ಜಿಲ್ಲೆ

ಶ್ರೀರಂಗಪಟ್ಟಣ ದಸರಾಗೆ ಗ್ರಾಪಂ ಸದಸ್ಯರನ್ನು ಆಹ್ವಾನಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶ್ರೀರಂಗಪಟ್ಟಣ ದಸರಾ ಅ.16 ರಿಂದ 18ವರೆಗೆ ನಡೆಯಲಿದೆ. ಎಲ್ಲ ಕಾರ್ಯಕ್ರಮ ವ್ಯವಸ್ಥಿತವಾಗಿ ಯಾವುದೇ ಲೋಪ ಉಂಟಾಗದಂತೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಸರಾ ಆಚರಣೆ ಕುರಿತು ಸಚಿವರು, ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಬೇಕು. ಅಂತೆಯೇ ಮಾಜಿ ಶಾಸಕರು, ಸಂಸದರು, ಗಣ್ಯವ್ಯಕ್ತಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಆಹ್ವಾನಿಸಿ ಎಂದರು.

ವೇದಿಕೆ ಸಮಿತಿ ಅವರು ಗಣ್ಯರು ಹಾಗೂ ವೀಕ್ಷಕರಿಗೆ ಆಸನದ ವ್ಯವಸ್ಥೆ, ಬ್ಯಾರಿಕೇಡಿಂಗ್, ಸೌಂಡ್ ಸಿಸ್ಟ್‌ಂ, ಎಲ್ಇಡಿ ವಾಲ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕುಡಿಯುವ ನೀರು ಒದಗಿಸಲು ಕಾರ್ಯಕ್ರಮ ನಡೆಯುವ ಸುತ್ತಲಿನ ಪ್ರದೇಶದಲ್ಲಿ ಅಲ್ಲಲ್ಲಿ 20 ಲೀಟರ್ ನೀರಿನ ಕ್ಯಾನ್ ಹಾಗೂ ಲೋಟದ ವ್ಯವಸ್ಥೆ ಮಾಡಿ. ತಾತ್ಕಾಲಿಕ ಶೌಚಗೃಹ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಆನೆಗಳು ಸಂಚರಿಸುವ ದಾರಿಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಶ್ವದಳ, ಪೊಲೀಸ್ ಬ್ಯಾಂಡ್, ವಿವಿಧ ಕಲಾತಂಡ, ಸ್ಥಬ್ದಚಿತ್ರಗಳು ಸಾಗಲಿದೆ. ಕಿರಂಗೂರು ಬನ್ನಿಮಂಟಪದ ಬಳಿ ಹೂವಿನ ಅಲಂಕಾರದ ವ್ಯವಸ್ಥೆಯಾಗಬೇಕು. ಜನರನ್ನು ಆಕರ್ಷಿಸುವ ರೀತಿ 50 ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಿರಿ. ನಿರ್ವಹಣೆಗಾಗಿ ಶುಲ್ಕ ನಿಗದಿ ಮಾಡಿ. ಮಹಿಳಾ ಸಂಘ, ರೈತ ಎಫ್‌ಪಿಒ, ಆಹಾರ ತಯಾರಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿ. ವಿವಿಧ ರೀತಿಯ ವಸ್ತುಗಳು ಹಾಗೂ ಆಹಾರ ಗ್ರಾಹಕರಿಗೆ ದೊರಕುವಂತೆ ವೈವಿದ್ಯಮಯವಾಗಿರಲಿ. ಮಾಹಿತಿ ನೀಡುವ ವಸ್ತು ಪ್ರದರ್ಶನ ಮಳಿಗೆಗಳನ್ನು ಇಲಾಖೆ ವತಿಯಿಂದ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಮೂರು ದಿನಗಳ ಕಾಲ ನಗರದ ಚಲನಚಿತ್ರಮಂದಿರದಲ್ಲಿ ಮಕ್ಕಳಿಗೆ ಮೌಲ್ಯಾಧರಿತ ಸಂದೇಶಗಳನ್ನು ನೀಡುವ ಚಲನಚಿತ್ರಗಳನ್ನು ಪ್ರದರ್ಶನ ಮಾಡಿ. ಅ.5ರಂದು ಬೆಳಗ್ಗೆ 11ಗಂಟೆಗೆ ಜಿಪಂ ಸಭಾಂಗಣದಲ್ಲಿ ಸಚಿವ ಚಲುವರಾಯಸ್ವಾಮಿ ಅವರು ದಸರಾ ಲೋಗೋ ಬಿಡುಗಡೆ ಮಾಡಲಿದ್ದಾರೆ. ಅ.17ರಂದು ಬೆಳಗ್ಗೆ 6 ರಿಂದ 9 ಗಂಟೆವರೆಗೆ ಕರೀಘಟ್ಟ ಬೆಟ್ಟದ ಪಾದದಿಂದ ದೇವಸ್ಥಾನದವರೆಗೆ ಯೋಗ ನಡಿಗೆ ಹಾಗೂ ದೇವಸ್ಥಾನದ ಆವರಣದಲ್ಲಿ ವೈವಿದ್ಯಮಯ ಯೋಗಾಭ್ಯಾಸ ನಡೆಯಲಿದೆ. ಅದೇ ದಿನ ವೇದಿಕೆಯಲ್ಲಿ ಯೋಗ ನೃತ್ಯರೂಪಕ ನಡೆಯಲಿದ್ದು, ಕಾರ್ಯಕ್ರಮ ಉತ್ತಮವಾಗಿ ಮೂಡಿಬರಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಲಾವಿದರು ಹಾಗೂ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಅವರಿಗೆ ಸ್ಥಳದಲ್ಲೇ ಸಂಭಾವನೆ ನೀಡಿ ಗೌರವಯುತವಾಗಿ ಕಳುಹಿಸಿಕೊಡಿ. ಆಹಾರ ಸಮಿತಿಯೊಂದಿಗೆ ಚರ್ಚಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಿಕೊಡಿ. ಮೂರು ದಿನವೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರವರೆಗೆ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಲು ವೇದಿಕೆಯಲ್ಲಿ ಅವಕಾಶ ಕಲ್ಪಿಸಿ. ಎಲ್ಲಾ ತಾಲೂಕಿನ ವಿವಿಧ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.