ಮಹಾರಾಷ್ಟ್ರದ ಸುಕ್ಷೇತ್ರ ಪಂಢರಪುರದಲ್ಲಿ ಆಶಾಢ ಏಕಾದಶಿ (ದೇಶವಯನಿ ಏಕಾದಶಿ) ನಿಮಿತ್ತ ಶ್ರೀ ವಿಠ್ಠಲ-ರುಕ್ಮಿಣಿ ದೇವರ ಸರ್ಕಾರಿ ಮಹಾಪೂಜೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಪತ್ನಿ ಲತಾ ಏಕನಾಥ್ ಶಿಂಧೆ ಹಾಗೂ ಪ್ರಥಮ ವಾರಕರಿಗಳಾಧ ನಾಸಿಕ್ ಜಿಲ್ಲೆಯ ಆಶಾತಾಯಿ ಬಾಳು ಆಹೇರಿ ದಂಪತಿ ಪಾಲ್ಗೊಂಡಿದ್ದರು. 
ಜಿಲ್ಲೆ

ಲಕ್ಷಾಂತರ ಭಕ್ತರಿಂದ ಪಂಢರಿನಾಥನ ದರ್ಶನ

ಉಮದಿ (ಮಹಾರಾಷ್ಟ್ರ): ಭೂಲೋಕದ ವೈಕುಂಠ ಎಂದೇ ಪ್ರಸಿದ್ಧಿ ಹೊಂದಿರುವ ಮಹಾರಾಷ್ಟ್ರದ ಪಂಢರಪುರದಲ್ಲಿ ಆಶಾಢ ಏಕಾದಶಿ (ದೇವಶಯನಿ ಏಕಾದಶಿ)ಯಾದ ಬುಧವಾರ ಶೈತ ವಸ್ತ್ರಧಾರಿಗಳಾದ ಲಕ್ಷಾಂತರ ವಾರಕರಿ (ವೈಷ್ಣವ ಭಕ್ತರು) ಗಳು ತಾಳ, ಚಿಪಳ, ಮೃದಂಗ ವಾದ್ಯಗಳ ಸ್ವರಾಲಾಪದೊಂದಿಗೆ ಬೋಲಾ ಪುಂಡಲೀಕ ವರದಾಹರಿ ವಿಠ್ಠಲ ಶ್ರೀ ಜ್ಞಾನದೇವ ತುಕಾರಾಮ ಮಹಾರಾಜ್ ಕೀ ಜೈ… ಪಂಢರಿನಾಥಕೀ ಜೈ… ಜೈ ಜೈ ವಿಠ್ಠಲ.. ಜಯ ಘೋಷದೊಂದಿಗೆ ಸಾಗುತ್ತಿದ್ದ ದೃಶ್ಯಗಳು ಮನಮೋಹಕವಾಗಿದ್ದವು.

ಪಂಢರಪುರಕ್ಕೆ ಆಗಮಿಸುವ ಲಕ್ಷಾಂತರ ವಾರಕರಿಗಳಿಗೆ ಪಾಂಡುರಂಗನ ದರ್ಶನ ಭಾಗ್ಯದ ಜೊತೆಗೆ ಅಲ್ಲಿ ಸೃಷ್ಟಿಯಾದ ವೈಭವೋಪೇತ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಮಹಾ ಸಂಭ್ರಮ. ಆಷಾಢ ಏಕಾದಶಿ ಚಾತುರ್ಮಾಸ್ಯ ಆರಂಭದ ಪುಣ್ಯಪರ್ವವಾಗಿದ್ದು ಚಂದ್ರಭಾಗಾ (ಭೀಮಾ) ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಶ್ರೀ ವಿಠ್ಠಲ-ರುಕ್ಮಿಣಿಯ ದರ್ಶನ ಮಾಡಿ ಪುನೀತರಾಗುವುದು ವಾಡಿಕೆಯಾಗಿದೆ.

ಸರ್ಕಾರಿ ಪೂಜೆ ಆಯೋಜನೆ

ಆಷಾಢ ಏಕಾದಶಿ ನಿಮಿತ್ತ ಬುಧವಾರ ಬೆಳಗಿನ ಜಾವ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯ ದೈವ ವಿಠ್ಠಲ-ರುಕ್ಮಿಣಿ ದೇವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಪತ್ನಿ ಲತಾ ಏಕನಾಥ್ ಶಿಂಧೆಯವರ ಜೊತೆಗೆ ನಾಸಿಕ್ ಜಿಲ್ಲೆಯ ಆಶಾತಾಯಿ ಬಾಳು ಆಹೇರಿ ದಂಪತಿಯನ್ನು ಪ್ರಥಮ ವಾರಕರಿ ಎಂದು ಗುರುತಿಸಿ ಸರ್ಕಾರಿ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗೆ 3-10ಕ್ಕೆ ಮಹಾಪೂಜೆ ನೆರವೇರಿಸಿದರು.

12-14 ಲಕ್ಷಕ್ಕೂ ಅಧಿಕ ಭಕ್ತರ ಆಗಮನ

ಈ ಬಾರಿ ಸರ್ಕಾರದಿಂದ ಯಾವುದೇ ನಿರ್ಬಂಧ ಇಲ್ಲದ್ದರಿಂದ ಆಷಾಢ ಏಕಾದಶಿಯಂದು ಬುಧವಾರ 12 ರಿಂದ 14 ಲಕ್ಷಕ್ಕೂ ಅಧಿಕ ವೈಷ್ಣವ ಭಕ್ತರು ಪಂಢರಾಪುರಕ್ಕೆ ಆಗಮಿಸಿ ಚಂದ್ರಭಾಗ ನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀ ವಿಠ್ಠಲ-ರುಕ್ಮಿಣಿ ದೇವರ ಪಾದದರ್ಶನ ಮಾಡಿದರೆ ಕೆಲವರು ಮುಖದರ್ಶನ, ಕಳಸ ದರ್ಶನ ಮಾಡಿದರು. ಬಹುತೇಕರು ನಾಮದೇವ ಪೈರಿ ದರ್ಶನ ಪಡೆಯುತ್ತಿರುವ ದೃಶ್ಯ ಕಂಡುಬಂದವು.

ಧರ್ಮದರ್ಶನಕ್ಕೆ 9-10 ಕಿ.ಮೀ. ಸಾಲು

ಆಷಾಢ ಏಕಾದಶಿ ನಿಮಿತ್ತ ಲಕ್ಷಾಂತರ ವೈಷ್ಣವ ಭಕ್ತರು ರಾಜ್ಯ ಹಾಗೂ ನೆರೆರಾಜ್ಯಗಳಿಂದ ವಿಠ್ಠಲನ ನಾಮಸ್ಮರಣೆ ಮಾಡುತ್ತಾ, ಹಾಡುತ್ತಾ, ನಲಿಯುತ್ತಾ ನೂರಾರು ಕಿಲೋ ಮೀಟರ್‌ನಷ್ಟು ದೂರದಿಂದ ನಡೆದುಕೊಂಡು ಬಂದು ವಿಠ್ಠಲನ ದರ್ಶನಕ್ಕೆ 16-20 ಗಂಟೆ ಸರದಿ ಸಾಲಿನಲ್ಲಿ ನಿಂತು ಧರ್ಮದರ್ಶನ ಪಡೆಯುತ್ತಿದ್ದಾರೆ. ಮಂದಿರದಿಂದ ಸುಮಾರು 9-10 ಕಿ.ಮೀ. ದೂರದವರೆಗೆ ಧರ್ಮದರ್ಶನದ ಸಾಲು ಮುಂದುರಿದಿತ್ತು. ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಸ್ಥಳೀಯ ಕೆಲ ಸಂಘ-ಸಂಸ್ಥೆಗಳು ಉಪಾಹಾರ, ಬಾಳೆಹಣ್ಣು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಶ್ಲಾಘನೀಯ.

ಸಿಎಂಗೆ ವಾರಕರಿಗಳ ಮೆಚ್ಚುಗೆ

ದೇವಶಯನಿ ಏಕಾದಶಿಯ ನಿಮಿತ್ತ ಪಂಢರಪುರದ ಯಾತ್ರೆಯಲ್ಲಿ ಕಳೆದೆರಡು ವರ್ಷಗಳಿಂದ ಸತತವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಾಲ್ಗೊಳ್ಳುತ್ತಿದ್ದು, ಯಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದಲ್ಲದೇ, ಸ್ವತಃ ವಾರಕರಿಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ವಾರಕರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.