ಜಿಲ್ಲೆ

ಕಡಿಮೆ ವೆಚ್ಚದಲ್ಲಿ ಈ ಬಾರಿ ದಸರಾ ಆಚರಣೆ

ಸದೇಶ್ ಕಾರ್ಮಾಡ್

ಮೈಸೂರು: ರಾಜ್ಯದಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯೂ ಅಲ್ಲದ ಸರಳವೂ ಅಲ್ಲದ ಸಾಂಪ್ರದಾ ಯಿಕ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದ ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ದಸರಾ ಸಾಂಸ್ಕೃತಿಕ ಉಪ ಸಮಿತಿಯ ಪೋಸ್ಟರ್ ಬಿಡುಗಡೆ ಮಾಡಿ ದಸರಾ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ಮಾಡುವ ವೆಚ್ಚದ ಪ್ರಮಾಣ ತಗ್ಗಿಸುವ ಸಲುವಾಗಿ ಈ ಬಾರಿ ವಿವಿಧ ಕಂಪನಿಗಳಿಂದ ಪ್ರಾಯೋಜಕತ್ವ ಪಡೆಯಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಮೈಸೂರಿನತ್ತ ದೇಶವೇ ತಿರುಗಿ ನೋಡುವ ಹಾಗೆ ಉತ್ತಮ ರೀತಿಯಲ್ಲಿ ದಸರಾ ಉತ್ಸವ ಆಚರಿಸಲಾಗುವುದು ಎಂದು ಹೇಳಿದರು.

ದಸರಾ ಉತ್ಸವಕ್ಕೆ ಸರ್ಕಾರದಿಂದ ಕನ್ನಡ ಸಂಸ್ಕೃತಿ ಇಲಾಖೆಗೆ 15 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಈ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸಲಾಗುವುದು. ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲ ಕಾರ್ಯಕ್ರಮಗಳು ಇರಲಿವೆ. ಏರ್‌ಶೋ ನಡೆಸುವ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದ್ದು, ಇದುವರೆಗೆ ಅನುಮತಿ ದೊರೆತ್ತಿಲ್ಲ. ಯುವದಸರಾ, ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಇರಲಿವೆ. ಈ ಬಾರಿಯ ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೀಪಾಲಂಕಾರ ಕಳೆದ ಬಾರಿಯಂತೆ ಈ ಬಾರಿಯೂ ಇರಲಿದೆ ಎಂದರು.

ಈ ಬಾರಿ ಒಟ್ಟು 18 ಉಪಸಮಿತಿಯನ್ನು ರಚಿಸಲಾಗಿದ್ದು, ಈ ಉಪ ಸಮಿತಿಗಳಿಗೆ ಅಧಿಕಾರಿಗಳನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಅಧಿಕಾರೇತರರನ್ನು ಸಮಿತಿಗೆ ಸೇರಿಸಲು ಸದ್ಯದಲ್ಲಿಯೇ ಕ್ರಮ ವಹಿಸಲಾಗುವುದು. ಆಹಾರ ಮೇಳವನ್ನು ಈ ಬಾರಿ ಒಂದು ಕಡೆ ಮಾತ್ರ ನಡೆಸಲು ಉದ್ದೇಶಿಸಲಾಗಿದೆ. ಒಂದೇ ಮಾದರಿಯ ಆಹಾರ ಮಳಿಗೆಗಳ ಸಂಖ್ಯೆ ಕಡಿಮೆ ಮಾಡಿ ಆಹಾರ ಮಳಿಗೆ ಗಳು ವೈವಿಧ್ಯತೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕೃಷಿ ಚಟುವಟಿಕೆಯನ್ನು ಯಾವ ರೀತಿ ಕೈಗೊಳ್ಳಬೇಕು? ಯಾವ ರೀತಿಯ ಕೃಷಿ ಪದ್ಧತಿ ಹೆಚ್ಚು ಅನುಕೂಲಕರ, ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ನೀರಿನಲ್ಲಿ ಯಾವ ರೀತಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು, ಕೃಷಿ ಚಟುವಟಿಕೆಯಲ್ಲಿ ತಂತ್ರಜ್ಞಾನದ ಅಳವಡಿಕೆಯ ಅನಿವಾರ್ಯತೆ ಮುಂತಾದ ವಿಷಯಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಲು ಈ ಬಾರಿಯೂ ರೈತ ದಸರಾ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಹಾಗೂ ಇತರರು ಇದ್ದರು.