ಜಿಲ್ಲೆ

ದಾಂಡೇಲಿಯಲ್ಲಿ ಯುಜಿಡಿ ವ್ಯವಸ್ಥೆ ಸಿದ್ಧ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ದಾಂಡೇಲಿ: ನಗರದಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದ್ದು, ಮನೆ, ವಾಣಿಜ್ಯ ಕಟ್ಟಡಗಳ ಸಂಪರ್ಕ ಮಾತ್ರ ಬಾಕಿ ಇದೆ. ಯೋಜನೆ ಸಂಪೂರ್ಣ ಕಾರ್ಯರೂಪಕ್ಕೆ ಬಂದ ನಂತರ ನಗರ ನೈರ್ಮಲ್ಯದಲ್ಲಿ ಮಹತ್ವದ ಬದಲಾಗಣೆ ಯಾಗುವ ನಿರೀಕ್ಷೆ ಇದೆ.
ಜಿಲ್ಲೆಯ ಇತಿಹಾಸದಲ್ಲಿ ಮಹತ್ವದ ಪುಟಗಳನ್ನು ಹೊಂದಿರುವ ನಗರ ದಾಂಡೇಲಿ. 14.50 ಚದರ ಕಿ.ಮೀ. ವ್ಯಾಪ್ತಿ ಹೊಂದಿದ ನಗರದಲ್ಲಿ ಸುಮಾರು 55 ಸಾವಿರ ಜನಸಂಖ್ಯೆ ಇದೆ. ಪ್ರವಾಸಿ ತಾಣವಾಗಿರುವುದರಿಂದ ರಾಜ್ಯ, ದೇಶಗಳ ಜನ ಪ್ರತಿನಿತ್ಯ ಭೇಟಿ ನೀಡುವ ತಾಣ ಇದಾಗಿದೆ. ಪರಿಣಾಮ ನಗರ ಸಾಕಷ್ಟು ಬೆಳೆದಿದ್ದು, ಅದರಂತೆ ನೈರ್ಮಲ್ಯವೂ ಬೆಳೆದಿದೆ. ಅಸಮರ್ಪಕ ಚರಂಡಿ ವ್ಯವಸ್ಥೆ, ಶೌಚ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆಯಿಂದ ಕುಡಿಯುವ ನೀರು ಮಲಿನವಾಗುತ್ತಿದೆ. ಇದರಿಂದ ಕಾಮಾಲೆ, ಡಯರಿಯಾ ಮುಂತಾದ ಕಾಯಿಲೆಗಳು ವ್ಯಾಪಕವಾಗುತ್ತಿವೆ ಎಂಬ ಆರೋಪವೂ ಇದೆ. ಈ ನಿಟ್ಟಿನಲ್ಲಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಅಗತ್ಯವಾಗಿತ್ತು.
ನಗರ ನೈರ್ಮಲ್ಯೀಕರಣಕ್ಕೆ ಕೇಂದ್ರ ಸರ್ಕಾರವೂ ಒತ್ತು ನೀಡಿದ್ದು, ಸ್ವಚ್ಛ ಭಾರತ ಸರ್ವೇಕ್ಷಣೆ ಎಂಬ ಸ್ಪರ್ಧೆಯನ್ನು ನಗರಗಳ ನಡುವೆ ಏರ್ಪಡಿಸುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆ ಉತ್ತಮ ರ‌್ಯಾಂಕಿಂಗ್ ಪಡೆಯಲು ಒಳಚರಂಡಿ ವ್ಯವಸ್ಥೆ ಪ್ರಮುಖ ಮಾನದಂಡವಾಗಿದೆ. ಇನ್ನೊಂದೆಡೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಘನ ಹಾಗೂ ದ್ರವ ತ್ಯಾಜ್ಯ ಅಸಮರ್ಪಕ ವಿಲೇವಾರಿ ಸಮರ್ಪಕವಾಗಿ ಆಗದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಘನ ಹಾಗೂ ದ್ರವ ತ್ಯಾಜ್ಯಗಳ ವಿಲೇವಾರಿ ಬಗ್ಗೆ ಮೇಲುಸ್ತುವಾರಿ ವಹಿಸಲು ಜಿಲ್ಲಾ ಮಟ್ಟದ ಟಾಸ್ಕ್ ೆರ್ಸ್ ಸಮಿತಿ ರಚಿಸಿದೆ. ಪ್ರತಿ 3 ತಿಂಗಳಿಗೊಮ್ಮೆ ವರದಿ ನೀಡುವಂತೆ ಸೂಚಿಸುತ್ತಿದೆ.
