ದೇವದುರ್ಗ ಬಸ್ ನಿಲ್ದಾಣದಲ್ಲಿ ಕರೆಂಟ್ ಕಡಿತವಾಗಿದ್ದರಿಂದ ಕತ್ತಲು ಆವರಿಸಿರುವುದು.  
ಜಿಲ್ಲೆ

ಕತ್ತಲೆಯ ಕೂಪವಾದ ಬಸ್ ನಿಲ್ದಾಣ !

ರುದ್ರಪ್ಪ ವಾಲಿ

ದೇವದುರ್ಗ: ಪಟ್ಟಣದ ಬಸ್ ನಿಲ್ದಾಣ ಸಮಸ್ಯೆ ಸುಳಿಯಲ್ಲಿ ನರಳುತ್ತಿದ್ದು, ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಕಡಿತವಾದರೆ ಕತ್ತಲೆಯ ಕೂಪವಾಗಿ ಮಹಿಳೆಯರು, ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ಕಂಟ್ರೋಲರ್ ಕೌಂಟರ್ ಹೊರತುಪಡಿಸಿದರೆ ಎಲ್ಲಿಯೂ ಬೆಳಕಿನ ವ್ಯವಸ್ಥೆಯಿಲ್ಲ. ಇದರಿಂದ ಪ್ರಯಾಣಿಕರು ಮಾತ್ರವಲ್ಲ ಸಾರಿಗೆ ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ.

ರಾತ್ರಿ ಮಳೆ, ಗಾಳಿಗೆ ಬೀಸಿದರೆ ಪದೇಪದೆ ವಿದ್ಯುತ್ ಕಡಿತವಾಗುತ್ತದೆ. ಕೆಲವೊಮ್ಮೆ 10 ನಿಮಿಷದಿಂದ ಒಂದು ತಾಸಿಗೂ ಹೆಚ್ಚುಕಾಲ ಕರೆಂಟ್ ಕಡಿತವಾಗುತ್ತದೆ. ಆ ಸಂದರ್ಭದಲ್ಲಿ ನಿಲ್ದಾಣದಲ್ಲಿ ಕ್ಯಾಂಟೀನ್, ಕೆಎಂಎಫ್ ಡಬ್ಬಿಯ ಬೆಳಕು ಮಾತ್ರ ಆಸರೆಯಾಗುತ್ತದೆ. ಸಂಜೆ ನಿಲ್ದಾಣ ಜನರಿಂದ ತುಂಬಿ ತುಳುಕುತ್ತದೆ. ನೌಕರರು, ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗೆ ಬರುತ್ತಾರೆ. ರಾತ್ರಿ ಕರೆಂಟ್ ಕಡಿತವಾದರೆ ಪ್ರಯಾಣಿಕರಿಗೆ ಭಯ ಆವರಿಸಲಿದೆ.

ಕತ್ತಲಿನಲ್ಲಿ ಮಹಿಳೆಯರು, ಮಕ್ಕಳು ಕಿರಿಕಿರಿ ಅನುಭವಿಸಿದರೆ, ಕಳ್ಳರ ಭಯವೂ ಕಾಡುತ್ತದೆ. ಪ್ರಯಾಣಿಕರು ಮೊಬೈಲ್ ಸೇರಿ ತಮ್ಮ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಪ್ರಯಾಣಿಕರು ತರುವ ಕೈಚೀಲ, ಮೊಬೈಲ್, ಸಾಮಗ್ರಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಕಳೆದುಕೊಂಡವರು ಪೊಲೀಸರಿಗೆ ದೂರು ಕೊಡಲ್ಲ. ಹೀಗಾಗಿ ಇಲ್ಲಿ ನಡೆಯುವ ಕಳ್ಳತನ ಬಗ್ಗೆ ಗೊತ್ತಾಗಲ್ಲ.

ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಿಲ್ದಾಣ ಇನ್ನೂ ಸಮಸ್ಯೆ ಸುಳಿಯಿಂದ ಹೊರಬಂದಿಲ್ಲ. ಆರಂಭದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ 1.4ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ 2.6ಕೋಟಿ ರೂ.ನೀಡಲಾಯಿತು. ಆದರೂ ಕಾಮಗಾರಿಗೆ ವೇಗ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದೆ ನಿಲ್ದಾಣದಲ್ಲಿ ಟಿವಿ ಪರದೆ, ಹೆಚ್ಚುವರಿ ಆಸನ ವ್ಯವಸ್ಥೆ, ಸೀಲಿಂಗ್ ಫ್ಯಾನ್ ಹಾಕಲಾಗಿದೆ. ಒಂದು ವರ್ಷದ ಹಿಂದೆ ಸಿಸಿ ಕ್ಯಾಮರಾ ಹಾಕಿಸಲಾಗಿದೆ. ಬಸ್ ನಿಲ್ದಾಣಕ್ಕೆ ಇದುವರೆಗೆ ಕಾಂಪೌಂಡ್ ನಿರ್ಮಿಸಿಲ್ಲ. ಬಸ್ ನಿಲ್ಲುವ ಕಡೆ ಮಾತ್ರ ಸಿಸಿ ರಸ್ತೆ ಮಾಡಿದ್ದು ಉಳಿದಕಡೆ ಹಾಗೇ ಬಿಡಲಾಗಿದೆ. ಅಲ್ಪಸ್ವಲ್ಪ ಮಳೆಬಂದರೂ ಎಲ್ಲೆಂದರಲ್ಲಿ ನೀರು ನಿಲ್ಲುತ್ತದೆ.

ಮಳೆಬಂದರೆ ನೀರು ಅರ್ಧ ನಿಲ್ದಾಣದ ಒಳಗೆ ನುಗ್ಗುತ್ತದೆ. ನಿಲ್ದಾಣದ ಪಕ್ಕದಲ್ಲಿ ರಾಜ ಕಾಲುವೆ ಹರಿದು ಹೋಗಿದ್ದು ಮಳೆಯಾದರೆ ಚರಂಡಿ ನೀರು ನಿಲ್ದಾಣಕ್ಕೆ ನುಗ್ಗುತ್ತದೆ. ಇದರಿಂದ ಅರ್ಧನಿಲ್ದಾಣ ಕೆರೆಯಂತಾಗುತ್ತದೆ. ಇನ್ನು ನಾಲ್ಕೂ ಮೂಲೆಯಲ್ಲಿ ಕಸದ ಸಮಸ್ಯೆ ತಲೆದೂರಿದೆ.

ನಿಲ್ದಾಣದಲ್ಲಿ ಬ್ಯಾಟರಿ ವ್ಯವಸ್ಥೆ ಇಲ್ಲ. ಕೌಂಟರ್‌ನಲ್ಲಿ ಚಾರ್ಜ್ ಬಲ್ಬ್ ಹಾಕಿದ್ದೇವೆ. ಇನ್ವರ್ಟರ್, ಬ್ಯಾಟರಿ ಕಲ್ಪಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕರೆಂಟ್ ಹೋದ್ರೆ ಸಮಸ್ಯೆಯಾಗುತ್ತದೆ. ಚಾರ್ಜ್ ಚಾಲಿತ ಬಲ್ಬ್ ಹಾಕುವ ವ್ಯವಸ್ಥೆ ಮಾಡಲಾಗುವುದು. ರಾಮನಗೌಡ ಡಿಪೋ ವ್ಯವಸ್ಥಾಪಕ, ದೇವದುರ್ಗ ಬಸ್ ನಿಲ್ದಾಣ ಕಟ್ಟಡ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆ ಬಂದರೆ ಎರಡೂ ಕಡೆ ನೀರು ಒಳನುಗ್ಗುತ್ತವೆ. ಕೋಟಿ ಕೋಟಿ ರೂ. ಅನುದಾನ ಬಂದರೂ ವೈಜ್ಞಾನಿಕವಾಗಿ ನಿಲ್ದಾಣ ಮಾಡಿಲ್ಲ. ಸಾವಿರಾರು ಜನರು ಸೇರುವ ನಿಲ್ದಾಣದಲ್ಲಿ ಇನ್ವರ್ಟರ್ ವ್ಯವಸ್ಥೆಯಿಲ್ಲ. ಕರೆಂಟ್ ಹೋದ್ರೆ ಮಹಿಳೆಯರು, ಮಕ್ಕಳ ಭದ್ರತೆಗೆ ಗ್ಯಾರಂಟಿ ಇಲ್ಲ. ಮೊಬೈಲ್, ವಸ್ತುಗಳ ಕಳ್ಳತನ ಘಟನೆಗಳು ನಡೆಯುತ್ತವೆ. ಶಂಕರ ಕೊಪ್ಪರ ಪ್ರಯಾಣಿಕ