ಮಡಿಕೇರಿ:
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಇಲ್ಲದೆ ಸುರಕ್ಷಿತವಾಗಿ ಮಡಿಕೇರಿ ದಸರಾ ಆಯೋಜನೆ ನಿಟ್ಟಿನಲ್ಲಿ ಪೊಲೀಸರು ಈ ಬಾರಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಐಪಿಎಲ್ ವಿಜಯೋತ್ಸವ ಸಂದರ್ಭ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಇಂಥ ದುರ್ಘಟನೆಗಳು ಮರುಕಳಿಸದಂತೆ ಸರ್ಕಾರ ಎಸ್‌ಒಪಿ ರೂಪಿಸಿದ್ದು, ಇದರ ಆಧಾರದಲ್ಲಿ ಮಡಿಕೇರಿ ದಸರಾ ಸಂದರ್ಭ ಆಯೋಜಕರ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗಿದೆ.
ಮಡಿಕೇರಿ ನಗರದಲ್ಲಿ ನವರಾತ್ರಿ ಉತ್ಸವ ಈ ವರ್ಷ ಸೆ.22ರಿಂದ ಪ್ರಾರಂಭವಾಗಲಿದ್ದು ನವರಾತ್ರಿಯ 10ನೇ ದಿನ ವಿಜಯದಶಮಿಯನ್ನು ದಸರಾ ಹಬ್ಬವಾಗಿ ಅಕ್ಟೋಬರ್ 2 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭ ರಾತ್ರಿ ವೇಳೆ ಮಡಿಕೇರಿಯಲ್ಲಿ ನಡೆಯುವ ದಶಮಂಟಪಗಳ ದಸರಾ ಮೆರವಣಿಗೆ ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಮಡಿಕೇರಿಗೆ ಆಗಮಿಸುತ್ತಾರೆ. ಮಡಿಕೇರಿ ನಗರ ಭೌಗೋಳಿಕವಾಗಿ ಎತ್ತರ-ತಗ್ಗಿನಿಂದ ಕೂಡಿದ ಗುಡ್ಡಗಾಡು ಪ್ರದೇಶವಾಗಿದ್ದು ಇಲ್ಲಿಯ ರಸ್ತೆಗಳು ಅತ್ಯಂತ ಕಿರಿದಾದ ಏಕಪಥ ರಸ್ತೆಗಳಾಗಿವೆ. ಇದಲ್ಲದೆ ಮಡಿಕೇರಿ ನಗರದಿಂದ ಹೊರ ಹೋಗಲು ಕೂಡ ಯಾವುದೇ ಪರ್ಯಾಯ ರಸ್ತೆಗಳು ಇಲ್ಲದಿರುವುದರಿಂದ ದಶಮಂಟಪಗಳ ಮೆರವಣಿಗೆ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆಯ ಅಗತ್ಯ ಇರುವ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನೆ ತೆಗೆದುಕೊಂಡಿದ್ದಾರೆ.
ದಶಮಂಟಪಗಳು ನಗರದ ಪ್ರಮುಖ ಏಕಪಥ ರಸ್ತೆಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಅತ್ಯಂತ ವಿಜೃಂಭಣೆಯಿAದ ಮೆರವಣಿಗೆಯಲ್ಲಿ ಸಾಗುವ ಸಂದರ್ಭ ದಸರಾ ವೀಕ್ಷಣೆಗೆ ಬರುವ ಜನರ ಹಾಗೂ ಆ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಜನರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕಾಗಿರುವುದು ದಸರಾ ಆಯೋಜಕರ ಕರ್ತವ್ಯವಾಗಿದೆ ಎನ್ನುವುದನ್ನು ನೆನಪಿಸಿರುವ ಪೊಲೀಸರು, ಮಡಿಕೇರಿ ದಸರಾ ಹಬ್ಬದ ಮೆರವಣಿಗೆಯ ವೀಕ್ಷಣೆಗಾಗಿ ಬರುವ ಸಾರ್ವಜನಿಕರ, ವಿಶೇಷವಾಗಿ ಹಿರಿಯ ನಾಗರೀಕರ, ಮಹಿಳೆಯರ ಹಾಗೂ ಮಕ್ಕಳ ಮತ್ತು ಮಡಿಕೇರಿ ನಗರದ ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿನ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಕೂಗಳತೆಯ ದೂರದಲ್ಲಿರುವ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗರ್ಭಿಣಿಯರ, ಹಿರಿಯರ ಸುರಕ್ಷತೆಯ ನಿಟ್ಟಿನಲ್ಲಿ ಮಡಿಕೇರಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಯವರು ಕಡ್ಡಾಯವಾಗಿ ಪಾಲಿಸಲೇಬೇಕಾದ ಸೂಚನೆಗಳನ್ನು ಸಂಬAಧಿಸಿದವರಿಗೆ ಕಳುಹಿಸಲಾಗಿದೆ.
