ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು-ಸವಣೂರು ಭಾಗದಲ್ಲಿರುವ ನರಿಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು. 
ಜಿಲ್ಲೆ

ತೆರವಾಗದ ಅಪಾಯಕಾರಿ ವೃಕ್ಷಗಳು: ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯಲ್ಲಿರುವ ಮರಗಳು : ಜನಪ್ರತಿನಿಧಿಗಳ ಸೂಚನೆಗೆ ಡೋಂಟ್‌ಕೇರ್

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಕ್ರಮಕೈಗೊಳ್ಳುವಂತೆ ಗ್ರಾಪಂ ಸಭೆ, ಪ್ರಾಕೃತಿಕ ವಿಕೋಪ ಹಾನಿ ತಡೆಯ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಧ್ವನಿ ಎತ್ತುತ್ತಲೇ ಇದ್ದರೂ ಕೆಲವೆಡೆ ಮರಗಳು ಹಾಗೇ ಉಳಿದುಕೊಂಡಿವೆ ಎಂಬುದಕ್ಕೆ ನರಿಮೊಗರು ವ್ಯಾಪ್ತಿಯ ರಸ್ತೆ ಬದಿಯಲ್ಲಿರುವ ಮರಗಳೇ ಸಾಕ್ಷಿ.

ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯಲ್ಲಿ ಸಂಚರಿಸುವವರಿಗೆ ಈ ಅಪಾಯಕಾರಿ ಮರಗಳು ಕಂಡುಬರುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ಅಪಾಯಕಾರಿಯಾಗಿರುವ ಮರಗಳ ಕುರಿತು ನಿರ್ಲಕ್ಷೃ ವಹಿಸಿದ್ದಾರೆ. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು-ಸವಣೂರು ನಡುವಣ ಭಾಗದ ನರಿಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಮೊಗರು ಜಂಕ್ಷನ್ ಸಮೀಪ ಹಾಗೂ ಪಾಪೆತ್ತಡ್ಕ ಮಸೀದಿ ಹತ್ತಿರ ರಸ್ತೆ ಬದಿಯಲ್ಲಿ ಹಲವು ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಗ್ರಾಮಸ್ಥರು ಹಾಗೂ ವಾಹನ ಸವಾರರು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಲೇ ಇದ್ದರೂ ಅಧಿಕಾರಿಗಳಿಂದ ಪ್ರತಿಕ್ರಿಯೆ ಶೂನ್ಯವಾಗಿದೆ.

ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯು ನರಿಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ತಿಂಗಳ ಹಿಂದೆ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿ ನಡೆದಿತ್ತು. ಆಗ ಕೆಲವು ಕಡೆಗಳಲ್ಲಿ ಮರಗಳನ್ನು ತೆರವುಗೊಳಿಸದೆ, ಮರದ ಬುಡದ ತನಕವೂ ಮಣ್ಣು ಅಗೆದು ಮರಗಳನ್ನು ಹಾಗೆಯೇ ಬಿಡಲಾಗಿತ್ತು. ಇಂತಹ ಮರಗಳು ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಪ್ರಮುಖ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇರ ಸಂಪರ್ಕದ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದ್ದು, ಈ ಭಾಗದಲ್ಲಿ ಸದಾ ಗಾಳಿ ಮಳೆಯಾಗುತ್ತಲೇ ಇರುತ್ತದೆ. ಈ ಸಂದರ್ಭ ಮರಗಳು ರಸ್ತೆಗೆ, ವಾಹನ ಸವಾರರ ಮೇಲೆಯೇ ಉರುಳುವ ಸಂಭವವಿದ್ದು, ಅಧಿಕಾರಿಗಳು ಇದನ್ನು ಗಮನಿಸಿ ಸಮಸ್ಯೆ ಶೀಘ್ರ ಬಗೆಹರಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ. ಅಧಿಕಾರಿಯಿಂದ ಉಡಾಫೆ ಪ್ರತಿಕ್ರಿಯೆ

ಅಪಾಯಕಾರಿ ಮರಗಳ ತೆರವಿನ ವಿಚಾರದಲ್ಲಿ ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್‌ಕುಮಾರ್ ಬಿ.ಎಂ ಅವರನ್ನು ಸಂಪರ್ಕಿಸಿದಾಗ ತಮಗೆ ನರಿಮೊಗರು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳಿರುವ ವಿಚಾರವೇ ತಿಳಿದಿಲ್ಲ. ಯಾರೊಬ್ಬರೂ ಮಾಹಿತಿ ನೀಡಿಲ್ಲ. ಮಾಧ್ಯಮಕ್ಕೆ ವರದಿ ಮಾಡಿದರೆ ಉತ್ತಮ ಎಂದು ಲೇವಡಿ ಮಾಡಿದ್ದಾರೆ.

ನರಿಮೊಗರು ಜಂಕ್ಷನ್ ಸಮೀಪ ಮತ್ತು ಪಾಪೆತ್ತಡ್ಕ ಮಸೀದಿ ಹತ್ತಿರ ರಸ್ತೆ ಬದಿಯಲ್ಲಿ ಹಲವು ಅಪಾಯಕಾರಿ ಮರಗಳಿವೆ. ರಸ್ತೆ ಕಾಮಗಾರಿ ಸಂದರ್ಭ ನಾನು ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಎರಡೆರಡು ಬಾರಿ ಮನವಿ ಮಾಡಿದ್ದೆ. ಅಪಾಯಗಳು ಸಂಭವಿಸಿದರೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ. - ಪ್ರವೀಣ್ ಆಚಾರ್ಯ ನರಿಮೊಗರು, ಸಾಮಾಜಿಕ ಕಾರ್ಯಕರ್ತ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಮರಗಳಿರುವ ವಿಚಾರದ ಕುರಿತು ಆ ಭಾಗದ ಸಂಬಂಧಪಟ್ಟ ವಲಯಾರಣ್ಯಾಧಿಕಾರಿಗೆ ಪರಿಶೀಲಿಸಲು ಸೂಚಿಸುತ್ತೇನೆ. - ಸುಬ್ಬಯ್ಯ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪುತ್ತೂರು https://www.vijayavani.net/three-arrested-for-trying-to-rob-finance-office https://www.vijayavani.net/netravati-flow-is-the-maximum-water-level