ಗುರುಪುರ: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಭಾಗದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆದ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಅಪೂರ್ಣ ಕಾಮಗಾರಿ ನಡೆದಿರುವ ಇಲ್ಲಿ ಮುಂಬರುವ ಮಳೆಗೆ ಕುಸಿತ ಉಂಟಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಮಂಗಳವಾರ ಬೆಳಗ್ಗೆ ಕೆತ್ತಿಕಲ್ ಪ್ರದೇಶದಲ್ಲಿ ನಡೆದಿರುವ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಜಿಲ್ಲಾಧಿಕಾರಿಯೂ ಆಗಿರುವ ಸಿಇಒ ಡಾ.ಆನಂದ್ ಮಾಧ್ಯಮದೊಂದಿಗೆ ಮಾತನಾಡಿ, ಕೆತ್ತಿಕಲ್ ಪ್ರದೇಶದಲ್ಲಿ ಮಳೆಗಾಲಕ್ಕೆ ಮುಂಚೆ ನಡೆದಿರುವ ಸುರಕ್ಷತಾ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲಿಸಲು ಬಂದಿದ್ದೇವೆ. ಗುಡ್ಡದ ಮೇಲ್ಗಡೆ 6 ಹಂತದಲ್ಲಿ ಗ್ಯಾಬಿಯನ್ ವಾಲ್ ನಿರ್ಮಿಸಲಾಗುತ್ತಿದ್ದು, ಈ ವೈಜ್ಞಾನಿಕ ಸುರಕ್ಷತಾ ಕಾಮಗಾರಿಯಿಂದ ಗುಡ್ಡದಲ್ಲಿ ಕುಸಿತದ ಭೀತಿ ಇಲ್ಲ. ನೀರು ಹರಿಯಲು ಮನಪಾ ಡ್ರೈನೇಜ್ ನಿರ್ಮಿಸಿದೆ. ಗುಡ್ಡದ ಮೇಲ್ಗಡೆ ಇರುವ ವೆಟ್‌ವೆಲ್‌ಗೆ ಸಮಸ್ಯೆ ಇಲ್ಲ ಎಂದರು.
ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಪುನಃ ಮಣ್ಣು ಕುಸಿದಿಲ್ಲ. ಅದು ಮೇಲ್ಗಡೆ ತಡೆಗೋಡೆ(ಗ್ಯಾಬಿಯನ್ ವಾಲ್) ನಿರ್ಮಾಣ ಕಾಮಗಾರಿ ವೇಳೆ ತುಂಬಿಸಲಾದ ಮಣ್ಣು. ಹೆದ್ದಾರಿ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಆಗುತ್ತಿದೆ. ಮಳೆ ನಿಂತ ತಕ್ಷಣದಿಂದ ಮತ್ತೆ ಕಾಮಗಾರಿ ಆರಂಭವಾಗಲಿದೆ ಎಂದರು.
ಎಡಿಸಿ ಸಂತೋಷ್, ಮನಪಾ ಆಯುಕ್ತ ರವಿಚಂದ್ರ ನಾಯ್ಕ, ಎಸಿ ಹರ್ಷವರ್ಧನ್ ಮತ್ತಿತರ ಅಧಿಕಾರಿಗಳು, ಉಸ್ತುವಾರಿ ಜಿಲ್ಲಾಧಿಕಾರಿ ಡಾ.ಆನಂದ್ ಅವರು, ಸಮಯೋಚಿತ ಹಾಗೂ ಸುರಕ್ಷತಾ ಮಾನದಂಡದನ್ವಯ ಕಾಮಗಾರಿ ನಡೆಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ(ಪಿಡಿ) ಅಬ್ದುಲ್ ಜಾವೇದ್ ಅಝ್ಮಿ ಅವರಿಗೆ ಸೂಚಿಸಿದರು.
ಮಳೆಗೆ ಹೆದ್ದಾರಿ ಮಾಯ
ನಿರಂತರ ಸುರಿದ ಮಳೆಗೆ ಕೆತ್ತಿಕಲ್ ಮತ್ತು ಗುರುಪುರ ಕೈಕಂಬ ಭಾಗದಲ್ಲಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದಿದೆ. ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿ ಸೃಷ್ಟಿಯಾಗಿವೆ. ದ್ವಿಚಕ್ರ ವಾಹನ ಸಂಚಾರ ಕಷ್ಟವಾಗಿದೆ. ಹೆದ್ದಾರಿಯಲ್ಲಿ ಕೆಸರು ನೀರು ತುಂಬಿದ್ದು, ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಗುಡ್ಡ ಕುಸಿತವಾಗಲಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇಲ್ಲಿ ಮಳೆಗಾಲಕ್ಕೆ ಮುಂಚಿತ ಬಹುತೇಕ ಎಲ್ಲ ಸುರಕ್ಷತಾ ಕ್ರಮಗಳು ಪೂರ್ಣಗೊಳ್ಳಲಿದೆ ಎಂದು ಏಪ್ರಿಲ್ ತಿಂಗಳಲ್ಲಿ ಕೆತ್ತಿಕಲ್‌ಗೆ ಭೇಟಿ ನೀಡಿದ್ದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ ನೀಡಿದ್ದರು. ಆದರೆ ಈಗ ನಡೆದಿರುವುದೇ ಬೇರೆ. ಅಪೂರ್ಣ ಕಾಮಗಾರಿಯಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ.