ಮಡಿಕೇರಿ:
ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭ ಸಂಭವಿಸಿದ ಕಾಲ್ತುಳಿತದಿಂದ ಆದ ದುರ್ಘಟನೆಯ ಕರಿನೆರಳು ಈ ಬಾರಿಯ ಮಡಿಕೇರಿ ದಸರಾ ಸಂಭ್ರಮದ ಮೇಲೆ ಬೀಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮಡಿಕೇರಿ ದಸರಾ ರಾತ್ರಿ ವೇಳೆ ನಡೆಯುತ್ತಿದ್ದು, ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಪೊಲೀಸರು ಈಗಲೇ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜನಸಂದಣಿ ನಿರ್ವಹಣೆಗೆ ಸಂಬAಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಪಾಲಿಸಲೇಬೇಕಾದ ಅನಿವಾರ್ಯತೆ ಇದ್ದು ಹಲವು ನಿರ್ಬಂಧಗಳನ್ನೂ ವಿಧಿಸಲಾಗುತ್ತಿದೆ.
ಕೊಡಗಿನಲ್ಲಿ ಮಳೆಯ ಬಿರುಸು ಇನ್ನೂ ಕಡಿಮೆ ಆಗಿಲ್ಲ. ಈ ಸವಾಲಿನ ಮಧ್ಯೆಯೇ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಈ ಎಲ್ಲಾ ಸಿದ್ಧತೆಗಳ ಮಧ್ಯೆ ಬೆಂಗಳೂರು ರಾಯಲ್ ಚಾಲೆಂರ‍್ಸ್ ತಂಡ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟು 30ಕ್ಕೂ ಅಧಿಕ ಮಂದಿ ಗಾಯಗೊಂಡ ಪ್ರಕರಣ ಮಡಿಕೇರಿ ದಸರಾ ಸಂಭ್ರಮದ ಮೇಲೂ ಕಾರ್ಮೋಡ ಕವಿಯುವಂತೆ ಮಾಡಿದೆ. ಮೈಸೂರು ದಸರಾ ಹಗಲಿನಲ್ಲಿ ಜನಾಕರ್ಷಣೆಯ ಕೇಂದ್ರವಾದರೆ ಮಡಿಕೇರಿ ದಸರಾ ರಾತ್ರಿ ವರ್ಣರಂಜಿತ ಸ್ವರೂಪ ಪಡೆದುಕೊಳ್ಳುತ್ತದೆ. ಹಾಗಾಗಿ ಸಂಜೆ 7 ಗಂಟೆ ನಂತರ ಎಲ್ಲಾ ಭಾಗಗಳಿಂದಲೂ ನಗರದ ಒಳಗೆ ಜನ ಪ್ರವಾಹ ನುಗ್ಗಲು ಆರಂಭ ಆಗುತ್ತದೆ.
ಪ್ರತಿ ವರ್ಷವೂ ಮಡಿಕೇರಿ ದಸರಾದಲ್ಲಿ ಜನಸಂದಣಿ ನಿಯಂತ್ರಣ ಪೊಲೀಸರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕಿರಿದಾದ ರಸ್ತೆಗಳನ್ನು ಒಳಗೊಂಡಿರುವ ಮಡಿಕೇರಿ ನಗರದೊಳಗೆ ದಸರಾ ದಿನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಆದರೂ ದಶಮಂಟಪಗಳ ಶೋಭಾಯಾತ್ರೆ ಶುರುವಾಗುವ ಸಮಯಕ್ಕೆ ಮುಖ್ಯರಸ್ತೆಗಳಲ್ಲಿ ಜನರು ಕಿಕ್ಕಿರಿದು ಸೇರುವುದರಿಂದ ನಡೆದಾಡಲು ಕೂಡ ಸಾಧ್ಯವಾಗದಷ್ಟರ ಮಟ್ಟಿಗೆ ಜನದಟ್ಟಣೆ ಇರುತ್ತದೆ. ಪೊಲೀಸರ ಪ್ರಕಾರ ಕಳೆದ ವರ್ಷ ಸುಮಾರು 1 ಲಕ್ಷದಷ್ಟು ಜನ ಮಡಿಕೇರಿ ದಸರಾಕ್ಕೆ ಆಗಮಿಸಿದ್ದರು. 1 ಸಾವಿರದಷ್ಟು ಪೊಲೀಸರುನ್ನು ಬಂದೋಬಸ್ಥ್ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು.