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ನಂ 23385/2023ರ ಆದೇಶ ಪಾಲನೆ, ಧ್ವನಿವರ್ಧಕ, ಮ್ಯೂಸಿಕ್ ಸಿಸ್ಟಮ್ ಅನ್ನು ಪರಿಸರ ಸಂರಕ್ಷಣಾ ಕಾಯಿದೆ -1986 ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ನಿರ್ದಿಷ್ಟ ಪಡಿಸಿದ ಸಮಯ ಹಾಗೂ ಡೆಸಿಬೆಲ್‌ಗಳಂತೆ ಬಳಸಬೇಕು. ಮೆರವಣಿಗೆಯಲ್ಲಿ ಸಾಗುವ ಮಂಟಪಗಳನ್ನು ಟ್ರ‍್ಯಾಕ್ಟರ್, ಟ್ರೈಲರ್‌ಗಳ ಮೇಲೆ ಭಾರತೀಯ ಮೋಟಾರು ವಾಹನ ಕಾಯಿದೆ-1988ರ ನಿಯಮಗಳಂತೆ ತಯಾರಿಸಬೇಕು. ದಸರಾ ದಿನದ ಹಿಂದಿನ ದಿನಗಳಲ್ಲಿ ದಶ ಮಂಟಪಗಳ ನಿರ್ಮಾಣ ಸಂದರ್ಭ ಜನರ ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ಸಾರ್ವಜನಿಕ ರಸ್ತೆಗಳನ್ನು ಬಳಸಬಾರದು. ಪ್ರತಿಯೊಂದು ಮಂಟಪಗಳನ್ನು ಅವುಗಳ ಸ್ಥಿರತೆಯ ಬಗ್ಗೆ ತಾಂತ್ರಿಕ ಪರಿಣಿತರಿಂದ ಪರಿಶೀಲಿಸಿ ದೃಢೀಕರಿಸಿಕೊಳ್ಳಬೇಕು. ಮತ್ತು ಹಾಗೆ ದೃಢೀಕರಿಸಿದ ನಂತರವಷ್ಟೇ ಸಾರ್ವಜನಿಕ ರಸ್ತೆಗೆ ತರಬೇಕು.
ಮಂಟಪಗಳನ್ನು ಹಾಗೂ ಕಲಾಕೃತಿಗಳನ್ನು ಅತೀ ಎತ್ತರವಾಗಿ ನಿರ್ಮಿಸುವುದರಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಮಂಟಪಗಳು ಹಾಗೂ ಕಲಾಕೃತಿಗಳು ತಾಗಿ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಮಂಟಪಗಳ ಹಾಗೂ ಕಲಾಕೃತಿಗಳ ಎತ್ತರವನ್ನು ಮಿತಿಗೊಳಿಸಬೇಕು. ದಶಮಂಟಪಗಳ ಕಥಾ ಪ್ರದರ್ಶನವನ್ನು ವೀಕ್ಷಿಸಲು ಸಹಸ್ರಾರು ಜನರು ಸೇರುವುದರಿಂದ ಅವುಗಳ ಪ್ರದರ್ಶನವನ್ನು ಸಾಕಷ್ಟು ಸ್ಥಳಾವಕಾಶ ಇರುವ ಕಡೆಗಳಲ್ಲಿ ಯಾವುದೇ ಕಾಲ್ತುಳಿತ ಹಾಗೂ ಇತರೆ ಅವಘಡಗಳಿಗೆ ಅವಕಾಶ ಆಗದಂತೆ ಪ್ರದರ್ಶಿಸಬೇಕು. ಪ್ರದರ್ಶನವನ್ನು ಕಿರಿದಾದ, ಸಣ್ಣ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿ ನೀಡಬಾರದು.
ದಶಮಂಟಪಗಳ ಕಥಾ ಪ್ರದರ್ಶನದ ಸಂದರ್ಭದಲ್ಲಿ ಸಿಡಿಮದ್ದು, ಬೆಂಕಿಯ ಜ್ವಾಲೆ, ಬಿರುಸುಬಾಣಗಳನ್ನು ಬಳಸುವುದರಿಂದ ಬೆಂಕಿ ಅವಘಡ ಸಂಭವಿಸಿ ಸೇರುವ ಜನರು ಕಾಲ್ತುಳಿತಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಇವುಗಳನ್ನು ಬಳಸದಂತೆ ಕ್ರಮವಹಿಸಬೇಕು. ಅಗ್ನಿ ನಿಯಂತ್ರಣ ಸಾಮಾಗ್ರಿಗಳನ್ನು ಪ್ರತಿ ಮಂಟಪಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ದಶಮಂಟಪಗಳನ್ನು ವೀಕ್ಷಿಸಲು ಬರುವ ಜನರು ಅನಾರೋಗ್ಯ ಅಥವಾ ಅವಪಡಕ್ಕೆ ಒಳಗಾದಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು.
