ಜಿಲ್ಲೆ

ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿ

ಕೆ.ಆರ್.ಪೇಟೆ: ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಹೆಚ್ಚಿನ ಗಮನ ಅಗತ್ಯ ಎಂದು ಎಂದು ಆರ್.ಟಿ.ಒ. ಮಲ್ಲಿಕಾರ್ಜುನ ಹೇಳಿದರು. ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಆಯುಧಪೂಜೆ ಮತ್ತು ಲಕ್ಷ್ಮೀಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹತ್ತು ವರ್ಷಗಳ ಹಿಂದೆ ಆರಂಭವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಒಂದು ಸರ್ಕಾರ ಮಾಡಲಾಗದ ಹಲವು ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಶರನ್ನವರಾತ್ರಿ ಅಂಗವಾಗಿ ಕಚೇರಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಗಣಹೋಮ, ಲಕ್ಷ್ಮೀಪೂಜೆ ಹಮ್ಮಿಕೊಂಡಿರುವುದು ಮಾದರಿ ಕಾರ್ಯ ಎಂದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, ಸಮಾಜದ ಎಲ್ಲರೂ ಶಾಂತಿ, ಸಹಬಾಳ್ವೆ, ಸೌಹಾರ್ದದಿಂದ ಜೀವನ ನಿರ್ವಹಿಸುವುದು ಸಂಸ್ಥೆ ಉದ್ದೇಶ ಎಂದರು. ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ರಾಜೇಶ್, ಕುವೆಂಪು ಗೆಳೆಯರ ಬಳಗದ ಅಧ್ಯಕ್ಷ ಕೆಬಿಸಿ ಮಂಜು, ಬಂಡಿಹೊಳೆ ಅಶೋಕ್, ಸೋಮಶೇಖರ್, ರವಿ, ಯುವರಾಜ್ ಇತರರು ಇದ್ದರು.