ಪೊಲೀಸರ ಪ್ರಕಾರ ಕಿರಿದಾಗಿರುವ ರಸ್ತೆಗಳಲ್ಲಿ ಹೆಚ್ಚಿನ ಅಗಲ ಇರುವ ಮಂಟಪಗಳು ಸಂಚರಿಸುವುದರಿAದ ಜನರ ಓಡಾಕ್ಕೆ ಸಮಸ್ಯೆ ಆಗಿ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಂಟಪಗಳ ಅಗಲ ಕಡಿಮೆ ಮಾಡಬೇಕು ಎಂದು ಆರ್‌ಸಿಬಿ ಕಾಲ್ತುಳಿತ ಪ್ರಕರಣದ ನಂತರ ಸಿದ್ಧವಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಆಧಾರದಲ್ಲಿ ದಸರಾ ಮಂಟಪ ಸಮಿತಿಗಳಿಗೆ ಪೊಲೀಸರು ಸೂಚಿಸಿದ್ದಾರೆ. ಆದರೆ ಇದನ್ನು ಒಪ್ಪಲು ಮಂಟಪ ಸಮಿತಿಯವರು ಸಿದ್ಧರಿಲ್ಲ. ಎಲ್ಲಾ ಲೆಕ್ಕಾಚಾರಗಳನ್ನು ಹಾಕಿಯೇ ಮಂಟಪ ರಚಿಸಲಾಗಿರುತ್ತದೆ. ಈಗ ಅಗಲ ಕಡಿಮೆ ಮಾಡಿದರೆ ಟ್ಯಾಬ್ಲೋ ಪ್ರದರ್ಶನಕ್ಕೆ ಸಮಸ್ಯೆ ಆಗುತ್ತದೆ ಎನ್ನುತ್ತಾರೆ ಮಂಟಪ ಸಮಿತಿ ಪ್ರತಿನಿಧಿಗಳು.
ಮಂಟಪಗಳನ್ನು ತಯಾರಿಸುವ ಸಂದರ್ಭ ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತದೆ. ಇದಕ್ಕೆ ಹೆಚ್ಚುವರಿ ಜೋಡಣೆಗಳನ್ನು ಮಾಡುವ ಸಂದರ್ಭ ಯಾವುದೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುವುದಿಲ್ಲ. ನಿಗದಿತ ಮಿತಿಗಿಂತ ಹೆಚ್ಚು ಎತ್ತರ ಕೂಡ ಇರುತ್ತದೆ. ಇಂಥ ವಾಹನಗಳು ಸಂಚರಿಸುವ ಸಂದರ್ಭ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ಹಿಂದಿನ ವರ್ಷ ಇಂಥದ್ದೇ ಕಾರಣಕ್ಕೆ ಮಂಟಪವೊAದು ಮಗುಚಿಕೊಂಡಿತ್ತು. ಈ ರೀತಿಯ ಘಟನೆಗಳು ಸಂಭವಿಸಿದರೆ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎನ್ನುತ್ತಾರೆ ಪೊಲೀಸರು. ಹಾಗಾಗಿ ಶೋಭಾಯಾತ್ರೆಯಲ್ಲಿ ಬಳಕೆ ಆಗುವ ವಾಹನಗಳು ಆರ್‌ಟಿಒದಿಂದ ಪ್ರಮಾಣಪತ್ರ ಪಡೆಯಲೇಬೇಕು ಎನ್ನುವ ಸೂಚನೆ ನೀಡಲಾಗಿದೆ.
ಇದಕ್ಕೂ ಕೂಡ ದಸರಾ ಮಂಟಪ ಸಮಿತಿಯವರು ಒಪ್ಪುತ್ತಿಲ್ಲ.
ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡೇ ಮಂಟಪಗಳನ್ನು ತಯಾರಿಸಲಾಗಿರುತ್ತದೆ. ಅವುಗಳ ಸಾಮರ್ಥ್ಯ ಪರೀಕ್ಷೆಯನ್ನೂ ನಡೆಸಲಾಗಿರುತ್ತದೆ. ಪೊಲೀಸರು ಪ್ರಸ್ತಾಪಿಸುತ್ತಿರುವ ಮಂಟಪ ಮಗುಚಿಕೊಂಡ ಘಟನೆಗೆ ಅಲ್ಲಿಯ ರಸ್ತೆ ದುರವಸ್ಥೆ ಕಾರಣವೇ ಹೊರತೂ ಮಂಟಪದ ಗಾತ್ರ ಅಲ್ಲ. ಹಾಗಾಗಿ ಆರ್‌ಟಿಒದಿಂದ ಪ್ರಮಾಣ ಪತ್ರ ಪಡೆಯಬೇಕು ಎನ್ನುವ ನಿಬಂಧನೆಯನ್ನು ಪೊಲೀಸರು ಸಡಿಲಿಸುವ ಮೂಲಕ ದಸರಾ ಮಂಟಪ ಸಮಿತಿ ಜತೆಗೆ ಸಹಕಾರ ಕೊಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಡಿಜೆ ಬಳಕೆ ವಿರುದ್ಧವೂ ಪೊಲೀಸರು ಈಗಾಗಲೇ ದಶಮಂಟಪಗಳ ಪ್ರಮುಖರ ಸಭೆ ಕರೆದು ಸೂಚನೆಗಳನ್ನು ನೀಡಿದ್ದಾರೆ. ಶಬ್ದ ಮಿತಿ ಬಗ್ಗೆ ನ್ಯಾಯಾಲಯದ ಆದೇಶಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಡಿಜೆ ಬಳಕೆಯಿಂದ ವಿವಿಧ ರೀತಿಯ ಸಮಸ್ಯೆಗಳು ಆಗುವುದು ಮಾತ್ರವಲ್ಲದೆ ತುರ್ತು ಸಂದರ್ಭಗಳಲ್ಲಿ ಈ ಶಬ್ದದ ಮಧ್ಯೆ ಪೊಲೀಸರಿಗೆ ಸಂವಹನ ಸಾಧ್ಯವಾಗುವುದಿಲ್ಲ. ಮೈಕ್‌ಗಳ ಮೂಲಕ ಜನರಿಗೆ ಪೊಲೀಸರು ನೀಡುವ ಪ್ರಕಟಣೆಗಳೂ ತಲುಪುವುದಿಲ್ಲ ಎನ್ನುವುದು ಪೊಲೀಸರ ಆತಂಕ. ಆದರೆ ಡಿಜೆ ಇಲ್ಲದಿದ್ದರೆ ಪೌರಾಣಿಕ ಕಥಾ ಹಂದರ ಪ್ರದರ್ಶನ ಕಷ್ಟವಾಗುತ್ತದೆ. ಒಟ್ಟಾರೆ ದಸರಾವೇ ಸಪ್ಪೆ ಆಗಿ ಬಿಡುತ್ತದೆ ಎನ್ನುತ್ತಾರೆ ಮಂಟಪ ಸಮಿತಿ ಪದಾಧಿಕಾರಿಗಳು.
