ಜಿಲ್ಲೆ

ಮುಂದುವರೆದ ಕೃಷಿಹೊಂಡ ಸಾವಿನ ಪ್ರಕರಣ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರೈತರ ನೀರಾವರಿ ಕನಸಿಗೆ ನೀರೆರೆದ ಕೃಷಿಹೊಂಡಗಳು ಜನ ಜಾನುವಾರುಗಳ ಮೃತ್ಯುಕೂಪಗಳಾಗುತ್ತಿರುವುದು ವಿಪರ್ಯಾಸವಾಗಿದೆ. ಜಿಲ್ಲೆಯಲ್ಲಿ ಕಳೆದ ವಾರದಿಂಚೀಚೆಗೆ ಮೂವರು ಕೃಷಿಹೊಂಡಗಳಲ್ಲಿ ಮುಳುಗಿ ಮೃತಪಟ್ಟಿದ್ದು, ಸಾವಿನ ಪ್ರಕರಣಗಳು ಮುಂದುವರೆಯುತ್ತಿವೆ.

ಕಳೆದ ನಾಲ್ಕೈದು ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಇಂಥ ಪ್ರಕರಣಗಳು ಮರುಕಳಿಸುತ್ತಿದ್ದರೂ ಕೃಷಿಹೊಂಡಗಳ ಬಳಿ ಸುರಕ್ಷತಾ ಕ್ರಮಕೈಗೊಳ್ಳಲು ಮಾಲೀಕರು ಮನಸ್ಸು ಮಾಡುತ್ತಿಲ್ಲ. ಕೃಷಿಹೊಂಡ ನಿರ್ಮಾಣದ ಬಳಿಕ ಅನುಸರಿಸಬೇಕಾದ ನಿಯಮಗಳಿಗೆ ಎಳ್ಳುನೀರು ಬಿಟ್ಟಿರುವುದೇ ಇಂಥ ಪ್ರಕರಣಗಳಿಗೆ ಕಾರಣವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಸರ್ಕಾರ ಹಾಗೂ ಜಿಲ್ಲಾಡಳಿತ ಸಾಕಷ್ಟು ಬಾರಿ ಸುರಕ್ಷತಾ ಕ್ರಮದ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಅನುಷ್ಟಾನದ ಮಾತ್ರ ಶೂನ್ಯ ಎಂಬಂತಾಗಿದೆ ಮುಖ್ಯವಾಗಿ ಕೃಷಿಹೊಂಡದಲ್ಲಿ ಬಿದ್ದು ಮೃತಪಟ್ಟವರಲ್ಲಿ ಬಹುತೇಕರು ಕಾಲುಜಾರಿ ಬಿದ್ದ ಪ್ರಕರಣಗಳೇ ಹೆಚ್ಚಿವೆ. ತೀರ ನುಣುಪಾದ ಜಾರುವಂತ ಪ್ಲಾಸ್ಟಿಕ್ ಹೊದಿಕೆಯಿಂದ ಹೊಂಡದಲ್ಲಿ ಬಿದ್ದವರು ಮೇಲೆ ಬರಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಇರುತ್ತದೆ. ಹೊಂಡಗಳಲ್ಲಿ ಸುರಕ್ಷತಾ ಕ್ರಮಕೈಗೊಂಡರೆ ಇಂಥ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು ಎಂಬುದು ಅಧಿಕಾರಿಗಳ ಸಲಹೆಯಾಗಿದೆ. ಆದರೆ ಇದನ್ನು ಕೃಷಿಹೊಂಡಗಳ ಮಾಲೀಕರು ಗಂಭೀರವಾಗಿ ಪರಿಗಣಿಸದಿರುವುದು ಇಂಥ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಾವಿನ ಪ್ರಕರಣಗಳು:

ಕಳೆದ ಮೂರು ವರ್ಷದ ಹಿಂದೆ ಹೊಸಕೋಟೆ ತಾಲೂಕಿನಲ್ಲಿ ಇಬ್ಬರು ಮಕ್ಕಳು ಈಜಲು ಹೋಗಿ ಮೃತಪಟ್ಟ ಪ್ರಕರಣ ನಡೆದಿತ್ತು. ಹಾಗೆಯೆ ದಾಬಸ್‌ಪೇಟೆಯಲ್ಲಿ ಕೃಷಿಹೊಂಡದಲ್ಲಿ ಎರಡು ಪ್ರಾಣಹಾನಿ ಪ್ರಕರಣಗಳು ವರದಿಯಾಗಿದ್ದವು. ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು 35 ವರ್ಷದ ಮಹಿಳೆ ಹಾಗೂ 9 ವರ್ಷದ ಬಾಲಕ ಮೃತಪಟ್ಟಿದ್ದರು. ಕೃಷಿಹೊಂಡಕ್ಕೆ ಕಾಲು ಜಾರಿ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ನೀರುಪಾಲಾಗಿದ್ದರು. ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮದ 14 ವರ್ಷದ ಬಾಲಕ ನಾಗೇಶ್ ಕೃಷಿ ಹೊಂಡಕ್ಕೆ ಬಿದ್ದು ಕೊನೆಯುಸಿರೆಳೆದಿದ್ದ. ಇತ್ತೀಚಿಗೆ ದೊಡ್ಡಬಳ್ಳಾಪುರ ತಾಲೂಕು ಸೋತೆನಹಳ್ಳಿಯ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಕಾಲು ಜಾರಿ ಕೇಶವ ಎಂಬುವರು ಮೃತಪಟ್ಟಿದ್ದರು. ನೆಲಮಂಗಲ ಸಮೀಪದ ತಮ್ಮೇನಹಳ್ಳಿಯ ಕೃಷಿ ಹೊಂಡದಲ್ಲಿ ಧ್ಯಾನರಾಜ್ ಎಂಬ ಬಾಲಕ ಹಾಗೂ ಪ್ರಭಾಕರ್ ಎಂಬುವರು ಬಿದ್ದು ಮೃತಪಟ್ಟಿದ್ದರು. ತೋಟದ ಕೃಷಿ ಹೊಂಡದ ಬಳಿ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹೊಂಡಕ್ಕೆ ಬಿದ್ದಿದ್ದು, ಚೆಂಡು ತರಲು ಹೋದ ಧ್ಯಾನರಾಜ್ ಕಾಲು ಜಾರಿ ಬಿದ್ದರೆ ನೀರಿನಲ್ಲಿ ಮುಳುಗುತ್ತಿದ್ದವನ ರಕ್ಷಿಸಲು ಹೋದ ಪ್ರಭಾಕರ್ ಸಹ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದರು.

