ಜಿಲ್ಲೆ

ಪ್ರಾಣಕಂಟಕವಾಗಿವೆ ಜಾಹೀರಾತು!

ಶಿವರಾಜ.ಎಂ

ಚಕ್ರವರ್ತಿ ವಿ. ಸರ್ಜಾಪುರ

ಸರ್ಜಾಪುರ ಭಾಗದಲ್ಲಿ ನಾಯಿ ಕೊಡೆಗಳಂತೆ ಎದ್ದುನಿಂತಿರುವ ಜಾಹೀರಾತು ಲಕಗಳು ಸಾರ್ವಜನಿಕರ ಜೀವನಕ್ಕೆ ಅಪಾಯ ತಂದೊಡ್ಡಿವೆ. ಬಹುತೇಕ ಅಕ್ರಮವಾಗಿ ಅಳವಡಿಸಿರುವ ಬೃಹತ್ ಗಾತ್ರದ ಜಾಹೀರಾತು ಲಕಗಳಿಂದ ವಾಹನ ಸವಾರರು ಅಪಾಯದ ನೆರಳಿನಲ್ಲೇ ಸಂಚರಿಸುವಂತಾಗಿದೆ.

ಸರ್ಜಾಪುರ ಬೆಂಗಳೂರು ರಸ್ತೆಯ ಉದ್ದಕ್ಕೂ ಖಾಸಗಿ ನಿವೇಶನ ಮತ್ತು ಕಟ್ಟಡಗಳ ಮೇಲೆ ಅನಾಧಿಕೃತವಾಗಿ ನೂರಾರು ಸಂಖ್ಯೆಯ ಜಾಹೀರಾತು ನಾಮಫಲಕಗಳು ಬಲಿಗಾಗಿ ಕಾದುನಿಂತಿರುವಂತಿವೆ. ಇಲ್ಲಿನ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರುಗಳನ್ನು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಅಕ್ರಮ ಜಾಹೀರಾತು ಲಕಗಳ ದರ್ಬಾರ್: ಬೆಂಗಳೂರು ನಗರ ಹೊರವಲಯದಲ್ಲಿರುವ ಸರ್ಜಾಪುರ ಪಟ್ಟಣ ರಿಯಲ್ ಎಸ್ಟೇಟ್ ಹಬ್ ಆಗಿ ರೂಪುಗೊಂಡಿದ್ದು ಈ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯಗಳು, ವಿಲ್ಲಾಗಳ ಮಾರ್ಕೆಟಿಂಗ್‌ಗಾಗಿ ಸರ್ಜಾಪುರ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಜಾಹೀರಾತು ನಾಮಫಲಕಗಳನ್ನು ಅಳವಡಿಸಲಾಗಿದೆ, ಕೆಲವೊಂದಷ್ಟು ಜಾಹೀರಾತು ಸಕ್ರಮವಾಗಿದ್ದರೂ ಬಹುತೇಕ ಅಕ್ರಮವಾಗಿದೆ ಈ ಜಾಹೀರಾತು ದಂಧೆಯಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದು, ಜನರ ಜೀವನದ ಜತೆ ಆಟವಾಡುತ್ತಿದ್ದಾರೆ.

ಸಾವಿಗೆ ನೋವಿಗೆ ಆಹ್ವಾನ: ಇನ್ನೂ ಸರ್ಜಾಪುರದ ಬಾಬಯ್ ಟಿಫನ್ ಹೊಟೇಲ್ ಮತ್ತು ಡಿ.ಮಾರ್ಟ್ ಪಕ್ಕದಲ್ಲಿ ಆಕಾಶದ ಅಗಲಕ್ಕೂ ಚಾಚುವಂತಿರುವ ದೊಡ್ಡಗಾತ್ರದ ಜಾಹೀರಾರು ಫಲಕವನ್ನು ಅಳವಡಿಸಲಾಗಿದೆ, ಇವು ಧರೆಗುರುಳಿದರೆ ಅಪಾಯ ಸಾವು ನೋವಿಗೆ ಕಾರಣವಾಗಲಿದೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಡಿತಗೊಳಿಸಿ:

ಬಹುತೇಕ ಫಲಕಗಳು ಅನಧಿಕೃವಾಗಿವೆ.ಸಂಜೆ 6ರ ನಂತರ ವಿದ್ಯುತ್ ಬೆಳಕಿನಿಂದ ಜಾಹೀರಾತು ಫಲಕಗಳು ಜಗಮಗಿಸುತ್ತವೆ, ಇಲ್ಲಿನ ಬೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ದುರಂತಕ್ಕೆ ದಾರಿಯಾಗಿದೆ ಈ ಕೂಡಲೇ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಜಾಹೀರಾತು ನಾಮಫಲಕಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಬಿರುಗಾಳಿ ಮಳೆಗೆ ಧರೆಗುರುಳಿದ ಲಕಗಳು: ಸರ್ಜಾಪುರ ಭಾಗದಲ್ಲಿ ಎರಡ್ಮೂರು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಬೃಹತ್ ಗಾತ್ರದ ಜಾಹೀರಾತು ನಾಮಫಲಕಗಳು ಧರೆಗುರುಳಿವೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ದೊಮ್ಮಸಂದ್ರ ಬಳಿ ಎರಡು ರಸ್ತೆಯ ಮಧ್ಯಭಾಗದಲ್ಲಿರುವ ಈ ಜಾಹೀರಾತು ನಾಮಫಲಕ ಬಿರುಗಾಳಿಗೆ ಮುರಿದು ಬಿದ್ದಿದೆ. ಇನ್ನು ಸರ್ಜಾಪುರದ ಬಳೆಪೇಟೆ ಧಮ್ ಬಿರಿಯಾನಿ ಅಂಗಡಿಯ ಮೇಲೆ ಬೃಹತ್ ಗಾತ್ರದ ಜಾಹೀರಾತು ಲಕ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಜಖಂಗೊಂಡಿದೆ.

ಕಾನೂನು ಬಾಹಿರವಾಗಿ ಜಾಹೀರಾತು ಲಕಗಳನ್ನು ಈ ಭಾಗದಲ್ಲಿ ಅಳವಡಿಸಲಾಗಿದ್ದು ಈಗಾಗಲೇ ಸರ್ಜಾಪುರ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಜಾಹೀರಾತುದಾರರಿಗೆ ಮತ್ತು ಆಸ್ತಿಯ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.ಆದರೆ ಈ ಬಗ್ಗೆ ಯಾರೂ ಪ್ರತಿಕ್ರಿಯಿಸಿಲ್ಲ. ಗಾಳಿ ಮಳೆ ಸಂದರ್ಭದಲ್ಲಿ ಸಾರ್ವಜನಿಕರ ಸಾವು ನೋವಿಗೆ ಕಾರಣವಾಗುವ ಅಪಾಯವಿದೆ. ಹಾಗಾಗಿ ಈ ಕೂಡಲೇ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಡಾ.ಎಸ್.ಮಂಜುನಾಥ್‌ಸರ್ಜಾ, ಸರ್ಜಾಪುರ ಗ್ರಾಮ ಪಂಚಾಯಿತಿ ಸದಸ್ಯ