ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಯುವ ದಸರಾ, ಯುವ ಸಂಭ್ರಮ, ಏರ್ ಷೋ ಸೇರಿದಂತೆ ಕೆಲ ವೈವಿಧ್ಯಮಯ ಮತ್ತು ವರ್ಣರಂಜಿತ ಕಾರ್ಯಕ್ರಮಗಳು ದಸರಾ ಮಹೋತ್ಸವದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ದೊರೆಯುವುದಿಲ್ಲ! ಇದು ಸರಳ ದಸರಾ ಆಚರಣೆಯ ಎಫೆಕ್ಟ್.
ಬರಗಾಲದ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅದ್ದೂರಿ ಆಚರಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಸರಳ ಆಚರಣೆಗೆ ತೀರ್ಮಾನಿಸಿದೆ. ಇದರ ಫಲವಾಗಿ ಕೆಲ ಕಾರ್ಯಕ್ರಮಗಳಿಗೆ ಕತ್ತರಿ ಬೀಳುವುದು ನಿಶ್ಚಿತ.
ಪ್ರಸಕ್ತ ಸಾಲಿನ ದಸರಾದ ಒಟ್ಟಾರೆ ಬಜೆಟ್ 30 ಕೋಟಿ ರೂ. ಅದ್ದೂರಿಯಿಂದ ಸರಳ ದಸರಾ ಆಚರಣೆ ಮುಂದಾಗಿರುವುದರಿಂದ ಖರ್ಚು ಕಡಿಮೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅದಕ್ಕಾಗಿ ದುಬಾರಿ ಆಗಿರುವ ಕೆಲ ಕಾರ್ಯಕ್ರಮಗಳನ್ನು ಕೈಬಿಡಲು ಆಲೋಚಿಸಿದೆ. ಕೆಲ ಕಾರ್ಯಕ್ರಮ ಪ್ರಾಯೋಜಕತ್ವದಲ್ಲಿ ನಡೆಸಲು ಮುಂದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸೆ.23 ರಂದು ಜಿಲ್ಲಾ ದಸರಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿಯೇ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಕೈಬಿಡಬೇಕು? ಸರಳ ದಸರಾ ರೂಪುರೇಷೆ ಹೇಗೆ ಇರಬೇಕು ಎಂಬುದರ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಸರಳ ದಸರಾ ಎಂದರೆ, ಮೊದಲು ಕತ್ತರಿ ಬೀಳುವುದು ‘ಯುವ ದಸರಾ’ಕ್ಕೆ. ಈ ವಾಡಿಕೆ ಈ ಸಲವೂ ಮುಂದುವರಿಯುವುದು ಖಚಿತ. ಯುವ ದಸರಾ ಬಲು ದುಬಾರಿ. ಅದರ ಒಟ್ಟು ಬಜೆಟ್ ಅಂದಾಜು 9 ಕೋಟಿ ರೂ. ಕಳೆದ ಬಾರಿ ಇಷ್ಟು ಹಣವನ್ನು ನೀರಿನಂತೆ ಖರ್ಚು ಮಾಡಲಾಗಿತ್ತು. ಬಾಲಿವುಡ್ ಸೇರಿದಂತೆ ದೇಶದ ಖ್ಯಾತ ಗಾಯಕರು, ಸಂಗೀತ ನಿರ್ದೇಶಕರನ್ನು ಲಕ್ಷಾಂತರ ರೂ. ಕೊಟ್ಟು ಕರೆಸಬೇಕಾಗುತ್ತದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಬೇಕು. ಇದಕ್ಕೆ 5 ರಿಂದ 6 ಕೋಟಿ ರೂ. ಖರ್ಚಾಗಲಿದೆ. ಹೀಗಾಗಿ, ಯುವ ದಸರಾ ಖರ್ಚು ಕಡಿಮೆ ಮಾಡಲು ಜಿಲ್ಲಾಡಳಿತ ಮೊದಲೇ ತಲೆಕಡಿಸಿಕೊಂಡಿತ್ತು. ಇದೀಗ ಯುವ ದಸರಾವನ್ನೇ ಕೈಬಿಡಲಿದೆ ಎಂದು ಮೂಲಗಳು ತಿಳಿಸಿವೆ.
ದಸರಾ ಕ್ರೀಡಾಕೂಟ ನಡೆಯಲಿದೆ. ಸ್ಪರ್ಧೆಗಳು ಕಡಿಮೆಯಾಗಲಿವೆ. ಚಾಮುಂಡಿ ವಿಹಾರ ಸೇರಿದಂತೆ ನಗರ ವಿವಿಧ ಕ್ರೀಡಾಂಗಣದಲ್ಲಿ ಅಂದಾಜು 27 ಸ್ಪರ್ಧೆಗಳನ್ನು ಏರ್ಪಡಿಸಲು ಕ್ರಮ ವಹಿಸಲಾಗಿತ್ತು. ಕಳೆದ ವರ್ಷ ಕ್ರೀಡೆಗೆ 5 ಕೋಟಿ ರೂ. ಬಜೆಟ್ ನಿಗದಿ ಮಾಡಲಾಗಿತ್ತು. ಅದು 7 ಕೋಟಿ ರೂ.ಗೆ ಏರಿಕೆ ಆಗಿತ್ತು. ಖರ್ಚು ಕಡಿಮೆ ಮಾಡಲು ಈ ಸಲ ಕೆಲ ಸ್ಪರ್ಧೆಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ. ವರುಣ ಕೆರೆಯಲ್ಲಿ ನಡೆಯುವ ಜಲ ಕ್ರೀಡೆ, ಸಾಹಸ ಕ್ರೀಡೆಗಳಿಗೂ ಕತ್ತರಿ ಬೀಳಲಿದೆ.
ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಮೂಡಿಸುವ ‘ದಸರಾ ವೈಮಾನಿಕ ಪ್ರದರ್ಶನ’ದ ಮೇಲೆ ಈ ಸಲ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಒಂದು ತಾಸಿನ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಹಣದೊಂದಿಗೆ, ಜಟಿಲ ಮಾರ್ಗಸೂಚಿ, ಶಿಷ್ಟಾಚಾರ ಪಾಲನೆ ಮಾಡಬೇಕು. ಹೀಗಾಗಿ, ಇದು ಈ ಸಲ ಇರುವುದು ಅನುಮಾನ.
ಮುಂಗಾರು ಮಳೆ ಕೈಕೊಟ್ಟಿರುವ ಕಾರಣದಿಂದ ರೈತರು, ಗ್ರಾಮೀಣ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ನೀರಿನ ಕೊರತೆಯಿಂದ ಹೊಲದಲ್ಲಿ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಕೃಷಿಕರು ಸಂಭ್ರಮಿಸುವುದು ಕಷ್ಟಕರವಾಗಲಿದ್ದು, ಹೀಗಾಗಿ, ರೈತ ಮತ್ತು ಗ್ರಾಮೀಣ ದಸರಾ ಕೈಬಿಡುವ ಕುರಿತು ಚರ್ಚೆ ನಡೆದಿದೆ. ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವಕ್ಕೆ ಕತ್ತರಿ ಬೀಳಬಹುದು.
ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ನಿರಾತಂಕವಾಗಿ ನಡೆಯಲಿದೆ. ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿ ನಡೆಯುವ ಹೂವಿನ ಹಬ್ಬಕ್ಕೆ ಸಹಸ್ರಾರು ಜನರು ಭೇಟಿ ನೀಡುತ್ತಾರೆ. ಟಿಕೆಟ್ ದರದಿಂದ ಆದಾಯ ಬರುತ್ತದೆ. ಹೀಗಾಗಿ, ಇದು ಈ ಸಲವೂ ಮುಂದುವರಿಯಲಿದೆ.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವರ್ಷದ ಆದಾಯ ಮೂಲವಾದ 3 ತಿಂಗಳು ನಡೆಯುವ ದಸರಾ ವಸ್ತುಪ್ರದರ್ಶನ ಈ ಸಲವೂ ಜರುಗಲಿದೆ. ಮಕ್ಕಳ, ಮಹಿಳಾ ದಸರಾ ಮುಂದುವರಿಯಲಿದೆ.
ದಸರಾ ಅಂಗವಾಗಿ ನಗರ ಪ್ರಮುಖ ರಸ್ತೆ, ವೃತ್ತ, ಕಚೇರಿ ಕಟ್ಟಡಗಳಿಗೆ ದೀಪಾಲಂಕಾರ ಮುಂದುವರಿಯಲಿದೆ. ಇದು ಬಹುತೇಕ ಪ್ರಾಯೋಜಕತ್ವದಲ್ಲೇ ನಡೆಯುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಅನುದಾನ ನೀಡುವುದಿಲ್ಲ. ಖರ್ಚು-ವೆಚ್ಚವನ್ನು ಸೆಸ್ಕ್ ವತಿಯಿಂದ ಪ್ರತಿವರ್ಷ ನಿರ್ವಹಣೆ ಮಾಡಲಾಗುತ್ತದೆ. ದಸರಾದ ಪ್ರಮುಖ ಆಕರ್ಷಣೆಯಾದ ಲೈಟಿಂಗ್ ನೋಡಲು ಜನರಿಗೆ ದೊರೆಯಲಿದೆ.
ಯಾವುದು ಮುಂದುವರಿಕೆ?
* ಮಕ್ಕಳ, ಮಹಿಳಾ ದಸರಾ
ಯಾವುದು ಅನುಮಾನ?
* ಕವಿಗೋಷ್ಠಿ
ದಸರಾ ಕಾರ್ಯಕ್ರಮಗಳಿಗೆ ಸರ್ಕಾರ ದುಡ್ಡು ಖರ್ಚು ಮಾಡುವುದನ್ನು ಕಡಿಮೆ ಮಾಡಿ, ಪ್ರಾಯೋಜಕತ್ವದಲ್ಲಿ ಆಯೋಜನೆ ಮಾಡುವ ಕುರಿತು ಆಲೋಚನೆ ಇದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಪಡೆದುಕೊಳ್ಳಲಾಗುವುದು. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಂಡು ರೂಪುರೇಷೆ ಸಿದ್ಧಪಡಿಸಲಾಗುವುದು.
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ
ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕಲಾವಿದರು ಇನ್ನೂ ಚೇತರಿಸಿಕೊಂಡಿಲ್ಲ. ದಸರಾ ಕಲಾವಿದರಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಆದ್ದರಿಂದ ಪ್ರತಿವರ್ಷದಂತೆ ದಸರಾ ಮಾಡಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಬೇಕು.
ಡಾ.ಪಿ.ಸೋಮಶೇಖರ್, ಜಾನಪದ ಕಲಾವಿದ
ಲಕ್ಷಾಂತರ ರೂ. ಖರ್ಚು ಮಾಡಿ ದೊಡ್ಡ ಕಲಾವಿದರನ್ನು ಕರೆಸುವುದನ್ನು ಕೈಬಿಟ್ಟು, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಬೇಕು. ಇದರಿಂದ ಕಡಿಮೆ ಖರ್ಚಿನಲ್ಲಿ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಹುದು. ಇದರಿಂದ ಕಲಾವಿದರಿಗೆ ಅವಕಾಶವನ್ನು ಕೊಟ್ಟಂತಾಗಲಿದೆ.
ಸಿ.ಆರ್.ಹಿಮಾಂಶು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