ದಸರಾ ಸಂದರ್ಭ ಬಾಲ ಬಿಚ್ಚುವ ಪುಂಡ ಪೋಕರಿಗಳ ಹೆಡೆಮುರಿ ಕಟ್ಟಲು ಕೂಡ ಪೊಲೀಸರು ಸಜ್ಜಾಗಿದ್ದಾರೆ. ಯುವತಿಯರು, ಮಹಿಳೆಯರನ್ನು ಕೆಣಕುವುದು, ಚುಡಾಯಿಸುವುದು ಕಂಡು ಬಂದರೆ ಇಂಥವರನ್ನು ಗುರುತಿಸುವ ಜಂಬೋ ಪಡೆಗಳು ಕೂಡಲೇ ಅವರನ್ನು ಹಿಡಿದು ಕಲ್ಯಾಣ ಮಂಟಪಗಳಲ್ಲಿ ಕೂಡಿ ಹಾಕುತ್ತಾರೆ. ನಂತರ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಿಡಲಾಗುತ್ತದೆ. ಸಣ್ಣ ಪುಟ್ಟ ಗಲಾಟೆಗಳಾದಲ್ಲಿ ಕೂಡ ಜಂಬೋ ತಂಡವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ. ದಸರಾದಲ್ಲಿ ಕರ್ಕಶ ಶಬ್ದ ಮಾಡುವ ಪೀಪೀಗಳ ಮಾರಾಟ ಮತ್ತು ಬಳಕೆಯನ್ನೂ ಈ ವರ್ಷವೂ ನಿಷೇಧಿಸಲಾಗಿದೆ.
ಮುಖವಾಡಗಳ ಬಳಕೆ ಮತ್ತು ಮಾರಾಟವನ್ನೂ ನಿಷೇಧಿಸಲಾಗಿದೆ. ನಗರಸಭೆ ಬಳಿಯ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾಸೀಟ್ ತನಕ ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿ ತೆರೆಯಲು ಈ ಬಾರಿ ಅವಕಾಶ ಇಲ್ಲ. ಇದರಿಂದ ಈ ಮಾರ್ಗದಲ್ಲಿ ಈ ಬಾರಿ ಸುಗಮ ಸಂಚಾರದ ನಿರೀಕ್ಷೆ ಇಟ್ಟುಕೊಳ್ಳಬಹುದು.
ರಾತ್ರಿ ವೇಳೆಯಲ್ಲಿ ನಡೆಯುವ ಮಡಿಕೇರಿ ದಸರಾಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ಆ ನಿಟ್ಟಿನಲ್ಲಿ ಜನರ ಸುರಕ್ಷತೆ ಅತೀ ಮುಖ್ಯ. ಆಸ್ತಿ ಪಾಸ್ತಿ ಹಾನಿಯಾಗದಂತೆ ಗಮನಹರಿಸುವುದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ಸಾರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಮತ್ತಿತರ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಲಿದೆ. ದಶ ಮಂಟಪಗಳ ಪ್ರದರ್ಶನಕ್ಕೆ ತೆರಳುವಾಗ ಸುರಕ್ಷತೆ ಅತೀ ಮುಖ್ಯವಾಗಿದೆ. ಹಾಗಾಗಿ ದಶ ಮಂಟಪಗಳ ನಿರ್ಮಾಣ ಸಂಬAಧ ಆರ್‌ಟಿಒದಿಂದ ಸುರಕ್ಷತೆಯ ಪ್ರಮಾಣ ಪತ್ರ ಪಡೆಯುವುದು ಅಗತ್ಯ. ಜನಸಂದಣಿ ನಿರ್ವಹಣೆ ಸಂಬAಧಿಸಿದAತೆ ಪ್ರಮಾಣಿತ ಕಾರ್ಯಚರಣೆ ವಿಧಾನ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