ಉಡುಪಿ: ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕ ಸೇವೆಯೇ ಕಾರಣದಿಂದ ಉಡುಪಿ ಜಿಲ್ಲೆ ಆರಂಭದಿಂದ ಇಲ್ಲಿಯವರೆಗೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಡಿಜಿಪಿ ಸಿಐಡಿ ಡಾ. ಎಂ ಎ ಸಲೀಂ ಹೇಳಿದರು.
ಶನಿವಾರ ನಗರದ ಯುನೈಟೆಟ್ ಬಾಸೆಲ್ ಮಿಷನ್ ಜುಬ್ಲಿ ಚರ್ಚ್ ಹಾಲ್ ನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಡಿ ಎ ಆರ್ 1999ರ ಪ್ರಥಮ ತಂಡದ ರಜತ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ವ್ಯವಸ್ಥೆಯಲ್ಲಿ ಇಂದು ವಿಶೇಷ ಬದಲಾವಣೆಗಳಾಗಿದ್ದು ಅದಕ್ಕೆ ತಕ್ಕಂತೆ ನಮ್ಮ ಕಾರ್ಯವೈಖರಿ ಕೂಡ ಬದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಜೊತೆಯಲ್ಲಿ ಕರಾವಳಿ ಕಾವಲು ಪಡೆ ಹಾಗೂ ನಕ್ಸಲ್ ನಿಗ್ರಹ ದಳ ಕಾರ್ಯಾಚರಿಸುತ್ತಿದೆ. ಇದರಿಂದ ಸಾರ್ವಜನಿಕರೊಂದಿಗೆ ಪೊಲೀಸರು ಹೆಚ್ಚು ನಿಕಟವಾದ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಸಂಘಟಿತವಾದ ಪೊಲೀಸ್ ವ್ಯವಸ್ಥೆಗೆ ಪೂರಕ ಜಿಲ್ಲೆಯಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ 1999ರ ಬ್ಯಾಚ್ ಗೆ ತರಬೇತಿ ನೀಡಿದ ಗುರುಗಳಿಗೆ ಸಿಬಂದಿಗೆ ಗೌರವಾರ್ಪಣೆ ಜರುಗಿತು. ನಿಧನರಾದ ತಂಡದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ, ಆಸರೆ ಸಂಸ್ಥೆಯ ಜೈ ವಿಠ್ಠಲ್, ಪ್ರೋಬೆಶನರಿ ಐಪಿಎಸ್ ಅಧಿಕಾರಿ ಹರ್ಷಪ್ರಿಯಂವದ, ಆರ್ಕಿಟೇಕ್ಟ್ ಸೈಮನ್ ಉಪಸ್ಥಿತರಿದ್ದರು. 99ರ ಬ್ಯಾಚಿನ ಶಿವು ಪ್ರಾರ್ಥನೆ ನೆರವೇರಿಸಿ, ವಿರೇಂದ್ರ ಶೆಟ್ಟಿ ಸ್ವಾಗತಿಸಿ, ಸುಧಾಕರ ಎರ್ಮಾಳ್ ವಂದಿಸಿದರು. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಆರ್ ಸಿಬ್ಬಂದಿ ಯೋಗೇಶ ನಾಯ್ಕ & ಸ್ಟಾರ್ ಈವೆಂಟ್ಸ್ ಪ್ರವೀಣ ತೊನ್ಸೆ ಕಾರ್ಯಕ್ರಮ ನಿರೂಪಿಸಿದರು.