ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಾದ್ಯಂತ ರಸ್ತೆ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಣ ಮರಗಳಿದ್ದು, ಉರುಳುವ ಸಂಭವವಿದೆ. ಈ ಕುರಿತು ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಸುರಕ್ಷತೆ ದೃಷ್ಟಿಯಿಂದ ಒಣಮರಗಳನ್ನು ತೆರವುಗೊಳಿಸಲು ಒತ್ತಾಯಿಸಿದ್ದಾರೆ.
ವರಂಗದಿಂದ ಅಮೃತಭಾರತಿ ತನಕ, ರಾಷ್ಟ್ರೀಯ ಹೆದ್ದಾರಿ 169ಎ, ಹೆಬ್ರಿಯಿಂದ ಆಲ್ಬಾಡಿ ತನಕ ಬೃಹತ್ ಗಾತ್ರದ ಮರಗಳು ಒಣಗಿ ಸತ್ತುಹೋಗಿವೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಬಂಧಿತ ಇಲಾಖೆ ಶೀಘ್ರವೇ ಒಣಮರಗಳನ್ನು ತೆರವುಗೊಳಿಸಬೇಕಿದೆ.
ವರಂಗದಿಂದ ಹೆಬ್ರಿ ತನಕವೂ ಅತಿ ಹೆಚ್ಚು ಸಂಖ್ಯೆಗಳಲ್ಲಿ ಸತ್ತು ಹೋದ ಮರಗಳು ಇವೆ. ಈ ಪೈಕಿ ಬಹುತೇಕ ಮರಗಳು ರಸ್ತೆಯ 5 ಮೀ. ವ್ಯಾಪ್ತಿಯಲ್ಲಿವೆ. ಅಲ್ಲದೇ ಮರಗಳ ಬುಡಗಳು ಸತತ ಮಳೆ ಸುರಿಯುವಿಕೆಯಿಂದ ಮೃದುವಾಗಿವೆ. ಈ ರಸ್ತೆಯಲ್ಲಿ ನಿರಂತರ ವಾಹನಗಳ ಸಂಚಾರ, ಜನಸಂದಣಿ ಇದ್ದು ಸುರಕ್ಷತೆ ದೃಷ್ಟಿಯಿಂದ ಕ್ರಮವಹಿಸಬೇಕಿದೆ.
ಅರಣ್ಯ ಇಲಾಖೆಯವರು ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಒಣಗಿ ಸತ್ತುಹೋದ ಮರಗಳನ್ನು ತೆರವುಗೊಳಿಸಿದ್ದಾರೆ. ಮರಗಳನ್ನು ಕಡಿಯಲು ನಿಯಮಗಳಿರುವುದರಿಂದ ತೆರವುಗೊಳಿಸಲು ವಿಳಂಬವಾಗುವ ಸಾಧ್ಯತೆ ಇದೆ.
ಈಗಾಗಲೇ ತಾಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ಒಣಗಿದ ಹಾಗೂ ಅಪಾಯಕಾರಿ ಮರಗಳ ತೆರವುಗೊಳಿಸುವ ಕುರಿತು ಚರ್ಚಿಸಲಾಗಿದೆ. ಅಲ್ಲದೇ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಕೂಡ ಈ ಕುರಿತು ಕ್ರಮ ಜರುಗಿಸಲು ಅಧಿಕಾರಿಗಳು ಸೂಚಿಸಿದ್ದರು. ಇದೀಗ ಅಧಿಕಾರಿಗಳ ಸೂಚನೆಯನ್ನು ಕಡೆಗಣಿಸಲಾಗಿದೆ.
ಈಗಾಗಲೇ ಒಣಗಿ ಸತ್ತು ಹೋದ ಕೆಲವು ಮರಗಳನ್ನು ತೆರವು ಮಾಡಲಾಗಿದೆ. ನಿಯಮಾನುಸರ ಕೆಲಸ ಮಾಡಿ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು.-ಸಿದ್ದೇಶ್ವರ, ವಲಯ ಅರಣ್ಯ ಅಧಿಕಾರಿ ಹೆಬ್ರಿ
ರಸ್ತೆಯ ಬದಿಯಲ್ಲಿ ಸತ್ತು ಹೋದ ಮರಗಳು ಇನ್ನೂ ಇದೆ. ಜೋರಾಗಿ ಗಾಳಿ ಮಳೆ ಬಂದಾಗ ಆತಂಕವಾಗುತ್ತದೆ. ರಾತ್ರಿ ವೇಳೆ ವರಂಗದಿಂದ ಹೆಬ್ರಿ ಹೋಗುವ ರಸ್ತೆಯಲ್ಲಿ ಸಂಚಾರ ಮಾಡಲು ಜೀವ ಭಯ ಉಂಟಾಗುತ್ತದೆ. ತೆರವಿನ ಬಗ್ಗೆ ಅನೇಕ ಸಭೆಗಳಲ್ಲಿ ಮನವಿ ನೀಡಿದ್ದರೂ ಪ್ರಯೋಜನವಿಲ್ಲ.-ಸುಕುಮಾರ್, ಪ್ರಯಾಣಿಕ