Goddess Durga idols immersion at Ulsoor lake on the last day of Durga pooja, in Bengaluru on Thursday 2nd October 2025 
ಜಿಲ್ಲೆ

ಸಂಭ್ರಮದಿಂದ ಆಯುಧಾ ಪೂಜೆ ವಿಜಯದಶಮಿ ಆಚರಣೆ

ಪಂಕಜ ಕೆ.ಎಂ.

ಬೆಂಗಳೂರು: ನಗರದಾದ್ಯಂತ ಎರಡು ದಿನಗಳ ಕಾಲ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಬನ್ನಿ ಎಲೆ ವಿನಿಮಯ, ದುರ್ಗಾದೇವಿಯ ಅದ್ಧೂರಿ ಮೆರವಣಿಗೆ ಹಾಗೂ ವಿಸರ್ಜನೆಯೊಂದಿಗೆ ದಸರಾ ಉತ್ಸಕ್ಕೆ ಗುರುವಾರ ತೆರೆ ಬಿದ್ದಿತು.

ಆಯುಧಾ ಪೂಜೆ ಪ್ರಯುಕ್ತ ಬುಧವಾರ ಅಂಗಡಿ ಮಳಿಗೆಗಳು, ಕಾರ್ಖಾನೆಗಳು, ಬೃಹತ್ ಕೈಗಾರಿಕೆಗಳು ಸೇರಿ ಎಲ್ಲೆಡೆ ಯಂತ್ರೋಪಕರಣಗಳು ಹಾಗೂ ವಾಹನಗಳಿಗೆ ಪೂಜೆ ಮಾಡಲಾಯಿತು. ಮನೆಗಳಲ್ಲಿನ ಆಯುದ್ಧಗಳು ಹಾಗೂ ಕೆಲ ವಸ್ತುಗಳಿಗೂ ಪೂಜೆ ಸಲ್ಲಿಸಿದ ಮಂದಿ ನೆರೆ ಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯದಶಮಿ ಅಂಗವಾಗಿ ಗುರುವಾರ ನಗರದ ಬನಶಂಕರಿ ದೇವಾಲಯ, ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಾಲಯ, ಮಲ್ಲೇಶ್ವರದ ಗಂಗಮ್ಮ ದೇವಾಲಯ, ಸರ್ಕಲ್ ಮಾರಮ್ಮ ದೇವಾಲಯ, ಮೆಜೆಸ್ಟಿಕ್‌ನ ಅಣ್ಣಮ್ಮ ದೇವಾಲಯ, ಎಚ್‌ಎಂಟಿ ಬಡಾವಣೆಯ ಚೌಡೇಶ್ವರಿ ದೇವಾಲಯ, ಶಂಕರಪುರದ ಶೃಂಗೇರಿ ಶಂಕರ ಮಠ ಸೇರಿದಂತೆ ನಗರದ ದೇವಿದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.

ಬನಶಂಕರಿಗೆ ಅಂಬಾರಿ ಅಲಂಕಾರ:

ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ ದೇವಿಗೆ ಅಭಿಷೇಕ ಜತೆಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಬನಶಂಕರಿ ದೇವಿಗೆ ಅಂಬಾರಿ ಅಲಂಕಾರ ಮಾಡಲಾಗಿತ್ತು. ನವಚಂಡಿಕಾ ಹೋಮ ನಡೆಯಿತು. ಶಾಕಾಂಬರಿ ಅಮ್ಮನವರಿಗೆ ರಾಜಬೀದಿ ಉತ್ಸವ ದೇವಾಲಯದ ಆವರಣದಲ್ಲಿ ಶಮಿ ಪೂಜೆ ನಡೆಯಿತು. ಚಂಡೆವಾದ್ಯ, ಡೊಳ್ಳುಕುಣಿತ, ನಾದಸ್ವರದ ಸಮೇತ ಅದ್ಧೂರಿಯಾಗಿ ಮೆರವಣಿಗೆ ಜರುಗಿದವು.

ಬನ್ನಿ ಮರಕ್ಕೆ ಪೂಜೆ

ವಿಜಯ ದಶಮಿ ಪ್ರಯುಕ್ತ ಕೆಲವೆಡೆ ಬನ್ನಿ ಮರಕ್ಕೆ ಪೂಜೆ ಮಾಡಿ ಬೇಡಿಕೆಗಳ ಈಡೇರಿಕೆಗೆ ಕೋರಿದರು. ಒಂದೆಡೆ ಮರಕ್ಕೆ ಹಳದಿ ದಾರ ಕಟ್ಟಿ ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೊಂಡರೆ, ಮತ್ತೊಂದೆಡೆ ಬನ್ನಿ ಎಲೆಗಳನ್ನು ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದುರ್ಗಾಪೂಜೆ

ನವರಾತ್ರಿ ಅಂಗವಾಗಿ ನಗರದಲ್ಲಿ ನಾನಾ ಬಡಾವಣೆಗಳಲ್ಲಿ ಬಂಗಾಳಿ ಸಮುದಾಯ ಪ್ರತಿ ವರ್ಷದಂತೆ ಈ ಬಾರಿಯೂ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆಸಿದ್ದು, ವಿಜಯದಶಮಿಯಂದು ಹಲಸೂರು ಕೆರೆಯಲ್ಲಿ ದುರ್ಗಾದೇವಿ ಮೂರ್ತಿಯನ್ನು ವಿಸರ್ಜಿಸಲಾಯಿತು.