ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿ ಸುವ ಗಜಪಡೆ ಹಾಗೂ ಆಶ್ವರೋಹಿ ದಳಕ್ಕೆ ಬುಧವಾರ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಕುಶಾಲತೋಪು ತಾಲೀಮು ಯಶಸ್ವಿಯಾಗಿ ನಡೆಸಲಾಯಿತು.
ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳು ಹಾಗೂ ಅಶ್ವರೋಹಿ ದಳ 43 ಕುದುರೆಗಳು ಕುಶಾಲತೋಪು ತಾಲೀಮಿನಲ್ಲಿ ಪಾಲ್ಗೊಂಡಿತ್ತು. ಫಿರಂಗಿಯಿಂದ ಹೊರಹೊಮ್ಮುತ್ತಿದ್ದ ಸಿಡಿಮದ್ದಿನ ಭಾರಿ ಶಬ್ದಕ್ಕೆ ಅಭಿಮನ್ಯು ಅಂಜದ ಧೈರ್ಯ ಪ್ರದರ್ಶಿಸಿದ. ಆದರೆ, ಇದೇ ಪ್ರಥಮ ಬಾರಿಗೆ ನಾಡಹಬ್ಬ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ರೋಹಿತ್ ಆನೆಯು ತೀವ್ರವಾಗಿ ಬೆಚ್ಚಿಬಿತ್ತು. ತಕ್ಷಣ ಮಾವುತರು, ಕಾವಾಡಿಗರು ಆನೆಗೆ ಧೈರ್ಯ ತುಂಬುವ ಕಾರ್ಯ ಮಾಡಿದರು.
ಕುಶಾಲತೋಪು ತಾಲೀಮು ಪೂರ್ಣಗೊಂಡು ಶಿಬಿರದತ್ತ ಆನೆಗಳು ಮರಳುವ ಸಂದರ್ಭದಲ್ಲೂ ರೋಹಿತ್ ಆಗಿಂದಾಗೆ ಬೆಚ್ಚಿಬಿದ್ದು ಮುಂದಡಿ ಇಡಲು ಹಿಂದೇಟು ಹಾಕಿದ. ವಸ್ತುಪ್ರದರ್ಶನ ಆವರಣದ ಮುಖ್ಯದ್ವಾರ ತಲುಪಿದ ಸಂದರ್ಭ ಗಾಬರಿಯಿಂದ ಮೈದಾನದತ್ತ ನುಗ್ಗಲು ಯತ್ನಿಸಿದಾಗ ಉಳಿದ ಆನೆಗಳ ಸಹಾಯದಿಂದ ಮಾವುತರು ತಡೆದರು. ಮುಂಗಾಲಿಗೆ ಸರಪಳಿ ಕಟ್ಟಿದ ಹಿನ್ನೆಲೆಯಲ್ಲಿ ಆನೆಗೆ ಓಡಿ ಹೋಗಲು ಸಾಧ್ಯವಾಗಲಿಲ್ಲ. ರೋಹಿತ್‌ನನ್ನು ಸಮಾಧಾನಪಡಿಸಲು ಮಾವುತರು ಹಾಗೂ ಕಾವಾಡಿಗಳು ಹರಸಾಸಹ ಪಡುವ ಪರಿಸ್ಥಿತಿ ನಿರ್ಮಾಣವಾಯಿತು.
ಬಂಡೀಪುರದ ರಾಂಪುರ ಆನೆ ಶಿಬಿರದ 47 ವರ್ಷದ ಹಿರಣ್ಯ ಆನೆಯೂ ಸಿಡಿಮದ್ದಿನ ಶಬ್ದಕ್ಕೆ ಬೆಚ್ಚಿಬಿತ್ತು. ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಧನಂಜಯ ಆನೆ ಸಹ ಶಬ್ದಕ್ಕೆ ಬೆಚ್ಚಿಬಿತ್ತು. ಈ ಸಂದರ್ಭ ಧನಂಜಯನಿಗೆ ಕಬ್ಬು ನೀಡಿ ಮೈದಡವಿ ಧೈರ್ಯ ತುಂಬಲಾಯಿತು. ಆದರೆ, ಇದೇ ಪ್ರಥಮ ಬಾರಿಗೆ ದಸರೆಗೆ ಆಗಮಿಸಿರುವ ದುಬಾರೆ ಶಿಬಿರದ 24 ವರ್ಷದ ಕಂಜನ್ ಸಿಡಿಮದ್ದಿನ ಶಬ್ದಕ್ಕೆ ಹೆದರಲಿಲ್ಲ.ಮುಂಜಾಗ್ರತಾ ಕ್ರಮವಾಗಿ ಅಭಿಮನ್ಯು, ಅರ್ಜುನ, ಮಹೇಂದ್ರ, ಭೀಮ ಆನೆಯನ್ನು ಹೊರತು ಪಡಿಸಿ ಉಳಿದೆಲ್ಲ ಆನೆಗಳ ಮುಂಗಾಲಿಗೆ ಸರಪಳಿ ಬಿಗಿಯಲಾಗಿತ್ತು. ಆನೆಗಳೊಂದಿಗೆ ಕೆಲವು ಕುದುರೆಗಳು ಸಿಡಿಮದ್ದಿನ ಶಬ್ದಕ್ಕೆ ವಿಚಲಿತಗೊಂಡವು. 7 ಫಿರಂಗಿ ಗಾಡಿಗಳಿಂದ ಮೂರು ಸುತ್ತಿನಲ್ಲಿ 21 ಬಾರಿ ಕುಶಾಲತೋಪು ಸಿಡಿಸಲಾಯಿತು.
ತಾಲೀಮು ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಈ ಸಂದರ್ಭ ಡಿಸಿಎಫ್ ಸೌರಭ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಅರಮನೆ ಎಸಿಪಿ ಚಂದ್ರಶೇಖರ್ ಹಾಗೂ ಇತರರು ಇದ್ದರು.