ಜಿಲ್ಲೆ

ಈ ಬಾರಿ ಅದ್ದೂರಿ ದಸರಾ : ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಕೋವಿಡ್ ಸಂಕಷ್ಟದಿಂದ ಜನರು ಹೊರ ಬಂದಿದ್ದು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗುತ್ತಿದೆ. ಹಾಗಾಗಿ ಈ ಬಾರಿ ನಾಡಹಬ್ಬ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯನಾ? ಕಷ್ಟವೋ ಸುಖವೋ ಮರಿಯಂತು ಹೊಡೆಯುತ್ತೇವೆ ಅಲ್ಲವೇ? ಅದೇ ರೀತಿ ದಸರಾಕ್ಕೆ ಎಲ್ಲರನ್ನು ಕರೆದು ಅದ್ದೂರಿಯಾಗಿಯೇ ಮಾಡೋಣ. ಕೋವಿಡ್‌ನಿಂದ ಜನರು ತತ್ತರಿಸಿ ಹೋಗಿದ್ದರು, ಈಗ ಎಲ್ಲವೂ ಸುಭೀಕ್ಷವಾಗಿ ನಡೆಯುತ್ತಿದೆ. ಹೊಸ ಸರ್ಕಾರ ಬಂದಿದೆ, ಮಳೆಯಾಗಿದೆ. ಎಲ್ಲರ ಮನಮೆಚ್ಚುವ ದಸರಾ ಮಾಡೋಣ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರಿನ ಸಂಸ್ಕೃತಿ, ಮಹಾರಾಜರ ಪರಂಪರೆ ಎಲ್ಲವನ್ನು ಉಳಿಸಿಕೊಂಡು ದಸರಾ ಮಾಡಬೇಕಿದೆ. ಇದೆಲ್ಲದರ ಬಗ್ಗೆ ಜು.31 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.