ಜಿಲ್ಲೆ

ಕೊಡಗು ದಸರೆಗೆ 1.5 ಲಕ್ಷ ಜನರ ನಿರೀಕ್ಷೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಮಡಿಕೇರಿ ದಸರಾಕ್ಕೆ ಈ ಬಾರಿ ಸುಮಾರು 1.5 ಲಕ್ಷ ಜನ ಸೇರುವ ನಿರೀಕ್ಷೆ ಇರುವುದರಿಂದ ಸುರಕ್ಷಿತ ಆಚರಣೆಯ ಕಾಳಜಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಡಿಕೇರಿ ದಸರಾವನ್ನು ಹಿಂದಿನ ವರ್ಷಕ್ಕಿಂತಲೂ ಚೆನ್ನಾಗಿ ಮಾಡಬೇಕು ಎನ್ನುವ ಅಶಯ ಪ್ರತಿ ಸಭೆಯಲ್ಲೂ ಮೂಡಿಬರುತ್ತದೆ. ಇದಕ್ಕೆ ಪೂರಕವಾಗಿ ಸರ್ಕಾರದಿಂದಲೂ ಕಳೆದ ವರ್ಷದಂತೆ ಉತ್ತಮ ಅನುದಾನ ಸಿಗುವ ನಿರೀಕ್ಷೆ ಇದ್ದು ಸಂಭ್ರಮದಿAದ ಆಚರಿಸುವಂತಾಗಬೇಕು.

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಸಂದರ್ಭ ಸಂಭವಿಸಿದ ಕಾಲ್ತುಳಿತ ಪ್ರಕರಣ ಹಿನ್ನೆಲೆಯಲ್ಲಿ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಸಂಭಾವ್ಯ ಅನಾಹುತಗಳನ್ನು ತಡೆಗಟ್ಟಲು ಸರ್ಕಾರ ಮಾನದಂಡಗಳನ್ನು ರೂಪಿಸಿದ್ದು, ಇದನ್ನು ಪಾಲಿಸುತ್ತಾ ಸುರಕ್ಷತೆಗೆ ಆದ್ಯತೆ ಕೊಟ್ಟು ದಸರಾ ಆಚರಿಸಬೇಕು. ಕಳೆದ ವರ್ಷ ಸುಮಾರು 1 ಲಕ್ಷ ಜನ ಮಡಿಕೇರಿ ದಸರಾಕ್ಕೆ ಆಗಮಿಸಿದ್ದರು. ಈ ವರ್ಷ ಈ ಸಂಖ್ಯೆ ಸುಮಾರು 1.5 ಲಕ್ಷ ಮುಟ್ಟುವ ಸಾಧ್ಯತೆ ಇದೆ. ಹಾಗಾಗಿ ಜನ ಸಂದಣಿ ನಿಯಂತ್ರಣ ಕೇವಲ ಪೊಲೀಸರ ಜವಾಬ್ದಾರಿ ಮಾತ್ರ ಆಗಿರದೇ ದಸರಾ ಸಮಿತಿಗಳೂ ಜವಾಬ್ದಾರಿ ತೆಗೆದುಕೊಳ್ಳಬೇಕು.

ದಶ ಮಂಟಪಗಳು ಸಂಚರಿಸುವ ರಸ್ತೆಯನ್ನು ನಗರಸಭೆ ವತಿಯಿಂದ ಕೂಡಲೇ ಸಜ್ಜುಗೊಳಿಸುವ ಕೆಲಸ ಮಾಡಬೇಕು. ಮಳೆ ಮುಗಿಯುವ ತನಕ ಕಾದರೆ ದಸರಾ ಸಮಯದಲ್ಲಿ ಕಷ್ಟ ಆಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಸ್ತೆಗಳಲ್ಲಿನ ಗುಂಡಿ ಮುಚ್ಚುಬೇಕು. ದಶಮಂಟಪಗಳು ಪ್ರದರ್ಶನ ನೀಡುವ ಸ್ಥಳವನ್ನೂ ಸಿದ್ಧಮಾಡಿ ಕೊಡಬೇಕು. ದಶಮಂಟಪಗಳು ಸಾಗುವ ಮಾರ್ಗದಲ್ಲಿನ ವಿದ್ಯುತ್ ತಂತಿಗಳು, ಮರದ ರೆಂಬೆಗಳ ಬಗ್ಗೆ ಸೆಸ್ಕ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಚರ್ಚಿಸಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರದ ಹಣದಲ್ಲಿ ದಸರಾ ಮಾಡುವುದರಿಂದ ಲೆಕ್ಕಾಚಾರ ಸರಿಯಾಗಿ ಇರಬೇಕು. ಆದಷ್ಟು ಖರ್ಚು-ವೆಚ್ಚ ನಿಯಂತ್ರಣ ಮಾಡಬೇಕು. ದಸರಾದ ಲೆಕ್ಕ ಜನವರಿಯಲ್ಲಿ ಮಂಡನೆ ಆಗಬೇಕು ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜ ಮಾತಾಡಿ, ಯಾವುದೇ ಕೊರತೆ ಕಂಡು ಬಾರದಂತೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಜತೆ ದಸರಾ ಆಚರಣೆ ಆಗಬೇಕು. ಜನದಟ್ಟಣೆ ನಿಯಂತ್ರಣ ಮುಖ್ಯ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದೆಯೂ ನಡೆಯಬಾರದು. ಮಂಟಪಗಳ ನಿರ್ಮಾಣ ಮತ್ತು ನಿರ್ವಹಣೆ ಸಂದರ್ಭ ತಾಂತ್ರಿಕವಾಗಿಯೂ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಎಸ್‌ಪಿ ಕೆ. ರಾಮರಾಜನ್ ಮಾತನಾಡಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಹೆಚ್ಚಿನ ಜನ ಸಂದಣಿ ಸೇರುವ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಡಿಕೇರಿ ದಸರಾ ಸಂದರ್ಭ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಸಂದಣಿ ಹೆಚ್ಚು ಸೇರುವಾಗ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಜನರ ಸುರಕ್ಷತೆ ಮುಖ್ಯ. ದಸರಾ ದಿನದ ಮಂಟಪಗಳನ್ನು ನಿರ್ಮಿಸುವ ವೇಳೆ ವಾಹನಗಳ ಗಾತ್ರ ದೊಡ್ಡದಿರುತ್ತದೆ. ಇದರಿಂದ ನಿಯಂತ್ರಣ ತಪ್ಪುತ್ತದೆ. ಯಾವ ವಾಹನವೂ ಸುರಕ್ಷತೆಯಿಂದ ಕೂಡಿರುವುದಿಲ್ಲ. ಆರ್‌ಟಿಒ ಪರವಾನಗಿ ಇಲ್ಲದೆ ಯಾವುದೇ ವಾಹನ ಹೊರಡುವಂತಿಲ್ಲ.

ರಸ್ತೆಯಲ್ಲಿ ಜನ ಓಡಾಡದಷ್ಟು ಅಗಲಕ್ಕೆ ಮಂಟಪ ಇರುತ್ತದೆ. ಈ ವರ್ಷ ಇದಕ್ಕೆ ಅವಕಾಶ ಇಲ್ಲ. ಟ್ಯಾಬ್ಲೋಗಳಲ್ಲಿ ಯಾಂತ್ರಿಕೃತ ಬೆಂಕಿ ಬಳಕೆಗೆ ಅವಕಾಶ ಇಲ್ಲ. ಪಟಾಕಿ ಸಿಡಿಸುವಾಗ ಸುರಕ್ಷಿತ ಸ್ಥಳದಲ್ಲಿ ಸಿಡಿಸಬೇಕು. ದಸರಾ ಮೆರವಣಿಗೆ ಸಂದರ್ಭ ರಸ್ತೆ ತಡೆ ಮಾಡಲು ಅವಕಾಶ ಇಲ್ಲ. ಅಗತ್ಯವಿದ್ದರೆ ದಸರಾ ಸಮಿತಿಯವರು ಪೊಲೀಸ್ ಮೈದಾನ ಬಳಸಿಕೊಳ್ಳಬಹುದು. ತೀರ್ಪುಗಾರಿಕೆ ಸಂದರ್ಭ ನಡೆಯುವ ಗಲಾಟೆ ತಪ್ಪಿಸಲು ದಸರಾ ಸಮಿತಿಯೇ ಕ್ರಮ ತೆಗೆದುಕೊಳ್ಳಬೇಕು.

