ಬೆಂಗಳೂರು: ಗುಜರಾತ್, ರಾಜಸ್ಥಾನ ಸೇರಿ ಉತ್ತರ ಭಾರತದ ಸಾಂಪ್ರದಾಯಿಕ ನೃತ್ಯಗಳಾದ ದಾಂಡಿಯಾ ಮತ್ತು ಗಾರ್ಭಾ ಈಗ ದೇಶಾದ್ಯಂತ ಪ್ರಸಿದ್ಧಿಗೊಂಡಿದ್ದು, ನವರಾತ್ರಿ ನಿಮಿತ್ತ ಮಂಜೀರಾಮ್ ಗ್ರೂಪ್ಸ್ ನಗರದ ಮಹಾಲಕ್ಷ್ಮೀ ಲೇಔಟ್‌ನ ಇಸ್ಕಾನ್ ದೇಗುಲ ಎದುರಿನ ರಾಣಿ ಅಬ್ಬಕ್ಕ ಕ್ರೀಡಾಂಗಣದಲ್ಲಿ ಕನ್ನಡದ ನಂ.1 ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಲಾಗಿರುವ 3 ದಿನಗಳ ‘ದಾಂಡಿಯಾ ಉತ್ಸವ’ದ ಮೊದಲನೇ ದಿನವಾದ ಶುಕ್ರವಾರ ನಡೆದ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.
ಭಕ್ತಿಭಾವ ಹಾಗೂ ಸಂಸ್ಕೃತಿಯ ಸಮ್ಮಿಲನದಡಿ ನಡೆದ ಮೊದಲ ದಿನದ ಉತ್ಸವ ಜನಮನ ಸೆಳೆಯಿತು. ದಾಂಡಿಯಾ ನೃತ್ಯಕ್ಕಾಗಿ ವಿಶೇಷ ವೃತ್ತಕಾರದ ಸ್ಥಳವನ್ನು ಬಣ್ಣಬಣ್ಣದ ಅಲಂಕಾರಿಕ ಬಟ್ಟೆ, ವಿದ್ಯುತ್ ದೀಪಗಳಿಂದ ಸಜ್ಜುಗೊಳಿಸಲಾಗಿತ್ತು. ವೇದಿಕೆ ಮುಂಭಾಗ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉತ್ಸವಕ್ಕೆ ಚಾಲನೆ ನೀಡಿದರು.
ಕನ್ನಡ, ಹಿಂದಿ ಮರಾಠಿ, ಗುಜರಾತಿ ಮತ್ತು ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ಧರಿಸಿ ಆಯಾ ಭಾಷೆಯ ಹಾಡುಗಳಿಗೆ ಕೋಲಾಟವಾಡುತ್ತ ಯುವಕ- ಯುವತಿಯರು ಹೆಜ್ಜೆ ಹಾಕಿದರು. ಕುಟುಂಬದವರು, ತಮ್ಮ ಸ್ನೇಹಿತರ ಜೊತೆಗೂಡಿ ದಾಂಡಿಯಾದದಲ್ಲಿ ನೃತ್ಯ ಪ್ರದರ್ಶಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ಬಾಗಲಕೋಟೆಯಲ್ಲಿ ಸತತ 6 ವರ್ಷದಿಂದ ದಾಂಡಿಯಾ ಉತ್ಸವ ಆಯೋಜಿಸಿಕೊಂಡು ಬರುತ್ತಿದ್ದೇವೆ. ರಾಜಧಾನಿಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದೇವೆ. ಭಾನುವಾರದವರೆಗೆ ಇದು ಮುಂದುವರಿಯಲಿದೆ. ಮೊದಲು ಮಹಿಳೆಯರು ಭಾಗವಹಿಸುತ್ತಿದ್ದರು. ಇತ್ತೀಚೆಗೆ ಪುರುಷರೂ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ವೃತ್ತಕಾರದಲ್ಲಿ ಹೆಜ್ಜೆ ಹಾಕುವುದನ್ನೂ ನೋಡಲು ಸಾವಿರಾರು ಜನ ಜಮಾಯಿಸುತ್ತಾರೆ. ದಾಂಡಿಯಾಗೆ ಎಲ್ಲರೂ ಸೇರಿಕೊಂಡು ಹೆಜ್ಜೆ ಹಾಕಿ ದೈವೀಕತೆಯನ್ನು ಮೆರೆದು ಸಂಭ್ರಮಿಸುತ್ತಾರೆ ಎಂದು ಸಂಘಟಕರು ಹೇಳುತ್ತಾರೆ.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಉಪ ಮೇಯರ್ ಎಸ್. ಹರೀಶ್ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ದಾಂಡಿಯಾ ಉತ್ಸವ ಪ್ರಮುಖ ಆಕರ್ಷಣೆಯಾಗಿದೆ. ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿದ್ದ ದಾಂಡಿಯಾ ಕರ್ನಾಟಕದಲ್ಲೂ ಖ್ಯಾತಿ ಪಡೆದಿದೆ. ಈ ನತ್ಯ ಎಲ್ಲೆಡೆ ಚಿರಪರಿಚಿತವಾಗಿದೆ. ದಾಂಡಿಯಾ ನೃತ್ಯ ಸೇರಿ ವಿವಿಧ ಧಾರ್ಮಿಕ ಸಾಂಸ್ಕೃತಿ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಸಂಕೇತವಾಗಿದೆ ಎಂದರು. ನಾಡಪ್ರಭು ಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕ ಕೆ. ಗಂಗಹನುಮಯ್ಯ ಮತ್ತಿತರರಿದ್ದರು.
ವಿಜಯದ ಉತ್ಸವ
ದಾಂಡಿಯಾ ರಾಸ್ ಮೂಲಕ ನಡೆಯುವುದು ದುರ್ಗಾದೇವಿಯ ಆರಾಧನೆ. ದುಷ್ಟಶಕ್ತಿಯ ಮೇಲೆ ವಿಜಯದ ಉತ್ಸವ. ಇದೊಂದು ಸಂತಸದ ಕುಣಿತವಾಗಿದ್ದರೂ ಪ್ರತಿನಿಧಿಸುವುದು ಮಾತ್ರ ಯುದ್ಧವನ್ನು ಎನ್ನುವುದು ಇದರ ವಿಶೇಷತೆ. ಗುಜರಾತ್‌ನ ಕಲಾವಿದ ಮಿಹಿರ್ ಜೋಷಿ ಲೈವ್ ಬ್ಯಾಂಡ್ ಪ್ರದರ್ಶನ ಮನಸೊರೆಗೊಂಡಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಿಗೆ ಭರಪೂರ ಮನರಂಜನೆ ಒದಗಿಸಿದವು.
ಹಿಂದುಗಳ ಹಬ್ಬಗಳಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಂಜೀರಾಮ್ ಗ್ರೂಪ್ಸ್, ಮೊದಲ ಬಾರಿಗೆ ರಾಜಧಾನಿಯಲ್ಲಿ ಆಯೋಜಿಸಿದೆ. ‘ದಾಂಡಿಯಾ ಉತ್ಸವ’ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ರಂಗು ತಂದುಕೊಟ್ಟಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವಂತಾಗಲಿ.
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ.