ಜಿಲ್ಲೆ

ಜೈಲಿನಿಂದ ದರ್ಶನ್ ಬಿಡುಗಡೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ಗೆ ಆರು ವಾರಗಳ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಅದ ಹಿನ್ನಲೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಂಜೆ ಬಿಡುಗಡೆಗೊಳಿಸಲಾಯಿತು.

ಬೆಳ್ಳಗೆಯ ನಗರಕ್ಕೆ ಆಗಮಿಸಿದ್ದ ಪತ್ನಿ ವಿಜಯಲಕ್ಷ್ಮೀ ಹೈ ಕೋರ್ಟ್‌ನಿಂದ ಜಾಮೀನು ಆದೇಶ ಪ್ರಕಟವಾದ ಬಳಿಕ ಜೈಲಿಗೆ ಭೇಟಿ ಜಾಮೀನು ಮಂಜೂರು ಆದೇಶ ಹಾಗೂ ಆರೋಗ್ಯದ ಬಗ್ಗೆ ದರ್ಶನ್ ಜತೆ ಅರ್ಧ ಗಂಟೆ ಕಾಲ ಚರ್ಚಿಸಿದರು ಹೊರ ನಡೆದರು.

ಬಳಿಕ ಸಂಜೆ ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನಕ್ಕೆ ವಿಜಯಲಕ್ಷ್ಮೀ ಹಾಗೂ ಸಂಬಂಧಿ ಸುಶಾಂತ ನಾಯ್ಡು ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅರಕೆ ತೀರಿಸಿದರು. ನಂತರ ಕೋರ್ಟ್‌ನಿಂದ ಪ್ರಕಟವಾದ ಜಾಮೀನು ಆದೇಶದ ಪ್ರತಿಯನ್ನು ಅಪ್ತರು ಜೈಲು ಅಧಿಕಾರಿಗಳಿಗೆ ತಲುಪಿದ ಬಳಿಕ ಜೈಲು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಾಯಂಕಾಲ 6.05ಕ್ಕೆ ದರ್ಶನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಸಂಬಂಧಿಯೊಬ್ಬರು ದರ್ಶನ್ ಹೊರಗಡೆ ಬರುತ್ತಿದ್ದಂತೆ ತೆಂಗಿನಕಾಯಿ ದೃಷ್ಠಿ ತೆಗೆದು ಕಾಯಿ ಒಡೆದರು. ಪತ್ನಿ ವಿಜಯಲಕ್ಷ್ಮೀ, ಸುಶಾಂತನಾಯ್ಡು ದರ್ಶನ್‌ರನ್ನು ತಮ್ಮ ರೇಂಜ್‌ರೋವರ್ ಕಾರಿನಲ್ಲಿ ಹತ್ತಿಸಿಕೊಂಡು ಕರೆದೊಯ್ದರು.

ಭದ್ರತೆ ಹೆಚ್ಚಿಸಿದ ಪೊಲೀಸರು : ದರ್ಶನ್‌ಗೆ ಜಾಮೀನು ಮಂಜೂರಾಗುತ್ತಲೇ ಬಳ್ಳಾರಿ ಜೈಲು ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಯಿತು. ವಿಷಯ ತಿಳಿದ ಅಭಿಮಾನಿಗಳು ನೂರರು ಸಂಖ್ಯೆಯಲ್ಲಿ ಸೇರುವುದನ್ನು ತಡೆಯಲು ಜೈಲು ರಸ್ತೆಯ ಎರಡು ಕಡೆ ಬಂದ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ಇಲಾಖೆಯಿಂದ 50 ಜನ ಪೊಲೀಸರು ದರ್ಶನ್‌ಗೆ ಭದ್ರತೆ ಒದಗಿಸಿದ್ದರು. ಇಬ್ಬರು ಸಿಪಿಐ, 4 ಪಿಎಸ್‌ಐ ಸೇರಿ ಇತರೆ ಸಿಬ್ಬಂದಿಗಳು ಬಳ್ಳಾರಿ ಗಡಿ ದಾಟುವವರೆಗೂ ಭದ್ರತೆ ನೀಡಿದರು. ಬಳಿಕ ಪೊಲೀಸ್ ಇಲಾಖೆ ಒಂದು ವಾಹನ ಮತ್ತು ದರ್ಶನ್ ಖಾಸಗಿ ಅಂಗರಕ್ಷಕರು ಬೆಂಗಳೂರಿನವರೆಗೂ ದರ್ಶನ್ ವಾಹನಕ್ಕೆ ಎಸ್ಕಾರ್ಟ ಮಾಡಿದರು. ಬಳ್ಳಾರಿ-ಅನಂತಪುರ, ತುಮಕೂರು ಮಾರ್ಗವಾಗಿ ರಸ್ತೆ ಮಾರ್ಗವಾಗಿಯೇ ಬೆಂಗಳೂರಿಗೆ ತೆರಳಿದರು. ದರ್ಶನ್ ಬಿಡುಗಡೆಗಾಗಿ ಕಾದಿದ್ದ ಅಭಿಮಾನಿಗಳು ಜೈ ಡಿ ಬಾಸ್, ಜೈ ಚಾಲೆಂಜಿಗ್ ಸ್ಟಾರ್ ಎಂದು ಘೋಷಣೆ ಕೂಗಿದರು.

ಜಾಮೀನು ನಂಬದ ದರ್ಶನ್ : ಜಾಮೀನು ಮಂಜೂರಾದ ಕೂಡಲೇ ವಿಷಯವನ್ನು ಜೈಲು ಸಿಬ್ಬಂದಿ ದರ್ಶನ್‌ಗೆ ತಿಳಿಸಿದರು. ಆದರೆ, ಆರಂಭದಲ್ಲಿ ವಿಷಯವನ್ನು ದರ್ಶನ್ ನಂಬಲಿಲ್ಲ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ತಿಳಿಸಿದ ಬಳಿಕ ಸಂತೋಷಗೊಂಡು ಎಂದು ಮೂಲಗಳು ತಿಳಿಸಿದವು.

ಎರಡು ತಿಂಗಳ ಬಳಿಕ ಬಿಡುಗಡೆ : ಕೊಲೆ ಪ್ರಕರಣದಲ್ಲಿ ಬೆಂಗಳೂರು ಕಾರಾಗೃಹದಲ್ಲಿದ್ದ ದರ್ಶನ್ ಅಲ್ಲಿ ವಿಶೇಷ ಅತಿಥ್ಯ ಪಡೆದಿದ್ದು ಬಯಲಾಗಿತ್ತು. ಹೀಗಾಗಿ ಅವರನ್ನು ಆ.29 ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು. ಸರಿಯಾಗಿ ಎರಡು ತಿಂಗಳ ಬಳಿಕ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.