ತಂತಿಬೇಲಿ ಜತೆಗೆ ಸುರಕ್ಷತಾ ಕ್ರಮ ಬೇಕು:

ಈ ಕೃಷಿ ಹೊಂಡದ ಸುತ್ತಲು ತಂತಿ ಬೇಲಿ, ನೆರಳು ಪರದೆ, ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಬೇಲಿ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತ ಸೂಚಿಸಿದೆ. ಕೃಷಿ ಹೊಂಡದ ಮುಂದೆ ಅಪಾಯ ಮತ್ತು ಈಜಬಾರದು ಎಂಬ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಬೇಕು ಹಾಗೂ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮವಾಗಿ ಹಗ್ಗದೊಂದಿಗೆ ಟ್ಯೂಬ್‌ಗಳನ್ನು ನಾಲ್ಕೂ ಮೂಲೆಗಳಲ್ಲಿ ಇಳಿ ಬಿಡುವುದು ಕಡ್ಡಾಯವಾಗಿದೆ ಜಮೀನಿನಲ್ಲಿರುವ ಮುಖ್ಯವಾಗಿ ಮನೆಯ ಸಮೀಪವಿರುವ, ರಸ್ತೆ ಪಕ್ಕದಲ್ಲಿರುವ ಕೃಷಿ ಹೊಂಡಗಳಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳಬೇಕು, ಆಕಸ್ಮಿಕವಾಗಿ ಕಾಲುಜಾರಿ ಬಿದ್ದರೂ ಕೃಷಿಹೊಂಡದಿಂದ ಹೊರಬರಲು ಅವರಿಗೆ ಆಸೆರೆಯಾಗುವಂತ ಪರಿಕರಗಳ ವ್ಯವಸ್ಥೆ ಇರಬೇಕು ಎಂಬುದು ಅಧಿಕಾರಿಗಳ ಸಲಹೆಯಾಗಿದೆ.

ಕೃಷಿಹೊಂಡ ನಿರ್ಮಾಣದ ಯೋಜನೆ ರೈತರಿಗೆ ಬಹಳಷ್ಟು ಅನುಕೂಲವಾಗಿದೆ, ಆದರೆ ಇದೇ ಹೊಂಡಗಳು ಅಪಾಯ ತಂದೊಡ್ಡುತ್ತಿರುವುದು ದುರಾದೃಷ್ಟಕರ, ಕೃಷಿಹೊಂಡ ಹೊಂದಿರುವವರು ಕಡ್ಡಾಯವಾಗಿ ಸುರಕ್ಷತಾಕ್ರಮ ಕೈಗೊಳ್ಳಬೇಕು ಈ ಮೂಲಕ ಪ್ರಾಣಹಾನಿ ತಪ್ಪಿಸಬೇಕು, ಹೊಸ ಹೊಂಡಗಳಿಗೆ ತಂತಿಬೇಲಿ ನಿರ್ಮಾಣಕ್ಕೆ ಅನುದಾನ ಸಿಗಲಿದೆ, ಹಳೆ ಹೊಂಡಗಳಿಗೆ ನರೇಗಾ ಮತ್ತಿತರ ಯೋಜನೆಗಳ ಮೂಲಕ ಅನುದಾನ ದೊರಕಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.

ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ

--------

ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ ಆಸಕ್ತ ರೈತರು ಕೃಷಿ ಹೊಂಡಗಳಿಗೆ ಬೇಲಿ (ೆನ್ಸಿಂಗ್) ಅಳವಡಿಸುವುದು ಕಡ್ಡಾಯವಾಗಿದೆ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಇದರ ಮಾಹಿತಿ ನೀಡಲಾಗಿದೆ. ಕೃಷಿ ಇಲಾಖೆಯ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ ಲಾನುಭವಿಗಳಿಗಷ್ಟೇ ಸಬ್ಸಿಡಿ ದೊರೆಯಲಿದೆ. ಕೃಷಿಹೊಂಡಗಳ ಸುತ್ತ ತಂತಿಬೇಲಿ ಸೇರಿ ಇನ್ನಿತರ ಸುರಕ್ಷತಾ ಕ್ರಮಕೈಗೊಳ್ಳುವ ಮೂಲಕ ಪ್ರಾಣಹಾನಿ ತಪ್ಪಿಸಬೇಕು

ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