ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ 65 ದಿನಗಳಿಂದ ಜೈಲಿನಲ್ಲಿದ್ದಾರೆ. ಭಾನುವಾರ (ಆಗಸ್ಟ್ 25) ಬೆಳಗ್ಗೆ ಜೈಲಿನಲ್ಲಿರುವ ದರ್ಶನ್ ಅವರ ಫೋಟೋ ರಿಲೀಸ್ ಆಗಿತ್ತು. ಫೋಟೋ ರಿಲೀಸ್ ಆದ ಬಳಿಕ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಳಗ್ಗೆ ವೈರಲ್ ಆಗಿದ್ದ ದರ್ಶನ್ ಫೋಟೊಗೂ ಈಗ ರಿಲೀಸ್ ಆಗಿರುವ ವಿಡಿಯೋಗೂ ಸಾಮ್ಯತೆ ಇದೆ. ವಿಗ್ ಇಲ್ಲದೆಯೇ ಫೋಟೋದಲ್ಲಿ ಹಾಗೂ ವಿಡಿಯೋದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಎರಡರಲ್ಲೂ ಸಾಮ್ಯತೆ ಇರುವುದರಿಂದ ಈಗ ದರ್ಶನರದ್ದೆ ಎಂದು ಸಿಕ್ಕಿರುವ ವಿಡಿಯೋದಿಂದ ಹಲವು ಅನುಮಾನ ಹುಟ್ಟಿಕೊಳ್ಳುತ್ತಿವೆ.
ಪೋಟೋದಲ್ಲಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಬೆಂಗಳೂರಿನ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜತೆ ಕುಳಿತುಕೊಂಡು ಒಂದು ಕೈನಲ್ಲಿ ಕಾಫಿ ಕಪ್ ಇನ್ನೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿರುವ ದೃಶ್ಯವನ್ನು ಕಾಣಬಹುದಾಗಿದೆ. ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್ ನಾಗರಾಜ್ನನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈಗ ಹೊರಬಿದ್ದಿರುವ ವಿಡಿಯೋದಲ್ಲಿ ಯಾರೊಂದಿಗೋ ಮಾತನಾಡುತ್ತಿರುವ ದರ್ಶನ ಆತನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ವಿಡಿಯೋ ಕರೆಯಲ್ಲಿ ಇರುವವರು ಯಾರು, ಈ ವಿಡಿಯೋ ಹೇಗೆ ಹೊರಗಡೆ ಬಂತು ಎಂಬ ಸತ್ಯಾಸತ್ಯತೆಗಳು ಇನ್ನಷ್ಟೆ ತಿಳಿಯಬೇಕಿದೆ.
ಕೊಲೆ ಆರೋಪದಲ್ಲಿರುವ ದರ್ಶನ್ನನ್ನು ಜೈಲಿನಲ್ಲಿ ಸ್ಪೆಷಲ್ ಬ್ಯಾರಕ್ನಲ್ಲಿ ಇರಿಸಲಾಗಿದೆ ಎನ್ನಲಾಗುತಿತ್ತು. ಸ್ಪೆಷಲ್ ಬ್ಯಾರಕ್ನಲ್ಲಿರುವವರು ಒಬ್ಬರೆ ಇರುತ್ತಾರೆ. ಅವರಿಗೆ ಬ್ಯಾರಕ್ ಮುಂದೆ ವಾಕ್ ಮಾಡಲು ಹಾಗೂ ಪುಸ್ತಕಗಳನ್ನು ಓದಲು ಅವಕಾಶವಿರುತ್ತದೆ. ಆದರೆ ಮತ್ತೊಬ್ಬರೊಂದಿಗೆ ಮಾತನಾಡಲು ಅವಕಾಶವಿರುವುದಿಲ್ಲ ಎಂದು ಹೇಳಲಾಗುತ್ತೆ. ಆದರೆ ಈಗ ಸಿಕ್ಕಿರುವ ಫೋಟೋ ಮತ್ತು ವಿಡಿಯೋ ಕಾಲ್ಗಳನ್ನು ನೋಡಿದ್ರೆ ಜೈಲಲ್ಲಿರುವ ದರ್ಶನ್ಗೆ ರಾಜಾತಿಥ್ಯ ಸಿಗುತ್ತಿದೇಯಾ ಎಂಬ ಅನುಮಾನ ಮೂಡುತ್ತಿದೆ. ಹಾಗಾದ್ರೆ ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಐಷಾರಾಮಿ ಜೀವನ ನಡೆಸಲು ಯಾವುದೇ ತೊಂದರೆ ಇಲ್ವಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.