ಜಿಲ್ಲೆ

ಸಿದ್ದಾಪುರ-ನೆಲ್ಯಹುದಿಕೇರಿ ರಸ್ತೆಯಲ್ಲಿ ಗುಂಡಿಗಳ ದರ್ಬಾರ್

ಪಿ.ವಿ. ಅಂತೋಣಿ ಸಿದ್ದಾಪುರ
ಸಿದ್ದಾಪುರ ನೆಲ್ಯಹುದಿಕೇರಿ ಮುಖ್ಯರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರ ಪಾಡು ಹೇಳತೀರದಂತಾಗಿದೆ.

ಸಿದ್ದಾಪುರದಿಂದ ನೆಲ್ಯಹುದಿಕೇರಿಗೆ ತೆರಳುವ ಮುಖ್ಯರಸ್ತೆಯಲ್ಲಿ ಹೆಚ್ಚಾಗಿ ಗುಂಡಿಗಳೇ ಇವೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ತೆರಳುತ್ತಿದ್ದು, ಮಳೆ ಬಂತೆಂದರೆ ಗುಂಡಿಗಳು ಮಳೆ ನೀರಿನಿಂದ ತುಂಬಿ, ಅಪಾಯಕ್ಕೆ ಆಹ್ವಾನ ನೀಡುತ್ತವೆ. ವಾಹನ ಸವಾರರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಸಿದ್ದಾಪುರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಸಿದ್ದಾಪುರ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಹದಗೆಟ್ಟ ರಸ್ತೆಯಿಂದ ಆಗುತ್ತಿರುವ ತೊಂದರೆಗಳ ಕುರಿತು ಬೆಳಕು ಚೆಲ್ಲಿದರು.

ಕೊಣನೂರು ಮಾಕುಟ್ಟ-ರಾಜ್ಯ ಹೆದ್ದಾರಿಗೆ ಒಳಪಡುವ ಈ ರಸ್ತೆ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿ ದಿನವೂ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ದುಬಾರೆ ಆನೆ ಶಿಬಿರ ಕೂಡ ಇದೇ ರಸ್ತೆಯ ಸಮೀಪದಲ್ಲೇ ಇದೆ. ಹೀಗಿದ್ದರೂ, ರಸ್ತೆಯ ಅಭಿವೃದ್ಧಿ ಕಡೆಗೆ ಯಾರೊಬ್ಬರೂ ಗಮನ ಹರಿಸಿಲ್ಲ. ಈ ರಸ್ತೆಯ ಇನ್ನೂ ಕೆಲವು ಭಾಗ ಹಲವು ವರ್ಷಗಳಿಂದ ಡಾಂಬರನ್ನೇ ಕಂಡಿಲ್ಲ. ಇತ್ತೀಚೆಗೆ ಅಲ್ಲಲ್ಲಿ ಕೆಲವು ದೊಡ್ಡ-ದೊಡ್ಡ ಗುಂಡಿಗಳನ್ನು ಮುಚ್ಚಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.

ಆಟೋಗಳು ಈ ರಸ್ತೆಯಲ್ಲಿ ನಿತ್ಯ ಓಡಾಡುವುದರಿಂದ ದುರಸ್ತಿಗೀಡಾಗುತ್ತಿವೆ. ವಾಹನವನ್ನು ದುರಸ್ತಿಪಡಿಸಲು ಆಟೋ ಚಾಲಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ದುಡಿದ ದುಡ್ಡೆಲ್ಲ ಆಟೋ ರಿಪೇರಿಗೆ ಆಗುತ್ತಿದೆ. ಅಂತಾರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಈ ರೀತಿಯಲ್ಲಿ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದು ಸವಾರರಿಗೆ ಸವಾಲಾಗಿದೆ. ಹಾಡಹಗಲೇ ಕಾಡಾನೆ ಪ್ರತ್ಯಕ್ಷಗೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಭಯದಲ್ಲೇ ಸಂಚರಿಸಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿಯುತ್ತಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಪ್ರಾರಂಭವಾದ ಮಳೆ ಈ ಸೆಪ್ಟೆಂಬರ್‌ನಲ್ಲೂ ಮುಂದುವರಿದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರಸ್ತೆಗಳು ಹಾಳಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯ ನಾನಾ ಸಂಘಟನೆಗಳು ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ವ್ಯಾಪ್ತಿಯ ನದಿ ತೀರದಲ್ಲಿ ಪ್ರವಾಹ ಎದುರಾಗಿದ್ದ ಗ್ರಾಮಗಳಿಗೆ ಅಧಿಕಾರಿಗಳು ಹಾಗೂ ಸಚಿವರು ಜಿಲ್ಲಾಧಿಕಾರಿಗಳು ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಇದೇ ಹದಗೆಟ್ಟ ಮುಖ್ಯರಸ್ತೆಯ ಮೂಲಕ ತೆರಳಿದ್ದರು. ವಿಪರ್ಯಾಸವೆಂದರೆ ಹದಗೆಟ್ಟ ರಸ್ತೆಯ ಪ್ರಯಾಣದ ಸಂಕಟ ಅರಿವಿದ್ದರೂ ಯಾರೂ ಈ ಕುರಿತು ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಶೋಚನೀಯ.