ಎಚ್.ಡಿ.ಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದರೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಇದುವರೆಗೆ ಯಾವುದೇ ಶಾಶ್ವತ ಕ್ರಿಯಾ ಯೋಜನೆಗಳನ್ನು ರೂಪಿಸುವ ಬದಲು, ಬಜೆಟ್‌ನಲ್ಲಿ 2023ರಲ್ಲಿ 11 ಸಾವಿರ ಕೋಟಿ ರೂ.ಹಾಗೂ 2024ರಲ್ಲಿ 25 ಸಾವಿರ ಕೋಟಿ ರೂ. ಈ ಸಮುದಾಯಕ್ಕೆ ಮೀಸಲು ಇಟ್ಟ ಅನುದಾನವನ್ನು ಸರ್ಕಾರದ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಎಸ್‌ಸಿಪಿ, ಟಿಎಸ್‌ಟಿ ಮೀಸಲು ಹಣವನ್ನು ಯಾವುದೇ ಕಾರಣಕ್ಕೂ ಇತರ ಸಾಮಾನ್ಯ ಯೋಜನೆಗಳಿಗೆ ಬಳಸಬಾರದು, ಅನುದಾನ ಹಿಂಪಡೆಯಲು ಇರುವ 7 ಸಿ, 7 ಡಿ ನಿಯಮವನ್ನು ರದ್ದುಪಡಿಸಬೇಕು ಮತ್ತು ಈಗಾಗಲೇ ಗ್ಯಾರಂಟಿ ಯೋಜನೆ ಗಳಿಗೆ ಬಳಸಿರುವ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಹಿಂಪಡೆಯಬೇಕು, ಪರಿಶಿಷ್ಟ ಜಾತಿ ಪಂಗಡಗಳ ಮೆರಿಟ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ಆದಾಯ ಮಿತಿ ರದ್ದುಗೊಳಿಸಿ ಹಿಂದೆ ನಿಗದಿಪಡಿಸಿದಂತೆ ಮರು ಜಾರಿಗೊಳಿಸಬೇಕು, ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯ ಯೋಜನೆಗಳ ಅನುಷ್ಠಾನಕ್ಕೆ ಕೂಡಲೇ ಏಕಗವಾಕ್ಷಿ ಪದ್ಧತಿಯನ್ನು ರದ್ದುಗೊಳಿಸಬೇಕು, ಸಮಾಜ ಕಲ್ಯಾಣ ಇಲಾಖೆ ಬಿಡುಗಡೆ ಮಾಡುತ್ತಿರುವ ಅನುದಾನ ನಿರ್ವಹಣೆಗೆ ಮತ್ತು ಪರಿವೀಕ್ಷಣೆ ಮಾಡಲು ಸ್ವತಂತ್ರ ಕಾವಲು ಸಮಿತಿ ನೇಮಿಸಬೇಕು ಹಾಗೂ ಅದಕ್ಕೆ ನ್ಯಾಯಾಂಗ ಅಧಿಕಾರವನ್ನು ನೀಡುವುದು ಸೇರಿದಂತೆ ಹದಿಮೂರು ಒತ್ತಾಯಗಳನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಮಲಾರ ಮಹದೇವು, ಹೆಗ್ನೂರು ನಿಂಗರಾಜು, ಜೀವಿಕ ಬಸವರಾಜು, ಗ್ರಾಮೀಣ ಮಹೇಶ್, ಡಿ.ಎಂ.ಶಿವಶಂಕರ್, ಹೊಲ್ಲಹಳ್ಳಿ ಕಾಳಸ್ವಾಮಿ, ಕಲ್ಲೇಶ, ಜೀವಿಕ ಶಿವಣ್ಣ, ಬಿಡುಗಲು ಶಿವಣ್ಣ, ಮಹೇಶ್ ಮಲಾರ, ರಾಜಶೇಖರ ಶಿರಮಳ್ಳಿ, ದಾಸಯ್ಯ ಹೊಳಹುಂಡಿ, ಸಿದ್ದರಾಜು ಹೊಮರಗಳ್ಳಿ ಇದ್ದರು.