2025ರ ದಸರಾ ದೀಪಾಲಂಕಾರ (ಸಂಗ್ರಹ ಚಿತ್ರ) 
ಜಿಲ್ಲೆ

ದಸರಾ ದೀಪಾಲಂಕಾರ ಆಕರ್ಷಕವಾಗಿರಲಿ : ಸಚಿವ ಕೆ.ಜೆ. ಜಾರ್ಜ್

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ನಗರದಲ್ಲಿ ಕೈಗೊಳ್ಳಲಾಗುವ ದೀಪಾಲಂಕಾರ ಕಳೆದ ಬಾರಿಗಿಂತಲೂ ಹೆಚ್ಚು ಆಕರ್ಷಕ ಹಾಗೂ ಹೊಸತನದಿಂದ ಕೂಡಿರಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಕಡಕೊಳದ ಕರ್ನಾಟಕ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ದಸರಾ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ದಸರಾ ಸಂದರ್ಭದಲ್ಲಿ ನಗರದಲ್ಲಿ ಉತ್ತಮ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತಲೂ ವಿಭಿನ್ನವಾದ ವಿನ್ಯಾಸ ಹಾಗೂ ಹೊಸ ಕಲ್ಪನೆಗಳೊಂದಿಗೆ ದೀಪಾಲಂಕಾರ ರೂಪಿಸಬೇಕು. ದಸರಾ ವೀಕ್ಷಿಸಲು ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಗಮನ ಸೆಳೆಯುವ ರೀತಿಯಲ್ಲಿ ದೀಪಾಲಂಕಾರ ಇರಬೇಕು ಎಂದು ಹೇಳಿದರು.

ದಸರಾ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ದೀಪಾಲಂಕಾರದಿಂದಾಗಿ ಸಾರ್ವಜನಿಕರಿಗೆ ಅಥವಾ ಇತರ ವಿದ್ಯುತ್ ಬಳಕೆದಾರರಿಗೆ ತೊಂದರೆಯಾಗದಂತೆ ಸಮರ್ಪಕ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಈವರೆಗೆ ದಸರಾ ಸಂದರ್ಭದಲ್ಲಿ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಯಾವುದೇ ದೊಡ್ಡ ಸಮಸ್ಯೆ ಎದುರಾಗಿಲ್ಲ. ಈ ಬಾರಿಯೂ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಸಭೆಯ ಆರಂಭದಲ್ಲಿ ಸೆಸ್ಕ್ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ದಸರಾ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿರುವ ವಿದ್ಯುತ್ ದೀಪಾಲಂಕಾರದ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ನಗರದ ವಿವಿಧ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ನಿರ್ಮಿಸಲಾಗುತ್ತಿರುವ ಕಲಾಕೃತಿಗಳು, ದೀಪಾಲಂಕಾರದ ವಿನ್ಯಾಸ ಮತ್ತು ವಿದ್ಯುತ್ ವ್ಯವಸ್ಥೆ ಕುರಿತು ವಿವರಿಸಿದರು.

ಅಲ್ಲದೆ ದಸರಾ ಅಂಗವಾಗಿ ನಡೆಯಲಿರುವ ಡ್ರೋನ್ ಪ್ರದರ್ಶನದಲ್ಲಿ ರೂಪಿಸಲಾಗುತ್ತಿರುವ ವಿವಿಧ ಕಲಾಕೃತಿಗಳ ಬಗ್ಗೆಯೂ ಮಾಹಿತಿ ನೀಡಿದರು. ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರದ ವಿವಿಧೆಡೆ ಸೇರುವ ಹಿನ್ನೆಲೆಯಲ್ಲಿ ವಿದ್ಯುತ್ ಸುರಕ್ಷತೆ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

ಸಭೆಯಲ್ಲಿ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನಾ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಇತರರು ಇದ್ದರು.

ಕಡಕೊಳದ ಕರ್ನಾಟಕ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ಸಚಿವ ಕೆ.ಜೆ. ಜಾರ್ಜ್ ದಸರಾ ಪೂರ್ವಸಿದ್ಧತಾ ಪರಿಶೀಲನಾ ಸಭೆ ನಡೆಸಿದರು. ರಮೇಶ್ ಬಂಡಿಸಿದ್ದೇಗೌಡ, ಅಯೂಬ್ ಖಾನ್, ಲಕ್ಷ್ಮೀಕಾಂತ್ ರೆಡ್ಡಿ, ಎಂ.ಎಸ್. ಅರ್ಚನಾ, ಸೀಮಾ ಲಾಟ್ಕರ್ ಹಾಗೂ ಇತರರು ಇದ್ದರು.

-----------------