140 ಕೋಟಿ ರೂ. ಕಾಮಗಾರಿ: ಎಲ್ಲದರ ಪರಿಣಾಮ ದಾಂಡೇಲಿ ನಗರಕ್ಕೆ 2019 ರಲ್ಲಿ 140 ಕೋಟಿ ರೂ. ವೆಚ್ಚದ ಒಳ ಚರಂಡಿ ಯೋಜನೆ ಮಂಜೂರಾಗಿತ್ತು. ಶಾಸಕ
ಆರ್.ವಿ. ದೇಶಪಾಂಡೆ ಅವರ ಮೇಲ್ವಿಚಾರಣೆ ಯಿಂದ ಕಾಮಗಾರಿಗಳು ಈಗ ಮುಗಿದಿವೆ. ನಗರದಲ್ಲಿ ಒಟ್ಟು 88 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದೆ. ವಿವಿಧ ವಾರ್ಡ್‌ಗಳಲ್ಲಿ 7 ವೆಟ್‌ವೆಲ್, ಇಂಗು ಗುಂಡಿಗಳಿಂದ ಹಾಲಮಡ್ಡಿ ಎಸ್‌ಟಿಪಿ ಘಟಕದವರೆಗೆ 7 ಕಿ.ಮೀ. ಏರು ಕೊಳವೆ ಮಾರ್ಗವನ್ನು ಅಳವಡಿಸಲಾಗಿದೆ. ನಿರ್ಮಲನಗರ, ಹಾಲಮಡ್ಡಿಯಲ್ಲಿ ಒಳಚರಂಡಿ ನೀರಿನ ಶುದ್ಧೀಕರಣ, ಸಂಸ್ಕರಣ ಘಟಕ (ಎಸ್‌ಟಿಪಿ) ಸಿದ್ಧಗೊಂಡಿದೆ. ಅಲ್ಲದೆ, ಕೆರವಾಡ ಸಮೀಪ 8.5 ದಶಲಕ್ಷ ಲೀಟರ್ ಒಳಚರಂಡಿ ನೀರಿನ ಸಂಸ್ಕರಣಾ ಘಟಕವೂ ಸಿದ್ಧವಾಗಿದೆ. ಒಳಚರಂಡಿ ನೀರಿನ ಹರಿವಿನ ಪ್ರಾಥಮಿಕ ತಪಾಸಣೆ ಆಗಿದೆ. ಒಟ್ಟಾರೆ ಒಳಚರಂಡಿ ವ್ಯವಸ್ಥೆ ಕಾರ್ಯನಿರ್ವಹಣೆಗೆ ಬೇಕಾದ ಎಲ್ಲ ಮೂಲಸೌಕರ್ಯಗಳು ಸಿದ್ಧವಾದಂತಾಗಿದೆ.

ಯುಜಿಡಿ ಕಾಮಗಾರಿ ಮುಕ್ತಾಯವಾಗಿದೆ ಎಚ್‌ಎಸ್‌ಸಿ ಕಾರ್ಯ ಬಾಕಿ ಉಳಿದಿದೆ. ಆಡಳಿತ ಸಮಿತಿ ಅಧ್ಯಕ್ಷರಿಲ್ಲದ ಕಾರಣ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದಾರೆ. ಶೀಘ್ರದಲ್ಲಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿ ಮನೆ ಸಂಪರ್ಕಕ್ಕೆ ಆಕರಿಸಬಹುದಾದ ಶುಲ್ಕದ ಮೊತ್ತವನ್ನು ನಿಗದಿ ಮಾಡಲಾಗುವುದು. ನಂತರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಕಾರದಲ್ಲಿ ಶೀಘ್ರ ಪ್ಲಂಬಿಂಗ್ ಕಾರ್ಯಗಳನ್ನು ಕೈಗೊಳ್ಳಲಾಗುವುದು.ರಾಜಾರಾಮ ಪವಾರ ಪೌರಾಯುಕ್ತ ನಗರಸಭೆ ದಾಂಡೇಲಿ