ಹುಬ್ಬಳ್ಳಿ: ನಗರದಲ್ಲಿ ಅಖಿಲ ಭಾರತ ಮಧ್ವ ಮಹಾಮಂಡಳ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಭವಾನಿನಗರ ಸಂಯುಕ್ತ ಆಶ್ರಯದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಹಾಗೂ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಆಯೋಜಿಸಿದ್ದ ಭಜನೆ ಸ್ಪರ್ಧೆ ಕಾರ್ಯಕ್ರಮ ಮೂರು ದಿನಗಳ ವರೆಗೆ ಯಶಸ್ವಿಯಾಗಿ ನೆರವೇರಿತು.
ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರು ನಡೆಸುತ್ತಿರುವ ಸುಧಾಮಂಗಳ ಹಾಗೂ ತತ್ವಜ್ಞಾನ ಸಮ್ಮೇಳನದ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಿರ್ಣಾಯಕರಾಗಿ ರಾಜೇಂದ್ರ ದೇಶಪಾಂಡೆ, ಯಮುನಾ ಬೆಳಗಲಿ ಭಾಗವಹಿಸಿದ್ದರು. ಶ್ರೀ ಕೃಷ್ಣ ಭಜನಾ ಮಂಡಳಿ ಮೊದಲನೇ ಬಹುಮಾನ, ಜಯತೀರ್ಥ ಭಜನಾ ಮಂಡಳಿ ದ್ವಿತೀಯ, ಸುಮನ್ಯು ಭಜನಾ ಮಂಡಳಿಯವರು ತೃತೀಯ ಬಹುಮಾನ ಪಡೆದುಕೊಂಡರು. ಭಾಗವಹಿಸಿದ್ದ ಎಲ್ಲ ಭಜನಾ ಮಂಡಳಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮಠದ ಅರ್ಚಕ ಗುರುರಾಜ ಆಚಾರ್ಯರು ಮಾತನಾಡಿ, ಶ್ರೀಮಠ ಇರುವುದೇ ಧರ್ಮಕಾರ್ಯ ಮಾಡುವುದಕ್ಕಾಗಿ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ರಾಯರು ಆಶೀರ್ವದಿಸಲಿ ಎಂದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ. ಮಕ್ಕಳನ್ನೂ ಇಂತಹ ಸಮಾರಂಭಕ್ಕೆ ಕರೆದುಕೊಂಡು ಬಂದರೆ ಸನಾತನ ಹಿಂದೂ ಧರ್ಮ, ಸಮಾಜದ ಬಗ್ಗೆ ಅವರಲ್ಲಿ ಹೆಚ್ಚಿನ ಪ್ರಜ್ಞೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಟಿಟಿಡಿ ಸಂಚಾಲಕ ಗೋಪಾಲ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಎಬಿಎಂಎಂ ಗೌರವ ಕಾರ್ಯದರ್ಶಿ ಅನಂತರಾಜು ಭಟ್ ಪ್ರಾಸ್ತಾವಿಕ ಮಾತನಾಡಿದರು. ಎ.ಸಿ. ಗೋಪಾಲ್, ಎಬಿಎಂಎಂ ಅಧ್ಯಕ್ಷ ಕೃಷ್ಣರಾಜ ಕೆಮ್ತೂರ, ಮನೋಹರ ಪರ್ವತಿ, ಅಶ್ವಿನಿ ಬ್ಯಾಡಗಿ, ವನಜಾಬಾಯಿ ಕಾತೋಟಿ, ಮಠದ ಸಿಬ್ಬಂದಿ ಉಪಸ್ಥಿತರಿದ್ದರು.