ಜಿಲ್ಲೆ

ಮೂವರು ದರ್ಶನ್ ಸಹಚರರು ಮೈಸೂರು ಜೈಲಿಗೆ ಶಿಫ್ಟ್

ಮಂಜುನಾಥ ತಿಮ್ಮಯ್ಯ

ಮೈಸೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಸಹಚರರಾದ ಮೂವರನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಶುಕ್ರವಾರ ಕರೆತಂದರು.


ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಮೂವರನ್ನು ವಿಶೇಷ ಭದ್ರತೆಯೊಂದಿಗೆ ಇಲ್ಲಿಗೆ ಸ್ಥಳಾಂತರ ಮಾಡಲಾಯಿತು.

ಗುರುವಾರವಷ್ಟೇ ಪ್ರಮುಖ ಆರೋಪಿ, ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲಿಗಳಿಗೆ ಸ್ಥಳಾಂತರಿಸಲಾಗಿತ್ತು.
ವಿಚಾರಣಾಧೀನ ಕೈದಿಗಳಾದ ಎ-3 ಆರೋಪಿ ಪವನ್‌ಗೆ 1023, ಎ-4 ಆರೋಪಿ ರಾಘವೇಂದ್ರಗೆ 1024 ಮತ್ತು ಎ-5 ನಂದೀಶ್‌ಗೆ 1025 ನಂಬರ್ ನೀಡಲಾಗಿದೆ. ಗುರುವಾರ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಸ್ಥಳಾಂತರ ಪ್ರಕ್ರಿಯೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು.


ಆರೋಪಿಗಳು ಜೈಲಿಗೆ ಆಗಮಿಸುತ್ತಿದ್ದಂತೆಯೇ ಅವರ ಬ್ಯಾಗ್ ಅನ್ನು ಪರಿಶೀಲನೆ ಮಾಡಲಾಯಿತು. ನಂತರ ಆರೋಗ್ಯ ತಪಾಸಣೆ ನಡೆಸಲಾಯಿತು. ಮೂವರು ಆರೋಪಿಗಳ ಆಗಮನದ ಹಿನ್ನೆಲೆಯಲ್ಲಿ ಜೈಲಿನ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

‘ಮೂವರು ಆರೋಪಿಗಳನ್ನು ಕಾರಾಗೃಹದ ನಿಯಮಾನುಸಾರ ತಪಾಸಣೆಗೆ ಒಳಪಡಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಒಂದನೇ ಹಂತ, ಜೈಲಿನಲ್ಲಿ ಎರಡನೇ ಹಂತದ ತಪಾಸಣೆ ನಡೆಯಲಿದೆ. ವಾರಕ್ಕೆ ಎರಡು ಬಾರಿ ಕುಟುಂಬ ಸದಸ್ಯರಿಗೆ ಆರೋಪಿಗಳ ಭೇಟಿಗೆ ಅವಕಾಶ ನೀಡಲಾಗುತ್ತದೆ. ಸಾಮಾನ್ಯ ಕೈದಿಗಳಂತೆಯೇ ಇವರನ್ನು ಪರಿಗಣಿಸಲಾಗುವುದು. ಯಾವುದೇ ವಿಶೇಷ ಸೌಲಭ್ಯ ಇರಲ್ಲ. ಮೊಬೈಲ್ ಜಾಮರ್ ಇಲ್ಲ ಎಂಬ ಕಾರಣಕ್ಕೆ ನಿಷೇಧಿತ ವಸ್ತುಗಳನ್ನು ಜೈಲಿಗೆ ತರುವಂತಿಲ್ಲ ಎಂದು ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕ ರಮೇಶ್ ಕುಮಾರ್ ತಿಳಿಸಿದರು.