* ಪ್ರಮುಖ ವೃತ್ತ, ರಸ್ತೆ ಬದಿಗಳ ವಿದ್ಯುತ್ ಕಂಬಗಳಿಗೆ ಅಳವಡಿಕೆ
* ಮಕ್ಕಳು, ಪಾದಚಾರಿಗಳು ನಡೆದಾಡಲು ಕಷ್ಟ
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಟ್ಟಣದಲ್ಲಿ ನೀರಿನ ದಾಹ ನೀಗಿಸಲು ಕೊರೆಸಿರುವ ಕೊಳವೆಬಾವಿಯ ವಿದ್ಯುತ್ ಪ್ಯಾನಲ್ ಬೋರ್ಡ್ಗಳು ನಾಗರಿಕರ ಪ್ರಾಣಕ್ಕೆ ಕುತ್ತು ತಂದೊಡ್ಡಿವೆ.
ಹೌದು, ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಕುಡಿಯುವ ನೀರೊದಗಿಸುವ ಬಹುತೇಕ ಕೊಳವೆಬಾವಿಗಳ ಪ್ಯಾನಲ್ ಬೋರ್ಡ್ಅನ್ನು ವಿದ್ಯುತ್ ಕಂಬಕ್ಕೆ ಕಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದ್ದು, ಹಲವೆಡೆ ವಿದ್ಯುತ್ ಅವಘಡಗಳಿಗೆ ಆಹ್ವಾನ ನೀಡುವಂತಿದೆ.
ಪಟ್ಟಣದ ತಿರುಮಲೆ, ಗೌರಮ್ಮನ ಕೆರೆ ಬೀದಿ, ರಾವೇಂದ್ರ ದೇವಾಲಯ ಬಳಿ, ತರಕಾರಿ ಮಾರುಕಟ್ಟೆ ಬಳಿ ಹಾಗೂ ಪ್ರಮುಖ ವೃತ್ತ, ರಸ್ತೆ ಬದಿಗಳಲ್ಲಿ ಈ ಪ್ಯಾನಲ್ ಬೋರ್ಡ್ಗಳನ್ನು ವಿದ್ಯುತ್ ಕಂಬಗಳಿಗೆ ನೇತು ಹಾಕಲಾಗಿದೆ. ಇವು ಮಳೆ, ಗಾಳಿಗೆ ಹಾಳಾಗಿ ತುಕ್ಕು ಹಿಡಿದಿವೆ. ಜತೆಗೆ ಸಮರ್ಪಕ ನಿರ್ವಹಣೆ ಮಾಡದೆ ಅಧ್ವಾನಗೊಂಡಿವೆ.
ಪುರಸಭೆಯ ನೀರುಗಂಟಿಗಳು ನಿತ್ಯವೂ ಈ ಪ್ಯಾನಲ್ ಬೋರ್ಡ್ನಲ್ಲಿನ ಸ್ವಿಚ್ ಆನ್ ಮಾಡಿಯೇ ನೀರು ಪೂರೈಸಬೇಕು. ಈ ವೇಳೆ ಸಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರಂಟಿ.
ಫ್ಯಾನಲ್ ಬೋರ್ಡ್ಗಳಲ್ಲಿ ವಿದ್ಯುತ್ ಮೀಟರ್, ಸ್ವಿಚ್ಗಳು ಮಳೆ ಬಂದರೆ ನೆನೆದು ಗ್ರೌಂಡ್ ಆಗಿ ಕಂಬದ ಸುತ್ತಮುತ್ತ ನಾಗರಿಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ನೆಲದಮಟ್ಟದಲ್ಲಿ ಅಳವಡಿಸಿರುವ ಪ್ಯಾನಲ್ ಬೋರ್ಡ್ ಬಳಿ ಗಿಡ, ಗಂಟಿಗಳು ಬೆಳೆದು ವಿಷಜಂತುಗಳ ವಾಸಸ್ಥಳವಾಗಿದೆ. ಕತ್ತಲಲ್ಲಿ ಮೋಟಾರ್ಗಳ ಸ್ವಿಚ್ಆನ್ ಮಾಡಲು ಮುಂದಾದರೆ ವಿಷ ಜಂತುಗಳು ಪ್ರತ್ಯಕ್ಷವಾಗುತ್ತವೆ. ಆದರೂ ಗಿಡ, ಗಂಟಿಗಳನ್ನು ಸ್ವಚ್ಛ ಮುಂದಾಗದೆ ರ್ನಿಲಸಿದ್ದಾರೆ.
ಬಹುತೇಕ ಕಡೆ ಪ್ಯಾನಲ್ ಬೋರ್ಡ್ ಕಿತ್ತುಹೋಗಿವೆ. ಇದರಿಂದ ಬೆಲೆ ಬಾಳುವ ಸ್ವೀಚ್ ಬೋರ್ಡ್ಗಳನ್ನು ಕಳ್ಳರು ಕಿತ್ತುಹಾಕುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ಪುರಸಭೆಯ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಇದರಿಂದ ನಾಗರಿಕರ ತೆರಿಗೆಗೆ ಬೆಲೆ ಇಲ್ಲದಂತಾಗಿದೆ ಎಂಬುದು ಸ್ಥಳಿಯ ನಿವಾಸಿಗಳ ಆರೋಪ.
ಗೌರಮ್ಮನ ಕೆರೆ ಬೀದಿ ಬಳಿ ಅಳವಡಿಸಿರುವ ಪ್ಯಾನಲ್ ಬೋರ್ಡ್ಗೆ ಬೀಗ ಹಾಕಿಲ್ಲ. ಈ ರಸ್ತೆಯಲ್ಲಿ ಸರಸ್ವತಿ, ಮಂಗಳ ವಿದ್ಯಾಕೇಂದ್ರ, ಬಿಜಿಎಸ್ ಕಾಲೇಜು, ಶ್ರೀರಂಗನಾಥ ಸ್ವಾಮಿ ಪ್ರೌಢಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಪ್ರಾಣಹಾನಿ ಸಂಭವಿಸುವ ಮುನ್ನ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ನಾಗರಿಕರ ಆಗ್ರಹವಾಗಿದೆ,
ಪಟ್ಟಣದ ಬಹುತೇಕ ಎಲ್ಲ ಪ್ಯಾನಲ್ ಬೋರ್ಡ್ಗಳು ವಿದ್ಯುತ್ ಕಂಬಕ್ಕೆ ಕೈಗೆ ಎಟಕುವಂತೆ ಕಟ್ಟಿರುವುದರಿಂದ ಪಾಲಕರು ಮಕ್ಕಳನ್ನು ಒಬ್ಬಂಟಿಯಾಗಿ ಶಾಲೆಗಳಿಗೆ ಕಳುಹಿಸಲು ಭಯ ಪಡುವಂತಾಗಿದೆ. ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಟ್ಟಿರುವುದರಿಂದ ಪಾದಚಾರಿಗಳು ಜೀವವನ್ನು ಕೈಯಲ್ಲಿಟ್ಟುಕೊಂಡು ತಿರುಗಾಡುವಂತಾಗಿದೆ. ಇಂತಹ ಸ್ಥಿತಿ ಯಾರಿಗೂ ಬೇಡ.ಶಿವಲಿಂಗಯ್ಯ, ನಿವೃತ್ತ ವಾಯುಸೇನಾ ಅಧಿಕಾರಿ
ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿ
ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಕೊಳವೆ ಬಾವಿಗಳ ಪ್ಯಾನಲ್ ಬೋರ್ಡ್ಗಳನ್ನು ತೆರವುಗೊಳಿಸಿ ಬೇರೆಡೆ ನಿರ್ಮಿಸಲಾಗುವುದು.