ಮೆರವಣಿಗೆ ಸಂದರ್ಭ ಪಟಾಕಿ ಸಿಡಿಸುವಾಗ ಜತೆಯಲ್ಲಿ ಕಾಗದದ ಚೂರುಗಳನ್ನು ಬಳಸಬಾರದು. ಇದರಿಂದ ಪೌರ ಕಾರ್ಮಿಕರಿಗೆ ಸಮಸ್ಯೆ ಆಗುತ್ತದೆ. ಕಾನೂನು ಪ್ರಕಾರ ಇದನ್ನು ತಡೆಯಬಹುದು. ಆದರೆ ಇಲ್ಲಿ ಸಮಿತಿಯವರು ಸ್ವಯಂ ನಿಯಂತ್ರಣ ಮಾಡಿಕೊಂಡರೆ ಉತ್ತಮ. ಸಮಿತಿಯ ಸ್ವಯಂ ಸೇವಕರಲ್ಲಿ ಪುರುಷರು ಮತ್ತು ಮಹಿಳೆಯರು ಇದ್ದರೆ ಒಳೆಯದು. ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾಸೀಟ್ ತನಕ ರಸ್ತೆ ಬದಿಯಲ್ಲಿ ಅಂಗಡಿಗಳಿಗೆ ನಗರಸಭೆ ಅವಕಾಶ ಕೊಡಬಾರದು. ಸಿಸಿಟಿವಿ, ಹೆಲ್ಪ್ ಡೆಸ್ಕ್, ಬೆಳಕಿನ ವ್ಯವಸ್ಥೆ, ತಾತ್ಕಾಲಿಕ ಶೌಚಗೃಹದ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಎಸ್‌ಪಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ ಜನರ ಸುರಕ್ಷತೆ ಉದ್ದೇಶದಿಂದ ನಿರ್ಬಂಧ ಹಾಕಲಾಗುತ್ತಿದೆ. ಇದು ಬಿಟ್ಟು ಪೊಲೀಸರು ಬೇರೆ ಯಾವುದೇ ಉದ್ದೇಶ ಹೊಂದಿಲ್ಲ. ಮಂಟಪಗಳ ಅಗಲ ಹೆಚ್ಚಾದರೆ ರಸ್ತೆಯಲ್ಲಿ ಜನ ಓಡಾಟ ಹೇಗೆ ? ಈ ಬಗ್ಗೆ ದಸರಾ ಮಂಟಪ ಸಮಿತಿಗಳು ಯೋಚನೆ ಮಾಡಬೇಕು ಎಂದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ನಗರಸಭೆ ಪೌರಾಯುಕ್ತ ರಮೇಶ್, ದಸರಾ ಸಮಿತಿ ಪದಾಧಿಕಾರಿಗಳು, ದಶಮಂಟಪ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿರುವ ಐತಿಹಾಸಿಕ ಮಡಿಕೇರಿ ದಸರಾ ಆಚರಣೆ ಮೇಲೆ ಸುರಕ್ಷತೆ ಹೆಸರಿನಲ್ಲಿ ಪೊಲೀಸರು ನಿರ್ಬಂಧ ಹೇರುವ ಮೂಲಕ ದಸರಾವನ್ನು ಕಳೆಗುಂದಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಭೆಯಲ್ಲಿ ಹಲವರು ಆರೋಪಿಸಿದರು. ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ಹಲವು ದಶಕಗಳಿಂದ ಮಡಿಕೇರಿ ದಸರಾದಲ್ಲಿ ಮಂಟಪಗಳೇ ಪ್ರಮುಖ ಆಕರ್ಷಣೆ ಆಗಿದೆ. ಪೌರಾಣಿಕ ಕಥಾ ಹಂದರ ಹೊಂದಿರುವ ಮಂಟಪಗಳನ್ನು ನೋಡುವುದಕ್ಕಾಗಿಯೇ ಮಡಿಕೇರಿಗೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಂಥ ಮಂಟಪಗಳ ನಿರ್ಮಾಣದ ಹಿಂದೆ ಹಲವು ತಿಂಗಳುಗಳ ಶ್ರಮ ಇರುತ್ತದೆ. ಹಾಗಾಗಿ ಮಂಟಪಗಳಿಗೆ ನಿರ್ಬಂಧ ಹಾಕಬಾರದು. ಇದರಿಂದ ಮಡಿಕೇರಿ ದಸರಾ ವೈಭವ ಕಳೆದುಕೊಳ್ಳುತ್ತದೆ ಎಂದರು. ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಮಾತನಾಡಿ ಸುರಕ್ಷಿತವಾಗಿ ದಸರಾ ಆಚರಣೆ ಸಂದರ್ಭ ದಶಮಂಟಪ ಸಮಿತಿ ವತಿಯಿಂದ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದಶಮಂಟಪಗಳ ಮೆರವಣಿಗೆಗೆ ಸಂಬAಧ ಪಟ್ಟಂತೆ ಈಗಾಗಲೇ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಮತ್ತಷ್ಟು ನಿರ್ಬಂಧಗಳನ್ನು ಹೇರಿದರೆ ಪ್ರಮುಖ ಆಕರ್ಷಣೆಯಾದ ಪೌರಾಣಿಕ ಕತೆಗಳ ದೃಶ್ಯರೂಪಕದ ಪ್ರದರ್ಶನವೇ ಕಷ್ಟ ಆಗುತ್ತದೆ. ಮೆರವಣಿಗೆ ಹೊರಡುವುದಕ್ಕೆ ಮೊದಲು ವಾಹನಗಳು ಆರ್‌ಟಿಒ ತಪಾಸಣೆಗೆ ಒಳಪಟ್ಟು ಪರವಾನಗಿ ಪಡೆದುಕೊಳ್ಳಬೇಕು ಎನ್ನುವ ನಿಯಮವೂ ಸರಿಯಲ್ಲ. ಡಿಜೆ ಬಳಸಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿದ್ದೇವೆ. ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೇರಬಾರದು ಎಂದು ಮನವಿ ಮಾಡಿದರು. ದಶಮಂಟಪಗಳ ಪದಾಧಿಕಾರಿಗಳು ಚಪ್ಪಾಳೆ ತಟ್ಟುವ ಮೂಲಕ ಈ ಮಾತನ್ನು ಬೆಂಬಲಿಸಿದರು.

ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ಕೂಡ ಸಿದ್ಧತೆ ನಡೆಸಿಕೊಳ್ಳಬೇಕು. ಕಳೆದ ವರ್ಷ ಒಂದು ಸಾವಿರದಷ್ಟು ಪೊಲೀಸರನ್ನು ಬಂದೋಬಸ್ಥ್ಗಾಗಿ ನಿಯೋಜಿಸಲಾಗಿತ್ತು. ಈ ವರ್ಷ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬೇಕಾಗುತ್ತದೆ. ದಶಮಂಟಪ ಸಮಿತಿಗಳ ಸ್ವಯಂ ಸೇವಕರಿಗೆ ದಸರಾ ಮಂಟಪಗಳ ನಿರ್ವಹಣೆ ಬಗ್ಗೆ ಸೂಕ್ತ ತರಬೇತಿ ಕೊಡಬೇಕು. ಸಮಿತಿಯ ಸ್ವಯಂ ಸೇವಕರ ಜತೆ ಪೊಲೀಸರೂ ಇದ್ದಾಗ ಮಂಟಪಗಳ ಬಳಿ ಉಂಟಾಗುವ ನೂಕುನುಗ್ಗಲು ತಡೆಗಟ್ಟಬಹುದು.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಮೈಸೂರು ದಸರಾದಲ್ಲಿ ಡಿಜೆ ಬಳಸುವುದಿಲ್ಲ. ಆದರೂ ವಿಶ್ವಪ್ರಸಿದ್ಧವಾಗಿದೆ. ಡಿಜೆ ಬದಲು ಸ್ಥಳೀಯ ಕಲೆ ಬಳಸಬೇಕು. ಹೆಚ್ಚಿನ ಶಬ್ದ ಬಳಕೆಯಿಂದ ಅನಾಹುತ ಹೆಚ್ಚು. ನಮ್ಮ ಸಂಸ್ಕೃತಿ ಪ್ರದರ್ಶನಕ್ಕೆ ಈ ದಸರಾ ಉತ್ತಮ ಅವಕಾಶ. ಇದನ್ನು ಬಳಸಿಕೊಳ್ಳಬೇಕು. ಸಾಂಸ್ಕೃತಿಕ ವೈವಿಧ್ಯತೆಯೇ ಕೊಡಗಿನ ವಿಶೇಷತೆ. ಮಡಿಕೇರಿ ದಸರಾದಲ್ಲಿ ಇದರ ಅನಾವರಣ ಆಗಬೇಕು. ಮಡಿಕೇರಿ ದಸರಾಕ್ಕೆ ವೃದ್ಧರು, ಮಕ್ಕಳು, ಮಹಿಳೆಯರು ಬರುವ ಸ್ಥಿತಿ ಇಲ್ಲ. ಇದು ಬದಲಾಗಬೇಕು. ಕುಟುಂಬ ಸಮೇತ ದಸರಾ ವೀಕ್ಷಣೆಯ ವಾತಾವರಣ ನಿರ್ಮಾಣ ಆಗಬೇಕು. ಆಗ ಮಾತ್ರ ಅದು ಯಶಸ್ವಿ ದಸರಾ ಆಗುತ್ತದೆ.

ಕೆ. ರಾಮರಾಜನ್, ಕೊಡಗು ಎಸ್.ಪಿ.