ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸುಮಾ ಸೂಚಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿ ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಸರಾ ಕ್ರೀಡಾಕೂಟ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದರು. 2024-25 ನೇ ಸಾಲಿನ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟವನ್ನು ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗುತ್ತಿದೆ. ಇದಕ್ಕೆ ಬೇಕಾದಂತೆ ಪ್ರತ್ಯೇಕ ಸಿದ್ದತೆ ಮಾಡಿಕೊಳ್ಳಬೇಕು ಕ್ರೀಡಾ ಕೂಟವನ್ನು ಆಯೋಜಿಸಲು ಬೇಕಾಗಿರುವ ಎಲ್ಲ ಬಗೆಯ ಅಗತ್ಯ ಸಿದ್ಧತೆ ಕೈಗೊಂಡು ಕ್ರೀಡಾಕೂಟ ಯಶಸ್ವಿಯಾಗುವಂತೆ ನಿಗಾವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ದೊಡ್ಡಬಳ್ಳಾಪುರ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದ್ದು, ಈ ಕ್ರೀಡಾಕೂಟವು ಸೆ.27 ಮತ್ತು 28 ರಂದು ಎರಡು ದಿನಗಳ ಕಾಲ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಶಿಷ್ಠಾಚಾರದಂತೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಉದ್ಘಾಟಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಲ್ಕೂ ತಾಲೂಕುಗಳಲ್ಲಿ ಕ್ರೀಡಾಕೂಟ: ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ತಾಲೂಕು ಮಟ್ಟದಲ್ಲಿ ದಸರಾ ಕ್ರೀಡಾಕೂಟ ನಡೆಯಲಿದ್ದು, ಸೆ.25 ರಂದು ದೇವನಹಳ್ಳಿ ಟೌನ್‌ಕ್ರೀಡಾಂಗಣ, ದೊಡ್ಡಬಳ್ಳಾಪುರ ಭಗತ್‌ಸಿಂಗ್‌ಕ್ರೀಡಾಂಗಣ ಹಾಗೂ ಹೊಸಕೋಟೆ ತಾಲೂಕಿನಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ ಚಾಲನೆಗೊಳ್ಳಲಿದೆ. ಸೆ.24 ರಂದು ನೆಲಮಂಗಲ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಮುಂಜಾಗ್ರತೆ ಅವಶ್ಯಕ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸಂಘಟನೆಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೈಹಿಕ ಶಿಕ್ಷಕರ ಸೇವೆ ಆಯೋಜನೆ, ಆರೋಗ್ಯ ಇಲಾಖೆ ವತಿಯಿಂದ ಆ್ಯಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ ಮಾಡಬೇಕು, ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಎದುರಾದರೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ವೈದ್ಯ ಸಿಬ್ಬಂದಿ ಸಿದ್ದರಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲಾ, ತಾಲೂಕು ಹಾಗೂ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಬೇಕು, ಸಮಾರಂಭದಲ್ಲಿ ಕುಡಿಯುವ ನೀರು, ಉಟೋಪಹಾರ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಅಲರ್ಟ್ ಆಗಿರಬೇಕು ಎಂದು ತಾಕೀತು ಮಾಡಿದರು. ಕ್ರೀಡಾಂಗಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಉಪಹಾರ , ಊಟ ವಿತರಣೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು. ದಸರಾ ಕ್ರೀಡಾಕೂಟ ನಾಡಿನ ಹೆಮ್ಮೆಯ ಕ್ರೀಡಾಕೂಟವಾಗಿದ್ದು, ಅಧಿಕಾರಿಗಳು ಅವರಿಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.