ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳ ಅತಿವೃಷ್ಟಿಯ ನಂತರ ಈ ವರ್ಷ ಬರಗಾಲ ಆವರಿಸಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಜನರು ದಸರಾ ಉತ್ಸವದಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದಾರೆ. ಭಕ್ತಿ ಭಾವದಿಂದ ದೇವಿ ಆರಾಧನೆಯಲ್ಲಿ ತೊಡಗಿದ್ದಾರೆ.
ಮಹಾತಾಯಿ ದೇವಿಯು ತಮ್ಮೆಲ್ಲ ಕಷ್ಟಗಳನ್ನು ಪರಿಹರಿಸಿ ಮುಂದಿನ ದಿನಗಳಲ್ಲಾದರೂ ಒಳ್ಳೆಯ ದಿನಗಳನ್ನು ಕೊಡಲಿ ಎಂದು ಪ್ರಾಥಿರ್ಸುತ್ತ ನವರಾತ್ರಿಯ ದೇವಿ ಆರಾಧನೆ ಮಾಡುತ್ತಿದ್ದಾರೆ.
ಸೋಮವಾರ ನವರಾತ್ರಿ ಹಾಗೂ ಮಂಗಳವಾರ ವಿಜಯದಶಮಿ ಇದ್ದು ಎರಡು ದಿನ ಎಲ್ಲೆಡೆ ಸಂಭ್ರಮ ಕಳೆಗಟ್ಟಲಿದೆ. ದೇವಸ್ಥಾನ ಹಾಗೂ ಮನೆಗಳಲ್ಲಿ ದೇವಿ ಆರಾಧನೆಯ ಜತೆಗೆ ಸಾಮೂಹಿಕ ಪ್ರಾರ್ಥನೆ, ಪೂಜಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಹಲವು ದೇವಸ್ಥಾನಗಳಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಒಂಭತ್ತು ದಿನಗಳವರೆಗೆ ಸಾಮೂಹಿಕವಾಗಿ ಆರಾಧನೆ ಮಾಡಲಾಯಿತು. ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳನ್ನು ಏರ್ಪಡಿಸಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಯಿತು.
ನವರಾತ್ರಿ ಸಂಭ್ರಮಕ್ಕೆ ಸದ್ಯ ಎಲ್ಲೆಡೆ ಖರೀದಿ ಭರಾಟೆ ಜೋರಾಗಿ ಕಂಡು ಬರುತ್ತಿದೆ. ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿ, ಮನೆಗೆ ಲಕ್ಷ್ಮಿ ಸ್ವರೂಪದ ಗೃಹ ಬಳಕೆ ವಸ್ತುಗಳನ್ನು ತರುವುದು, ಇಲೆಕ್ಟ್ರಾನಿಕ್ ವಸ್ತುಗಳು, ಟ್ರಾಕ್ಟರ್, ಬೈಕ್, ಕಾರು ಹೀಗೆ ತರಹೇವಾರಿ ಅಗತ್ಯ ವಸ್ತುಗಳ ಖರೀದಿ ಭರಪೂರ ನಡೆಯುತ್ತಿದೆ.
ಇದರಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ಗಿಜಿಗಿಡುತ್ತಿದೆ. ವ್ಯಾಪಾರಸ್ಥರು ಸಹ ತಮ್ಮ ಮಳಿಗೆಗಳಿಗೆ ದೀಪಾಲಂಕಾರ ಮಾಡಿದ್ದು, ಹುಬ್ಬಳ್ಳಿ ರಸ್ತೆಗಳು ಝಗಮಗಿಸುತ್ತಿವೆ.
ಬರದ ಛಾಯೆ: ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಬರ ಆವರಿಸಿದೆ. ಈಗಾಗಲೇ ಸರ್ಕಾರದಿಂದ ಬರಪೀಡಿತ ತಾಲೂಕು ಎಂದು ಘೊಷಣೆ ಆಗಿದೆ.
ರೈತರಿಗೆ ಸಂಪತ್ತು ತರುವ ಮುಂಗಾರು ಈ ವರ್ಷ ಕೈಕೊಟ್ಟಿತು. ಹಾಗಾಗಿ ರೈತರು ಬರಿಗೈಯಲ್ಲಿ ಕುಳಿತಿದ್ದಾರೆ. ಆದರೂ, ಪ್ರತಿ ವರ್ಷದಂತೆ ದುರ್ಗಾದೇವಿ ಪೂಜೆ, ಆರಾಧನೆ ಮಾಡುತ್ತಿದ್ದಾರೆ. ಹಿಂಗಾರು ಮಳೆಯಾದರೂ ಉತ್ತಮವಾಗಿ ಆಗಲಿ, ಉತ್ತಮ ಬೆಳೆ ಬರಲಿ ಎಂದು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಎಲ್ಲ ಕಡೆ ಸಂಭ್ರಮ ಕಳೆಗಟ್ಟಿದೆ. ಮಾರುಕಟ್ಟೆಯಲ್ಲಿ ಭರಪೂರ ಖರೀದಿ ನಡೆದಿದೆ.
ದಾಂಡಿಯಾ: ನವರಾತ್ರಿ ಎಂದರೆ ಅಲ್ಲಿ ದಾಂಡಿಯಾ, ಕೋಲಾಟ ಇರಲೇಬೇಕು. ಅಂದಾಗಲೇ ಹಬ್ಬಕ್ಕೆ ಒಂದು ಕಳೆ ಬರುತ್ತದೆ. ನಗರದ ಹಲವು ಕಡೆಗಳಲ್ಲಿ ದಾಂಡಿಯಾ ನೃತ್ಯಗಳನ್ನು ಏರ್ಪಡಿಸಲಾಗಿದೆ. ನೃತ್ಯ ಸ್ಪರ್ಧೆಗಳು ಸಹ ನಡೆಯುತ್ತಿದ್ದು, ಉತ್ತಮ ನೃತ್ಯಕ್ಕೆ ಪುರಸ್ಕಾರ ಸಹ ನೀಡಲಾಗುತ್ತಿದೆ.
ವಿವಿಧೆಡೆ ದೇವಿ ದೇವಸ್ಥಾನಗಳಲ್ಲಿ ಮಕ್ಕಳಿಗೆಗಾಗಿ ಏಕಪಾತ್ರಾಭಿನಯ, ಛದ್ಮವೇಷ, ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ, ಅಂತ್ಯಾಕ್ಷರಿ ಸ್ಪರ್ಧೆಗಳನ್ನಉ ಏರ್ಪಡಿಸಿ ಬಹುಮಾನಗಳನ್ನು ನೀಡಲಾಗುತ್ತಿದೆ.
ಒಟ್ಟಾರೆ, ದಸರಾ ಮಹೋತ್ಸವ ಅವಳಿನಗರದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದು, ಎಲ್ಲೆಡೆ ಭಕ್ತಿಯ ಹೊಳೆ ಹರಿಯುತ್ತಿದೆ.