ಜಿಲ್ಲೆ

ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

reportermys

ಮಡಿಕೇರಿ: ಮಡಿಕೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆ೨೭ರಿಂದ ಅ೫ರವರಗೆ ಆಯೋಜಿಸಿರುವ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು.


ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿ, ಪುರಾಣದಲ್ಲಿ ರಾಕ್ಷಸರನ್ನು ದೇವಾನುದೇವತೆಗಳು ಸಂಹಾರ ಮಾಡಿ ಭೂಲೋಕವನ್ನು ಸಂರಕ್ಷಿಸಿದ್ದರು. ೯ ದಿನಗಳ ಕಾಲ ಆಚರಿಸುವ ನವರಾತ್ರಿಯ ಸಂದರ್ಭದಲ್ಲಿ ನಾಡಿನ ಜನತೆಗೆ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಹಾರೈಸಿದರು.


ಮಲೆನಾಡು ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕಡಿಮೆ ಇರುತ್ತವೆ. ದಸರಾದಂತಹ ಸಂದರ್ಭದ ಅವಕಾಶಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕರ್ನಾಟಕದಲ್ಲಿ ಮೈಸೂರು ಬಿಟ್ಟರೆ ೯ ದಿನಗಳ ಕಾಲ ದಸರಾ ಆಚರಣೆಯಲ್ಲಿ ಕೊಡಗು ಗಮನ ಸೆಳೆಯುತ್ತದೆ. ಶಕ್ತಿ ದೇವತೆಗಳ ಕರಗ ಉತ್ಸವಕ್ಕೂ ಇತಿಹಾಸವಿದ್ದು, ಸಾಂಕ್ರಾಮಿಕ ರೋಗಗಳನ್ನು ತಡೆಯುವ ಶಕ್ತಿ ಇದೆಯೆಂದು ನಂಬಲಾಗುತ್ತದೆ. ಇಂತಹ ದಸರಾ ಉತ್ಸವದಲ್ಲಿ ಕೆಡುಕನ್ನು ದಹಿಸಿ ಒಳಿತನ್ನು ಉಳಿಸುವಂತಾಗಲಿ ಎಂದರು.


ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ್ಮತನಾಡಿ, ಕರಗಪೂಜೆ, ದೇವಾನುದೇವತೆಗಳ ಪೂಜೆಗೆ ಸೀಮಿತವಾಗಿದ್ದ ದಸರಾ ಮತ್ತೆ ವೈಭವಕ್ಕೆ ಮರಳಿದೆ. ದಸರಾದ ಆಕರ್ಷಣೆಗಳಲ್ಲಿ ಒಂದಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿನಿಂದ ಅ.೫ರವರೆಗೆ ನಡೆಯಲಿದೆ. ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ, ಮಕ್ಕಳ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬದಸರಾಕ್ಕೆ ಸರ್ಕಾರದಿಂದ ದೊರೆತ ೧ ಕೋಟಿ ಅನುದಾನದಲ್ಲಿ ಶೇ. ೫೦ರಷ್ಟು ದೇವಾಲಯಗಳಿಗೆ ನೀಡಲಾಗಿದ್ದು, ಉಳಿದ ಅನುದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಮಡಿಕೇರಿ ಶಾಸಕರು ಸಭಾಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಶುಭಹಾರೈಸಿದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಹರೀಶ್ ಅನ್ವೇಕರ್ ಮಾತನಾಡಿದರು.


ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ಚಿನ್ನಸ್ವಾಮಿ, ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.