ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವ ಸಂದರ್ಭ ಕುಶಾಲತೋಪು ಸಿಡಿಸಲು ಬಳಕೆ ಮಾಡುವ ಪಿರಂಗಿಗಳಿಗೆ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ಮಂಗಳವಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಜಂಬೂಸವಾರಿ ಮೆರವಣಿಗೆ ಸಂದರ್ಭ 21 ಸುತ್ತು ಕುಶಾಲತೋಪು ಸಿಡಿಸಲು 7 ಪಿರಂಗಿಗಳನ್ನು ಬಳಕೆ ಮಾಡಲಾಗುತ್ತದೆ. ಕುಶಾಲತೋಪು ಸಿಡಿಸುವ 7 ಪಿರಂಗಿಗಳು ಹಾಗೂ ಮದ್ದುಗುಂಡು ಸಾಗಿಸುವ 4 ಪಿರಂಗಿಗಳಿಗೆ ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು.
ಎಲ್ಲ ಪಿರಂಗಿಗಳಿಗೂ ಹರಿಶಿನ, ಕುಂಕುಮ ಹಚ್ಚಿ ಸೇವಂತಿಗೆ ಹೂವಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ವಿಜಯಗಣಪತಿ ಪೂಜೆ, ಕಳಸದಲ್ಲಿ ಮೃತ್ಯುಂಜಯ ಆವಾಹನೆ ಮಾಡಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಿರಂಗಿ ದಳಕ್ಕೆ ನಿಯೋಜನೆಗೊಂ ಡಿರುವ ಸಿಬ್ಬಂದಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮೃತ್ಯುಂಜಯ ಜಪ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಕುಂಬಳಕಾಯಿ ಹಾಗೂ ತೆಂಗಿನ ಕಾಯಿ ಒಡೆದು ಹಾಗೂ ಪಿರಂಗಿಗಳ ಚಕ್ರಕ್ಕೆ ನಿಂಬೆ ಹಣ್ಣು ಇಟ್ಟು ಆರತಿ ಬೆಳಗಿ ಯಾವುದೇ ವಿಘ್ನಗಳು ಎದುರಾಗದೆ ಇರಲಿ ಎಂದು ಪೂಜೆ ಸಲ್ಲಿಸಲಾಯಿತು.
ದಸರಾ ಸಂದರ್ಭ ಕುಶಾಲತೋಪು ಸಿಡಿಸುವ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಪೊಲೀಸರ ತಂಡ ನಗರದ ಅರಮನೆ ಆವರಣದಲ್ಲಿ ಬುಧವಾರದಿಂದ ತರಬೇತಿ ಪ್ರಾರಂಭಿಸಲಿದ್ದು, ಒಂದು ವಾರ ಕಾಲ ಡ್ರೈ ಪ್ರಾೃಕ್ಟಿಸ್ (ಕುಶಾಲತೋಪು ಸಿಡಿಸದೆ ನಡೆಸುವ ಅಭ್ಯಾಸ) ನಡೆಸಲಾಗುವುದು. ನಂತರ ದಸರಾ ಉತ್ಸವದಲ್ಲಿ ಭಾಗವಹಿಸುವ ಆನೆಗಳು ಹಾಗೂ ಕುದುರೆಗಳ ಮುಂದೆ ಕುಶಾಲತೋಪು ಸಿಡಿಸಲಾಗುವುದು.
ವಿಜಯದಶಮಿ ದಿನದಂದು ಜಂಬೂಸವಾರಿ ಮೆರವಣಿಗೆ ಪ್ರಾರಂಭಗೊಳ್ಳುವ ಮುನ್ನ ರಾಷ್ಟ್ರಗೀತೆ ಮೊಳಗುವ ಸಂದರ್ಭ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ರಾಷ್ಟ್ರಗೀತೆ ಪ್ರಾರಂಭವಾಗುವ ಕ್ಷಣದಿಂದ ರಾಷ್ಟ್ರಗೀತೆ ಅಂತ್ಯಗೊಳ್ಳುವ ಕ್ಷಣದವರೆಗೆ 21 ಕುಶಾಲತೋಪು ಸಿಡಿಸಬೇಕು. ಈ ಸಮಯ ಹೊಂದಾಣಿಕೆ ಮಾಡಿಕೊಳ್ಳುವ ತರಬೇತಿ ಬುಧವಾರದಿಂದ ಒಂದುವಾರಗಳ ಕಾಲ ನಡೆಯುತ್ತದೆ. ತಾಲೀಮಿಗೆ 7 ಪಿರಂಗಿ ಬಳಸಲಾಗುತ್ತಿದ್ದು, ಪ್ರತಿಯೊಂದು ಪಿರಂಗಿಗೂ ತಲಾ 5 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಈ ಸಂದರ್ಭ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಮೌಂಟೆಡ್ ಡಿಸಿಪಿ ಶೈಲೇಂದ್ರ, ಡಿಸಿಎಫ್ ಸೌರಭ್ ಕುಮಾರ್, ಎಸಿಪಿ ಶಾಂತಮಲ್ಲಪ್ಪ, ಅರಮನೆ ಭದ್ರತಾ ಮಂಡಳಿ ಎಸಿಪಿ ಚಂದ್ರಶೇಖರ್, ಇನ್‌ಸ್ಪೆಕ್ಟರ್‌ಗಳಾದ ಆನಂದಕುಮಾರ್, ಜಿ.ಅಶೋಕ್ ಕುಮಾರ್, ಎಚ್.ಪಿ.ಸತೀಶ, ಬಿ.ಶಿವಕುಮಾರ, ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಹಾಗೂ ಇತರರು ಇದ್ದರು.