ದಶ ಮಂಟಪಗಳ ಮೆರವಣಿಗೆಯಲ್ಲಿ ಭಾಗವಹಿಸುವ ಮಂಟಪಗಳನ್ನು ತೀರ್ಪುಗಾರರು ವೀಕ್ಷಿಸಿ ಅವುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡುವುದು ವಾಡಿಕೆ. ಆಯಾಯ ಮಂಟಪಗಳ ಉಸ್ತುವಾರಿ ಸಮಿತಿಯವರು ತೀರ್ಪುಗಾರರ ತೀರ್ಪನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿ ಮಂಟಪ ಸಮಿತಿಗಳ ನಡುವೆ ಪೈಪೋಟಿ ನಡೆಸಿ ಪ್ರಥಮ ಸ್ಥಾನಕ್ಕಾಗಿ ಮಂಟಪ ಹಾಗೂ ಕಲಾಕೃತಿಗಳ ಗಾತ್ರಗಳನ್ನು ಹೆಚ್ಚಿಸಿ ಅವೈಜ್ಞಾನಿಕ ವಿಧಾನಗಳನ್ನು ಬಳಸುವುದಲ್ಲದೆ ಸಿಡಿಮದ್ದು ಹಾಗು ಪಟಾಕಿಯನ್ನು ಹೆಚ್ಚಾಗಿ ಬಳಸಿ ಮತ್ತು ಹೆಚ್ಚು ಧ್ವನಿ ಹೊಮ್ಮುವ ಧ್ವನಿವರ್ಧಕಗಳನ್ನು (ಡಿಜೆ) ಹಾಗೂ ಹೆಚ್ಚು ಹೊಗೆ ಹೊಮ್ಮುವ ಉಪಕರಣಗಳನ್ನು ಬಳಸಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮಾಡುವುದು ಕಂಡು ಬಂದಿರುತ್ತದೆ.
ತೀರ್ಪನ್ನು ಪ್ರಕಟಿಸಿದ ನಂತರ ಮಂಟಪಗಳ ಸಮಿತಿಯವರು ಪರಸ್ಪರ ಜಗಳ ಮಾಡಿಕೊಂಡು ಸಾರ್ವಜನಿಕರ ಸುರಕ್ಷತೆಗೆ ಹಾಗೂ ಕಾನೂನು ಸುವ್ಯಸ್ಥೆಗೆ ಧಕ್ಕೆ ಉಂಟು ಮಾಡುವುದು ಹಾಗೂ ದಸರಾ ಆಚರಣೆಯ ನಂತರ ಮಂಟಪಗಳನ್ನು ರಸ್ತೆಯಲ್ಲಿಯೇ ಬಿಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದರಿಂದ ಉತ್ತಮ ಕಲಾಕೃತಿಯ ಆಯ್ಕೆಯ ಪ್ರಕ್ರಿಯೆ ಕೈಬಿಟ್ಟು ಎಲ್ಲಾ ಮಂಟಪಗಳಿಗೂ ಏಕರೂಪ ಸಮಾಧಾನಕರ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯವರು ಕಾರ್ಯಕ್ರಮದ ಸ್ಥಳದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಮಾತ್ರ ಧ್ವನಿವರ್ಧಕ ಅಳವಡಿಸಿ ನಗರದಾದ್ಯಂತ ಶಬ್ದ ಮಾಲಿನ್ಯ ಉಂಟಾಗದAತೆ ಮುಂಜಾಗ್ರತ ಕ್ರಮ ವಹಿಸಬೇಕು. ಆಯಾ ಮಂಟಪ ಸಮಿತಿಯವರು ಅವರ ಮಂಟಪಗಳ ಸುರಕ್ಷತೆಗಾಗಿ ಸ್ವಯಂ ಸೇವಕರನ್ನು ಬಳಸಿ ಮಂಟಪಗಳ ಸುತ್ತ ಹಗ್ಗ ಹಿಡಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದ್ದು ಈ ರೀತಿಯ ನಿರ್ಬಂಧ ವಿಧಿಸದಂತೆ ನೋಡಿಕೊಳ್ಳಬೇಕು ಎನ್ನುವ ಸೂಚನೆಗಳನ್ನು ನೀಡಲಾಗಿದೆ.
ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಇಂಥ ದುರ್ಘಟನೆಗಳು ಮರುಕಳಿಸದಂತೆ ಸರ್ಕಾರ ಎಸ್‌ಒಪಿ ರೂಪಿಸಿದ್ದು, ಇದರ ಆಧಾರದಲ್ಲಿ ಮಡಿಕೇರಿ ದಸರಾ ಸಂದರ್ಭ ಆಯೋಜಕರ ಹೊಣೆಗಾರಿಕೆ ಸೂಚಿಸಲಾಗಿದೆ. ಈ ಎಲ್ಲಾ ಸೂಚನೆಗಳನ್ನು ಪಾಲಿಸಿ ಇತಿಹಾಸ ಪ್ರಸಿದ್ದ ಮಡಿಕೇರಿ ದಸರಾ ಮಹೋತ್ಸವವನ್ನು ಕಣ್ಣುಂಬಿಸಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಬರುವ ಹಾಗೂ ಮಡಿಕೇರಿ ನಗರದ ನಿವಾಸಿಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಿ ದಸರಾ ಆಚರಣೆಯನ್ನು ಯಶಸ್ವಿಯಾಗಿಸಲು ಸಹಕರಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿನಂತಿ ಮಾಡಿಕೊಳ್ಳಲಾಗಿದೆ.
ಕೆ. ರಾಮರಾಜನ್, ಕೊಡಗು ಎಸ್‌ಪಿ