ಬೆಳ್ತಂಗಡಿ: ಪ್ರಾಚೀನ ಆಹಾರ ಪದ್ಧತಿ ಮರೆತು ಪಾಶ್ಚಾತ್ಯ ಆಹಾರ ಪದ್ಧತಿ ಅನುಕರಣೆ ಮಾಡುತ್ತಿರುವುದರಿಂದ ಇಂದು ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಅಪಾಯಕಾರಿ ಬೆಳವಣಿಗೆ ಉಂಟಾಗುತ್ತಿದೆ. ಇವೆಲ್ಲವನ್ನು ನಿಯಂತ್ರಣದಲ್ಲಿಟ್ಟು ಶಿಸ್ತುಬದ್ಧ ಆಹಾರ ಕ್ರಮ ರೂಪಿಸುವುದು ಮಹಿಳೆಯರ ಕರ್ತವ್ಯ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯೆ ಆರ್.ಸುಭಾಷಿಣಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಬೆಳ್ತಂಗಡಿ, ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಶನಿವಾರ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೆಸ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿದರು. ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ವಕೀಲರಾದ ಮುಮ್ತಾಜ್ ಬೇಗಂ, ಶ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ನಿಶಾ, ನಿವೃತ್ತ ಮೇಲ್ವಿಚಾರಕಿ ಸುಲೋಚನಾ ಮತ್ತಿತರರು ಉಪಸ್ಥಿತರಿದ್ದರು.
ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಜಿಲ್ಲಾ ಪ್ರಶಸ್ತಿ ಪಡೆದ ನ್ಯಾಯತರ್ಪು ಗ್ರಾಮದ ರಕ್ತೇಶ್ವರಿ ಪದವು ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ರತ್ನಾವತಿ ಸ್ವಾಗತಿಸಿದರು. ಮೇಲ್ವಿಚಾರಕಿ ನಾಗವೇಣಿ ವಂದಿಸಿದರು. ನಂದನಾ ನಿರೂಪಿಸಿದರು. ಗುಲಾಬಿ ಸನ್ಮಾನಿತರನ್ನು ಪರಿಚಯಿಸಿದರು.