ಜಿಲ್ಲೆ

ಸೆ೨೮, ೨೯ರಂದು ನಗರ ದಸರಾ ಕ್ರೀಡಾ ಕೂಟ

ಮಡಿಕೇರಿ: ದಸರಾ ಕ್ರೀಡಾ ಸಮಿತಿ ವತಿಯಿಂದ ತಾಲೂಕು ಮಟ್ಟದ ನಗರ ದಸರಾ ಕ್ರೀಡಾ ಕೂಟ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ೨೮, ೨೯ರಂದು ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ದುಗ್ಗಳ ಕಪಿಲ್ ತಿಳಿಸಿದರು.

ಸೆ೨೮ರಂದು ಬೆಳಗ್ಗೆ ೮.೩೦ ಗಂಟೆಗೆ ರಾಜರಾಜೇಶ್ವರಿ ಶಾಲಾ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಮಡಿಕೇರಿ ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳ ವಿಭಾಗದಲ್ಲಿ ಕಾಳು ಹೆರಕುವ ಸ್ಪರ್ಧೆ, ಸಾರ್ವಜನಿಕ ಪುರುಷ ಮತ್ತು ಮಹಿಳೆಯರಿಗೆ ಭಾರದ ಗುಂಡು ಎಸೆತ, ಹಗ್ಗ ಜಗ್ಗಾಟ, ಪುರುಷರಿಗೆ ನಿಧಾನ ದ್ವಿಚಕ್ರ ವಾಹನ ಚಾಲನೆ, ವಾಲಿಬಾಲ್, ಫೂಟ್ಬಾಲ್, ಮಹಿಳೆಯರಿಗೆ ಥ್ರೋಬಾಲ್, ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. ನಗರ ದಸರಾ ಸಮಿತಿಯ ಪುರುಷ ಮತ್ತು ಮಹಿಳೆಯರಿಗೆ ೧೦೦ ಮೀ. ಓಟದ ಸ್ಪರ್ಧೆ ಮತ್ತು ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.


ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಸೆ.೨೯ರಂದು ಬೆಳಗ್ಗೆ ೬.೩೦ ಗಂಟೆಗೆ ಮ್ಯಾರಥಾನ್ ಆರಂಭಗೊಳ್ಳಲಿದೆ. ಅಂದು ಬೆಳಗ್ಗೆ ೧೦.೩೦ ಗಂಟೆಗೆ ಕ್ರಿಕೆಟ್ ಪಂದ್ಯಾಟ ಆರಂಭಗೊಳ್ಳಲಿದೆ. ಪುರುಷರು, ದಸರಾ ಕ್ರೀಡಾ ಸಮಿತಿ, ಮಡಿಕೇರಿ ದಸರಾ ಸಮಿತಿ, ಪತ್ರಿಕಾ ಮಾಧ್ಯಮ, ಪೊಲೀಸ್, ಶಿಕ್ಷಕರು, ವಕೀಲರು, ಮೆಡಿಕಲ್, ಜಿಲ್ಲಾ ಪಂಚಾಯಿಯ ತಂಡಗಳಿಗೆ ಅವಕಾಶ ನೀಡಲಾಗಿದೆ. ಅ೨ರಂದು ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಮಹಿಳೆ ಮತ್ತು ಪುರುಷರಿಗೆ ಕಬ್ಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ರಾಜೀವ್, ಉಪಾಧ್ಯಕ್ಷ ನಯನ, ಗೌರವ ಸಲಹೆಗಾರ ಕೃಷ್ಣ, ಸದಸ್ಯರಾದ ನಿತಿನ್, ನಿರಂಜನ್ ಹಾಜರಿದ್ದರು.