ಯಲ್ಲಮ್ಮನವಾಡಿ ಗ್ರಾಮಕ್ಕೆ ಮುಂಬೈನಿಂದ ಆಗಮಿಸಿದ ಯುವಕನಿಂದ ಐಗಳಿ ಪಿಎಸ್‌ಐ ಕೆ.ಎಸ್.ಕೋಚರಿ, ಡಾ.ಚಂದ್ರಕಾಂತ ಧೂಳಶೆಟ್ಟಿ ಮಾಹಿತಿ ಪಡೆದರು. 
ಜಿಲ್ಲೆ

ಧಾರಾವಿಯಿಂದ ಯಲ್ಲಮ್ಮನವಾಡಿಗೆ ಬಂದ ಯುವಕ!

ಕೊಕಟನೂರ: ಮುಂಬೈನ ಧಾರಾವಿಯಿಂದ ಕಾಲ್ನಡಿಗೆ ಮೂಲಕ ಹೊರಟಿದ್ದ ಯುವಕನೋರ್ವ ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮಕ್ಕೆ ಆಗಮಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಕೆಲಸ ಹುಡುಕಿಕೊಂಡು ಯಲ್ಲಮ್ಮನವಾಡಿಯಿಂದ ಮುಂಬೈಗೆ ತೆರಳಿದ್ದ ಯುವಕ ಮಂಗಳವಾರ ಸಂಜೆ ಗ್ರಾಮಸ್ಥರ ಕಣ್ಣಿಗೆ ಬೀಳದೆ ತನ್ನ ಮನೆ ಸೇರಿದ್ದ. ಬುಧವಾರ ಈ ಸುದ್ದಿ ತಿಳಿದ ಗ್ರಾಮಸ್ಥರು ಪೊಲೀಸ್, ಆರೋಗ್ಯ ಹಾಗೂ ಪಂಚಾಯಿತಿ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ಡಾ.ಚಂದ್ರಕಾಂತ ಧೂಳಶೆಟ್ಟಿ ಹಾಗೂ ಐಗಳಿ ಪಿಎಸ್‌ಐ ಕೆ.ಎಸ್. ಕೋಚರಿ ಸ್ಥಳಕ್ಕೆ ಆಗಮಿಸಿ ಯುವಕನ ವಿಚಾರಣೆ ನಡೆಸಿದರು. ಈ ವೇಳೆ ಯುವಕ ಕಾಲ್ನಡಿಗೆಯಿಂದಲೇ ಬಂದಿದ್ದಾಗಿ ತಿಳಿಸಿದ್ದಾನೆ. ಬಳಿಕ ಯುವಕನನ್ನು ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಸೀಲ್ ಹಾಕಿ ಮನೆಯಲ್ಲಿಯೇ ಇರುವಂತೆ ಸೂಚಿಸಲಾಯಿತು.

ಯುವಕನಿಗೆ ತಾಕೀತು: ಅಧಿಕಾರಿಗಳು ಕೈಗೊಂಡ ಕ್ರಮಕ್ಕೆ ನಿವಾಸಿಗಳು ಸಮ್ಮತಿಸದೆ, ಯುವಕನನ್ನು 14 ದಿನಗಳ ಕಾಲ ಬೇರೆ ಕಡೆ ಕ್ವಾರಂಟೈನ್‌ನಲ್ಲಿ ಇಡುವಂತೆ ಪಟ್ಟುಹಿಡಿದರು. ಬಳಿಕ ಪೊಲೀಸರು ಸ್ಥಳೀಯರ ಮನವೊಲಿಸಿ, ಎಲ್ಲೂ ಸುತ್ತಾಡದಂತೆ ಯುವಕನಿಗೆ ತಾಕೀತು ಮಾಡಿ ಮನೆಯಲ್ಲೇ ಇರುವಂತೆ ಸೂಚಿಸಿದರು.

ಚೆಕ್‌ಪೋಸ್ಟ್‌ನಲ್ಲಿ ರಾತ್ರಿ ವೇಳೆ ನಿರ್ಲಕ್ಷೃ: ಲಾಕ್‌ಡೌನ್ ಇದ್ದರೂ ಯುವಕ 500 ಕಿ.ಮೀ. ಹೇಗೆ ನಡೆದುಕೊಂಡು ಬಂದ ಎಂಬುದು ಅಚ್ಚರಿ. ಈಗಾಗಲೇ ಅಥಣಿ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಿಗೆ 10,700 ಜನರು ಬಂದಿದ್ದಾರೆ. ಬೇರೆ ಕಡೆಯಿಂದ ಬರುವ ಜನರನ್ನು ತಡೆಯಲೆಂದು ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ನಿಯೋಜನೆಗೊಳಿಸಿದ್ದರೂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಮದಬಾವಿ ಚೆಕ್‌ಪೋಸ್ಟ್‌ಗೆ ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ರಾತ್ರಿ ಭೇಟಿ ನೀಡಿದಾಗ ಅಲ್ಲಿಂದ ಸಿಬ್ಬಂದಿ ನಿದ್ರೆ ಮಾಡುತ್ತಿದ್ದರು. ‘ಬೇರೆ ರಾಜ್ಯದಿಂದ ಜನರು ನುಸುಳಿ ಬರುತ್ತಿದ್ದಾರೆ ಎಂಬ ದೂರಿನನ್ವಯ ರಾತ್ರಿ ಭೇಟಿ ನೀಡಿದಾಗ ಚೆಕ್‌ಪೋಸ್ಟ್ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. ಮತ್ತೊಮ್ಮೆ ಹೀಗೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದೇನೆ’ ಎಂದು ಇಒ ತಿಳಿಸಿದ್ದಾರೆ.