ಜಿಲ್ಲೆ

ದೀಪ ಬೆಳಗಿಸುತ್ತಿದ್ದವನ ಬಾಳಲ್ಲಿ ಕತ್ತಲೆ!

* ಮೈಲನಾಯಕ್ಕನಹೊಸಹಳ್ಳಿಯಲ್ಲಿ ತಾಯಿ-ಮಗನ ಕರುಣಾಂಜನಕ ವ್ಯಥೆ

* ಮೂರು ವರ್ಷದಿಂದ ಹಾಸಿಗೆಯಲ್ಲೇ ಬದುಕು

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬೆನ್ನುಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿರುವ ಮಗ... ವೃದ್ಧಾಪ್ಯದಲ್ಲಿ ಕೂಲಿನಾಲಿ ಮಾಡಿ ಮಗನನ್ನು ಸಾಕಬೇಕಾದ ಅನಿವಾರ್ಯತೆಯಲ್ಲಿ ತಾಯಿ. ಸರ್ಕಾರದ ಸವಲತ್ತು ಪಡೆಯಲು ದಾಖಲೆಗಳಿಲ್ಲದೆ ಮಗನನ್ನು ಉಳಿಸಲು ಸಂಕಟಪಡುತ್ತಿರುವ ಕರುಣಾಂಜನಕ ವ್ಯಥೆಯಿದು.

ಹೌದು.. ವೃದ್ಧಾಪ್ಯದಲ್ಲಿ ತಂದೆ-ತಾಯಿಗೆ ಮಕ್ಕಳು ಆಸರೆಯಾಗಬೇಕು. ಆದರೆ, ತಾಲೂಕಿನ ಮೈಲನಾಯಕ್ಕನಹೊಸಹಳ್ಳಿಯಲ್ಲಿ ಬೆನ್ನುಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿರುವ ಆರ್.ಪಿ.ರಂಗ (50) ಎಂಬುವವರಿಗೆ ವೃದ್ಧ ತಾಯಿ ಚಿಕ್ಕತಾಯಮ್ಮನೇ (68) ಆಸರೆ. ತಾಯಿ ಇಲ್ಲದೇ ಏನು ನಡೆಯದು ಎಂಬ ಅಸಹಾಯಕ ಸ್ಥಿತಿ ಇವರದ್ದಾಗಿದೆ. ಮಲಗಿದ್ದಲ್ಲೇ ಎಲ್ಲವೂ ಎನ್ನುವ ಸ್ಥಿತಿ ಇದ್ದು, ಸಂಕಷ್ಟದಲ್ಲೇ ಬದುಕು ಸವೆಸುತ್ತಿದ್ದಾರೆ.

ಏನಾಗಿತ್ತು?:

ಆಟೋ ಚಾಲನೆ, ದೀಪಾಲಂಕಾರ ಹಾಗೂ ಗಾರ್ಮೆಂಟ್ಸ್ ಸೇರಿ ವಿವಿಧೆಡೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಆರ್.ಪಿ.ರಂಗ 2022ರಲ್ಲಿ ತಾಲೂಕಿನ ಬೊಮ್ಮನಾಯಕ್ಕನಹಳ್ಳಿಯ ಕಾರ್ಯಕ್ರಮದಲ್ಲಿ ದೀಪಾಲಂಕಾರ ಮಾಡುವ ಸಂದರ್ಭದಲ್ಲಿ ಕಾಲು ಜಾರಿಬಿದ್ದು ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಇದಾದ ಬಳಿಕ ಕಾಲು ಹಾಗೂ ಸೊಂಟದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಯಾವುದೇ ಆಸ್ಪತ್ರೆಗೆ ತೋರಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮೂರು ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಬದುಕು ಸವೆಸುವಂತಾಗಿದೆ.

ತಾಯಿಯೇ ಆಧಾರ!!!

ವಿವಾಹವಾಗಿದ್ದರು ಪತ್ನಿ ದೂರವಾಗಿದ್ದಾರೆ. ಆದ ಕಾರಣ ವೃದ್ಧ ತಾಯಿ ಚಿಕ್ಕತಾಯಮ್ಮ ಮಗನಿಗೆ ಆಧಾರವಾಗಿದ್ದಾರೆ. ಹಳೆಯ ಮನೆಬಿಟ್ಟರೆ ಬೇರಾವ ಅನುಕೂಲವಿಲ್ಲ. ವೃದ್ಧಾಪ್ಯ ವೇತನ ಮತ್ತು ತಾಯಿ ಕೂಲಿ ಮಾಡಿದರೆ ಮಾತ್ರ ಬದುಕು ಎಂಬಂತಾಗಿದೆ. ಇತ್ತ, ದೇಹಕ್ಕೆ ದಣಿವಿಲ್ಲದೆ ದುಡಿಯುವ ಅನಿವಾರ್ಯ ಚಿಕ್ಕತಾಯಮ್ಮ ಎದುರಾಗಿದೆ.

ಆಧಾರ್ ಕಾರ್ಡ್ ಕೂಡ ಇಲ್ಲ!!

ಕೆಲಸ ಮಾಡುವಾಗ ಆಕಸ್ಮಿಕವಾಗಿ ಸಂಭವಿಸಿದ ಒಂದು ಘಟನೆ ರಂಗನ ಬದುಕು ಹಾಸಿಗೆ ಹಿಡಿಯುವಂತೆ ಮಾಡಿದೆ. ಇಂತಹ ಗಂಭೀರ ಸ್ಥಿತಿಯಲ್ಲಿದ್ದರೂ ಯಾರೊಬ್ಬರೂ ಸಹಾಯಕ್ಕೆ ಧಾವಿಸಲಿಲ್ಲ. ಇಂತಹ ಸಂಕಷ್ಟದ ಬದುಕು ಸವೆಸುತ್ತಿರುವ ರಂಗನಿಗೆ ಸರ್ಕಾರದ ಯಾವುದೇ ಸವಲತ್ತುಗಳು ತಲುಪುತ್ತಿಲ್ಲ. ಈತನಿಗೆ ಕನಿಷ್ಠ ಆಧಾರ್ ಗುರುತಿನ ಚೀಟಿ ಇಲ್ಲ. ಅಂಗವಿಕಲರ ವೇತನಕ್ಕೂ ಅರ್ಹತೆ ಸಿಕ್ಕುತ್ತಿಲ್ಲ. ಪಡಿತರ ಚೀಟಿಯಲ್ಲೂ ಈತನ ಹೆಸರಿಲ್ಲ. ಈ ಪರಿಣಾಮ ಎಲ್ಲ ಸವಲತ್ತುಗಳಿಂದ ರಂಗ ವಂಚಿತನಾಗಿದ್ದಾನೆ. ಇತ್ತೀಚಿಗೆ ಮತದಾರನ ಚೀಟಿ ಪಡೆದುಕೊಳ್ಳುವಲ್ಲಿ ಮಾತ್ರ ಸಲನಾಗಿದ್ದಾನೆ. ಗ್ರಾಪಂ ಸೇರಿ ತಾಲೂಕು ಆಡಳಿತ ಈತನ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆಯಲಿ ಎಂಬುದೇ ವಿಜಯವಾಣಿ ಕಳಕಳಿ.

ಆರ್.ಪಿ.ರಂಗನ ತಾಯಿ

ಚಿಕ್ಕತಾಯಮ್ಮ

ಈ ಹಿಂದೆ ಅವನು ಆಧಾರ್ ಕಾರ್ಡ್ ಮಾಡಿಸಿಕೊಂಡಿರಲಿಲ್ಲ. ನನಗೆ ಮಾತ್ರ ಪಡಿತರ ಚೀಟಿ ಇದೆ. ಆಧಾರ್ ಚೀಟಿ ಇಲ್ಲದ ಕಾರಣ ಮಗನಿಗೆ ಯಾವುದೇ ಸವಲತ್ತು ಸಿಗುತ್ತಿಲ್ಲ. ನನಗೆ ಬರುವ ವೃದ್ಧಾಪ್ಯ ವೇತನ ಹಾಗೂ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಇರುವ ಮನೆ ಸಹ ಶಿಥಿಲವಾಗಿದೆ. ಸರ್ಕಾರ ಸಹಾಯ ಮಾಡಿದರೆ ಬಹಳ ಅನೂಕೂಲವಾಗುತ್ತದೆ.

=

ರಾಜಣ್ಣ, ಎಂ.ಎನ್.ಹೊಸಹಳ್ಳಿ ನಿವಾಸಿ.

ಬೆನ್ನುಮೂಳೆ ಮುರಿದುಕೊಂಡು ಮೂರು ವರ್ಷದಿಂದ ಹಾಸಿಗೆ ಹಿಡಿದಿರುವ ಮಗನಿಗೆ ವೃದ್ಧ ತಾಯಿಯೇ ಆಸರೆಯಾಗಿದ್ದಾರೆ. ಆಧಾರ್ ಕಾರ್ಡ್ ಸೇರಿ ಯಾವುದೇ ಸವಲತ್ತು ತಲುಪುತ್ತಿಲ್ಲ. ತಾಯಿ ಮತ್ತು ಮಗ ಬಹಳ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ದಯಮಾಡಿ ತಹಸೀಲ್ದಾರ್ ಈ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು.