ಜಿಲ್ಲೆ

ಕೈಗೆಟಕುತ್ತಿರುವ ಅಪಾಯಕಾರಿ ಟ್ರಾನ್ಸ್ ಫಾರ್ಮರ್

Avinash R

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಚರ್ಚ್ ಶಾಲೆ ಬಳಿ ಇರುವ ಟ್ರಾನ್ಸ್‌ಫಾರ್ಮರ್ ತಂತಿಗಳು ಕೈಗೆಟಕುತ್ತಿದ್ದು, ಇದರಿಂದ ಮಕ್ಕಳಿಗೆ ಅನಾಹುತವಾಗಬಹುದು. ಇದನ್ನು ತಕ್ಷಣ ಸ್ಥಳಾಂತರಿಸುವಂತೆ ಆಶಾ ಕಾರ್ಯಕರ್ತೆ ಪ್ರೇಮಾ ಸಹಿತ ಗ್ರಾಮಸ್ಥರು ಆಗ್ರಹಿಸಿದರು.

ಬೆಳುವಾಯಿ ಗ್ರಾಪಂ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪಂಚಾಯಿತಿ ಸಭಾಭವನದಲ್ಲಿ ನಡೆದ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಸಮಸ್ಯೆಯನ್ನು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ರಸ್ತೆ ಏರಿಸಲಾಗಿದ್ದು, ರಸ್ತೆ ಇಕ್ಕೆಲದಲ್ಲಿರುವ ಟ್ರಾನ್ಸ್‌ಫಾರ್ಮರ್ ತಂತಿಗಳು ಕೈಗೆಟಕುವಂತಿದ್ದು, ಶಾಲಾ ಮಕ್ಕಳು ಮುಟ್ಟಿದರೆ ಅಪಾಯವಾಗಬಹುದು. ಆದ್ದರಿಂದ ತುರ್ತಾಗಿ ಇದನ್ನು ಸ್ಥಳಾಂತರಿಸುವುದು ಅವಶ್ಯಕ ಎಂದು ಪಿಡಿಒ ಭೀಮ ನಾಯಕ್ ಬಿ. ಅಧಿಕಾರಿಗಳ ಗಮನಕ್ಕೆ ತಂದರು. ಮೆಸ್ಕಾಂ ಅಧಿಕಾರಿ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸುವ ಭರವಸೆ ನೀಡಿದರು.

ಹೆದ್ದಾರಿಯ ಕಳಪೆ ಕಾಮಗಾರಿ, ಅಸಮರ್ಪಕ ಚರಂಡಿ ವ್ಯವಸ್ಥೆ, ಅಂಗಡಿಗಳನ್ನು ಅರ್ಧ ತೆರವುಗೊಳಿಸಿ ಇನ್ನುಳಿದ ಅರ್ಧಭಾಗ ಪಂಚಾಯಿತಿ ತೆರವು ಮಾಡಲು ಹೇಳಿರುವ ಬಗ್ಗೆ, ಕೆಲವರಿಗೆ ಅರ್ಧವಷ್ಟೇ ಪರಿಹಾರ ನೀಡಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ರಾ.ಹೆ. ಪರವಾಗಿ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಸಿಬಂದಿಯನ್ನು ಪಂಚಾಯಿತಿ ಸದಸ್ಯರಾದ ಸೂರಜ್ ಆಳ್ವ, ಸಾಬಾಜ್ ಅಹಮ್ಮದ್, ಭರತ್ ಶೆಟ್ಟಿ ತರಾಟೆಗೆ ತೆಗೆದುಕೊಂಡರು. ರಾ.ಹೆ. ಇಲಾಖೆ ಅರ್ಧ ಅಂಗಡಿಗಳನ್ನು ತೆರವುಗೊಳಿಸಿರುವುದರಿಂದ ಅದಕ್ಕೆ ಲೈಸನ್ಸ್ ಹೇಗೆ ಕೊಡುವುದೆಂದು ಸಭೆಯಲ್ಲಿ ಚರ್ಚೆ ನಡೆಯಿತು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯುಗೇಂದ್ರ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ವಿವಿಧ ಇಲಾಖೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಉಪಾಧ್ಯಕ್ಷೆ ಜಯಂತಿ ಬಿ.ಸಾಲ್ಯಾನ್ ಸಹಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿ ರಮೇಶ್ ಬಂಗೇರಾ ಲೆಕ್ಕಪತ್ರ ಮಂಡಿಸಿದರು. ಪಿಡಿಒ ಭೀಮ ನಾಯಕ್ ಬಿ. ಸ್ವಾಗತಿಸಿದರು.