾಸರು ಶ್ರೇಷ್ಠರು ಎಂದೆನಿಸುತ್ತಾರೆ. ಅವರು ರಾಮಾಯಣ, ಮಹಾಭಾರತದ ವಿಚಾರಗಳನ್ನು ನಮಗೆ ತಿಳಿಸದೆ ಹೋಗಿದ್ದರೆ ಅವುಗಳ ಮಹತ್ವವೇ ಅರ್ಥವಾಗುತ್ತಿರಲಿಲ್ಲ. ಪ್ರಸನ್ನ ವೆಂಕಟದಾಸರ ವಿಚಾರದಲ್ಲೂ ರೇಖಾ ಕಾಖಂಡಕಿ ಹಾಗೂ ಡಾ. ಸುಭಾಷ್ ಕಾಖಂಡಕಿ ಅವರ ಕೊಡುಗೆಗಳು ಅಷ್ಟೇ ಮಹತ್ವದಾಗಿದೆ ಪ್ರಸನ್ನ ವೆಂಕಟದಾಸರ ವಿಚಾರ-ಚಿಂತನೆಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯವನ್ನು ಈ ದಂಪತಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಪ್ರಸನ್ನ ವೆಂಕಟದಾಸರು ರಾಗತಾಳ ಸಹಿತ ಕೃತಿಗಳನ್ನು ರಚಿಸಿದ್ದಾರೆ. ಅವರ ಕೀರ್ತನೆಗಳು ಸಮಾಜಕ್ಕೆ ಇಂದಿಗೂ ಮಾರ್ಗದರ್ಶಿ. ದಾಸ ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರೊಬ್ಬರು ಬಾಗಲಕೋಟೆಯವರು ಎಂಬುದೇ ಹೆಮ್ಮೆ ತರುವ ವಿಚಾರ ಎಂದು ಹೇಳಿದರು.
ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ ಮಾತನಾಡಿ, ನಮ್ಮಲ್ಲಿರುವ ದುಡ್ಡು, ವಿದ್ಯೆಯನ್ನು ಇತರರಿಗಾಗಿ ಬಳಸಬೇಕೆಂದು ಶ್ರೀಕೃಷ್ಣ ಹೇಳಿದ್ದ. ಅದರಂತೆ ತಮ್ಮಲ್ಲಿರುವ ಜ್ಞಾನವನ್ನು ಗುರುರಾಜ ಕರಜಗಿ ಅವರು ಇತರರಿಗೆ ಹಂಚುತ್ತಿದ್ದಾರೆ. ಭಾರತೀಯ ಪರಂಪರೆ, ಸಂಸ್ಕೃತಿಯ ಮೌಲ್ಯಗಳನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಪ್ರಸನ್ನ ವೆಂಕಟದಾಸರ ಚಿಂತನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಹಿರಿಯ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಪ್ರಸನ್ನ ವೆಂಕಟ ಹರಿದಾಸ ಸಾಹಿತ್ಯ ರತ್ನ ಪ್ರಶಸ್ತಿ, ದತ್ತಾತ್ರೇಯ ರಾವ್ ಅವರಿಗೆ ಪ್ರಸನ್ನವೆಂಕಟ ದಾಸ ಸಾಹಿತ್ಯ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ. ರೇಖಾ ಕಾಖಂಡಕಿ ಅವರು ರಚಿಸಿರುವ ‘ಹಕ್ಕಿಯ ಹೆಗಲೇರಿ ಬಂದವಗೆ’, ಶ್ರೀ ಮಹಿಪತಿ ದಾಸರ ಮತ್ತು ಶ್ರೀ ಪ್ರಸನ್ನ ವೆಂಕಟದಾಸರ ಕೃತಿಗಳಲ್ಲಿ ಸಮಾಜಮುಖಿ ಚಿಂತನೆಗಳು ಹಾಗೂ ಪ್ರಸನ್ನ ವೆಂಕಟದಾಸರ ಸಾಹಿತ್ಯ ಚಿಂತನ-5 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಪಂ. ಬಿಂದು ಮಾಧವಾಚಾರ್ಯ ನಾಗಸಂಪಿಗೆ, ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಬಿವಿವಿ ಸಂಘದ ತಾಂತ್ರಿಕ ಸಲಹೆಗಾರ ಡಾ. ಆರ್.ಎನ್. ಹೆರಕಲ್, ವಿದ್ವಾನ್ ಅನಂತ ಕುಲಕರ್ಣಿ, ಡಾ. ಸುಭಾಷ್ ಕಾಖಂಡಕಿ, ರೇಖಾ ಕಾಖಂಡಕಿ, ಧ್ರುವಾಚಾರ್ಯ ಕಾಖಂಡಕಿ ಮತ್ತಿತರರು ವೇದಿಕೆಯಲ್ಲಿದ್ದರು.