ಭರತ್ ಶೆಟ್ಟಿಗಾರ್ ಮಂಗಳೂರು
ನಗರಾದ್ಯಂತ ಕಾಂಕ್ರೀಟ್ ರಸ್ತೆಗಳಲ್ಲಿ ವಾಹನಗಳ ವೇಗ ಕಡಿಮೆ ಮಾಡುವ ನಿಟ್ಟಿನಲ್ಲಿ ಡಾಂಬರು ಹಂಪ್‌ಗಳನ್ನು ಅಳವಡಿಸಲಾಗಿದೆ. ಬಹಳ ಹಿಂದೆ ನಿರ್ಮಿಸಲಾದ ಈ ಹಂಪ್‌ಗಳಲ್ಲಿ ಹೆಚ್ಚಿನವು ಹಾಳಾಗಿದ್ದು, ವಾಹನ ಚಾಲಕರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ವಾಹನಗಳು ನಿರಂತರ ಓಡಾಟ, ಭಾರಿ ಮಳೆ, ಹಾಗೂ ಬಿಸಿಲಿಗೆ ಹಂಪ್‌ಗಳು ತಮ್ಮ ನೈಜ ಸ್ವರೂಪ ಕಳೆದುಕೊಂಡಿವೆ. ಬಿಸಿಲಿಗೆ ಕಾಂಕ್ರೀಟ್ ರಸ್ತೆಯ ಶಾಖ ಹೆಚ್ಚಾಗಿ ಕರಗುವ ಡಾಂಬರು ಹಂಪ್‌ಗಳು, ಕೆಲವೆಡೆ ಹಲವು ಸೆಂ.ಮೀ.ಗಳಷ್ಟು ದೂರ ಹರಿದು ಹೋಗಿರುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿದು ಬರುತ್ತದೆ. ನಗರಾದ್ಯಂತ ರಸ್ತೆ, ಫುಟ್‌ಪಾತ್ ಕಾಮಗಾರಿ, ದುರಸ್ತಿ ಜೋರಾಗಿ ನಡೆಯುತ್ತಿದ್ದು, ಹಂಪನಗಳನ್ನು ಯಾರೂ ಗಮನಿಸಿದಂತಿಲ್ಲ.
ಲೇಡಿಹಿಲ್‌ನಿಂದ ಕೊಟ್ಟಾರ ಚೌಕಿವರೆಗೆ ಹೋಗುವ ಹಾಗೂ ಬರುವ ರಸ್ತೆಯಲ್ಲಿ ಶೇ.90ರಷ್ಟು ಹಂಪ್‌ಗಳು ಎದ್ದುಹೋಗಿವೆ. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಗೆ ಹೋಗುವ ರಸ್ತೆಯಲ್ಲಿಯೂ ಹಂಪ್ ಹಾಳಾಗಿವೆ. ಕೆಎಸ್‌ಆರ್‌ಟಿಸಿ-ಕುಂಟಿಕಾನ ರಸ್ತೆ ಸೇರಿದಂತೆ ನಗರದಲ್ಲಿ ಒಂದು ಸುತ್ತುಹಾಕಿದರೆ ಇಂತಹ ಕಿತ್ತು ಹೋದ ಹಂಪ್‌ಗಳನ್ನು ಸಾಕಷ್ಟು ಕಾಣಬಹುದು. ಪೊಲೀಸ್ ಇಲಾಖೆ ಈಗಾಗಲೇ ಮಹಾನಗರ ಪಾಲಿಕೆಯ ಗಮನಕ್ಕೆ ಈ ವಿಚಾರವನ್ನು ತಂದಿದ್ದು, ಹಂಪ್‌ಗಳನ್ನು ಸರಿಪಡಿಸಲು ಮನವಿ ಮಾಡಿದೆ.
ತೆರವಾಗದ ರಬ್ಬರ್ ಹಂಪ್‌ಗಳು
ನಗರದಲ್ಲಿ ರಬ್ಬರ್ ಹಂಪ್ಸ್‌ಗಳನ್ನು ಕಳೆದ ಕೆಲವು ಸಮಯದ ಹಿಂದೆ ಅಲ್ಲಲ್ಲಿ ಅಳವಡಿಸಲಾಗಿತ್ತು. ಮುಖ್ಯರಸ್ತೆಗಳು ಒಳ ರಸ್ತೆಗಳಲ್ಲೂ ರಬ್ಬರ್ ಹಂಪ್‌ಗಳೇ ಕಾಣಸಿಗುತ್ತಿದ್ದವು. ವಾಹನಗಳ ನಿರಂತರ ಓಡಾಟದಿಂದ ಹಾಗೂ ಬಿಸಿಲಿನ ಹೊಡೆತಕ್ಕೆ ಅಳವಡಿಸಿ ಆರು ತಿಂಗಳಲ್ಲಿ ಎದ್ದು ಹೋಗುತ್ತಿತ್ತು. ಬಿಡಿಬಿಡಿಯಾಗಿ ಅಳವಡಿಸುವುದರಿಂದ ಕೆಲವು ಸ್ಥಳಗಳಲ್ಲಿ ಸಾರ್ವಜನಿಕರೇ ಅದನ್ನು ರಸ್ತೆಯಿಂದ ಕಿತ್ತು ತೆಗೆಯುತ್ತಿದ್ದರು. ಹೀಗಾಗಿ ಅಳವಡಿಸಿದರೂ ವ್ಯರ್ಥವಾಗುತ್ತಿತ್ತು. ಈ ರೀತಿಯ ಹಂಪ್‌ಗಳು ವಾಹನಗಳ ಬಾಳ್ವಿಕೆ ಹಾಗೂ ಸವಾರಿಗೂ ಹೊಡೆತ ಬೀಳುತ್ತದೆ ಎಂದು ಆಕ್ಷೇಪ ವ್ಯಕ್ತವಾದ ಬಳಿಕ ಪೊಲೀಸ್ ಇಲಾಖೆ ಮುಖ್ಯ ರಸ್ತೆಗಳಿಂದ ಇಂತಹ ಹಂಪ್‌ಗಳನ್ನು ತೆರವುಗೊಳಿಸಿತ್ತು. ಆದರೂ ಕೆಲವು ಮುಖ್ಯರಸ್ತೆ ಹಾಗೂ ಒಳ ರಸ್ತೆಗಳಲ್ಲಿ ರಬ್ಬರ್ ಹಂಪ್‌ಗಳು ಇನ್ನೂ ಇವೆ.
ಹಂಪ್‌ಗಳನ್ನು ದುರಸ್ತಿ ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಶೀಘ್ರ ಕಾರ್ಯ ಆರಂಭವಾಗಲಿದೆ. ಜತೆಗೆ ಎಲ್ಲೆಲ್ಲಿ ಹಂಪ್‌ಗಳ ಅಗತ್ಯವಿದೆ ಎಂದು ಸ್ಥಳ ಗುರುತಿಸಲಾಗಿದೆ. ವಾಹನ ಸವಾರರ ಸುರಕ್ಷತೆಗೆ ಪಾಲಿಕೆ ಆದ್ಯತೆ ನೀಡಲಿದೆ.ಶಾನಾಡಿ ಅಜಿತ್ ಕುಮಾರ್ ಹೆಗ್ಡೆಮಂಗಳೂರು ಮಹಾನಗರ ಪಾಲಿಕೆ ಆಯುಕ್ತ