ಮೈಸೂರು: ದಸರಾ ದೀಪಾಲಂಕಾರದ ಅವಧಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಮತ್ತೆ ಹಲವು ಮಾರ್ಪಾಡು ಮಾಡಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.
ಹಲವು ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸ ಲಾಗಿದೆ. ದೀಪಾಲಂಕಾರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಮಾಡಿರುವ ಮಾರ್ಪಾಡು ನ.4ರವರೆಗೆ ಜಾರಿಯಲ್ಲಿರಲಿದೆ.
ನಿಲುಗಡೆ ನಿಷೇಧಿತ ಪ್ರದೇಶಗಳು: ಮೈಸೂರು ಅರಮನೆಯ ಸುತ್ತಲಿನ ರಸ್ತೆಗಳಾದ ಬಿ.ಎನ್.ರಸ್ತೆ, ಎ.ವಿ.ರಸ್ತೆ, ಸಯ್ಯಜಿರಾವ್ ರಸ್ತೆ, ಪುರಂದರ ರಸ್ತೆ, ರಮಾವಿಲಾಸ ರಸ್ತೆಯಲ್ಲಿ ಮೂಡಾ ಜಂಕ್ಷನ್‌ನಿಂದ ಬನುಮಯ್ಯ ಕಾಲೇಜು ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ (ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಗಳನ್ನು ಹೊರತುಪಡಿಸಿ) ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಸಯ್ಯಜಿರಾವ್ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಅಗ್ರಹಾರ ವೃತ್ತದವರೆಗೆ, ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಸಿದ್ದಪ್ಪ ಚೌಕದವರೆಗೆ, ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಹಳೆಯ ಜೆಎಸ್‌ಎಸ್ ಆಸ್ಪತ್ರೆ ಜಂಕ್ಷನ್‌ವರೆಗೆ, ಜೆ.ಎಲ್.ಬಿ ರಸ್ತೆಯಲ್ಲಿ ಶ್ರೀನಿವಾಸ ವೃತ್ತದಿಂದ ಎಲೆತೋಟ ಜಂಕ್ಷನ್‌ವರೆಗೆ, ರಾಮಸ್ವಾಮಿ ವೃತ್ತದಿಂದ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಜಂಕ್ಷನ್‌ವರೆಗೆ, ಅಶೋಕ ರಸ್ತೆಯಲ್ಲಿ ಮಿಲಾದ್ ಪಾರ್ಕ್ ಜಂಕ್ಷನ್‌ನಿಂದ ಹರ್ಷ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಗಾಂಧಿ ಚೌಕದ ಸುತ್ತಲಿನಲ್ಲಿ ರಸ್ತೆ ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಓಲ್ಡ್‌ಬ್ಯಾಂಕ್ ರಸ್ತೆಯಲ್ಲಿ ಗಾಂಧಿ ಚೌಕದಿಂದ ಸಯ್ಯಜಿರಾವ್ ರಸ್ತೆ ಜಂಕ್ಷನ್‌ವರೆಗೆ, ಚಂದ್ರಗುಪ್ತ ರಸ್ತೆಯ ಅಶೋಕ ರಸ್ತೆ ಜಂಕ್ಷನ್‌ನಿಂದ ಬಿ.ಎನ್. ರಸ್ತೆ ಜಂಕ್ಷನ್‌ವರೆಗೆ, ನೆಹರು ವೃತ್ತದಿಂದ ನೇಮಿನಾಥ ಸ್ಟೀಲ್ ಜಂಕ್ಷನ್‌ವರೆಗೆ (ಮಿನಿ ವಿಧಾನಸೌಧ ರಸ್ತೆ), ಬಿ.ಎನ್. ರಸ್ತೆಯಲ್ಲಿ ಹೈದರಾಲಿ ಖಾನ್ ವೃತ್ತ (ಫೈವ್‌ಲೈಟ್‌ವೃತ್ತ) ದಿಂದ ಸೆಂಟ್ರಲ್ ಮಾಲ್ (ಛತ್ರಿಮರ) ಜಂಕ್ಷನ್‌ವರೆಗೆ, ಸರ್ಕಾರಿ ಭವನದ ರಸ್ತೆಯಲ್ಲಿ ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ (ಹಾರ್ಡಿಂಜ್ ವೃತ್ತ), ಲೋಕರಂಜನ್‌ರಸ್ತೆಯಲ್ಲಿ ಸರ್ಕಸ್ ಗ್ರೌಂಡ್‌ಜಂಕ್ಷನ್‌ನಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ (ಹಾರ್ಡಿಂಜ್ ವೃತ್ತ) ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ಮಾದರಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಹರಿಕೃಷ್ಣ ವೃತ್ತದಿಂದ (ಡಿ.ಪಿ.ಓ) ಹಳೆ ಬಿಜೆಪಿ ಕಚೇರಿ ಜಂಕ್ಷನ್‌ವರೆಗೆ, ವಸ್ತು ಪ್ರದರ್ಶನ ಮೈದಾನದ ಮುಖ್ಯಧ್ವಾರದಿಂದ ಮೃಗಾಲಯ ರಸ್ತೆ ಜಂಕ್ಷನ್‌ವರೆಗೆ, ಇಟ್ಟಿಗೆಗೂಡಿನ 5ನೇ ಕ್ರಾಸ್ ರಸ್ತೆಯಲ್ಲಿ ಮೃಗಾಲಯದ ರಸ್ತೆ ಜಂಕ್ಷನ್‌ನಿಂದ ವಸ್ತು ಪ್ರದರ್ಶನ ಮೈದಾನದ ಪೂರ್ವ ದ್ವಾರದವರೆಗೆ, ಮಾನಸರ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್‌ನಿಂದ (ಮಾಲ್ಆಫ್ ಮೈಸೂರು) ಲೋಕರಂಜನ್ ರಸ್ತೆ ಜಂಕ್ಷನ್‌ವರೆಗೆ, ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿ ಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ಮಾದರಿಯ ವಾಹನ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.