ಜಿಲ್ಲೆ

ಜನಮನ ಸೂರೆಗೊಂಡ ‘ನೃತ್ಯ ವೈಭವ-2020’

Kodagu

ಮಡಿಕೇರಿ: ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಅಫ್ ಕೂರ್ಗ್ ಡಾನ್ಸ್ ಇನ್‌ಸ್ಟಿಟ್ಯೂಟ್‌ನ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ‘ನೃತ್ಯ ವೈಭವ-2020’ ಜನಮನ ಸೂರೆಗೊಂಡಿತು.

ನಗರದ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾವಿದರು, ಕಲಾ ತಂಡಗಳು ಭಾಗವಹಿಸಿ ಸಂಗೀತ ಹಾಗೂ ನೃತ್ಯದ ರಸದೌತಣವನ್ನು ಉಣಬಡಿಸಿದರು. ಧಾರ್ಮಿಕ, ಪೌರಾಣಿಕ ಹಿನ್ನೆಲೆಯುಳ್ಳ, ಜಾನಪದ ಶೈಲಿಯ, ಪಾಶ್ಚಾತ್ಯ ಶೈಲಿಯ ನೃತ್ಯ ಪ್ರಕಾರಗಳು ಗಮನ ಸೆಳೆದವು.

ವಿವಿಧ ವಿಭಾಗಗಳ ಪ್ರದರ್ಶನದಲ್ಲಿ ಒಂದಕ್ಕಿಂತ ಮತ್ತೊಂದು ನೃತ್ಯಗಳು ಮೂಡಿಬಂದವು. ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಯ ಕಲಾವಿದರು ಪ್ರದರ್ಶನ ನೃತ್ಯ ಮಾಡಿದರು. ಇದರೊಂದಿಗೆ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಶಶಿ ಮಾಸ್ಟರ್ ತಂಡದ ಅನ್ವಿಶಾ ಮತ್ತು ಪ್ರೇಕ್ಷಿತ್ ಜೋಡಿಯ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಕಿಂಗ್ಸ್ ಆಫ್ ಕೂರ್ಗ್‌ನ ಕಲಾವಿದರನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಟ್ರೋಫಿ ನೀಡಲಾಯಿತು. ನೃತ್ಯ ಪ್ರದರ್ಶನವನ್ನು ನೃತ್ಯ ಸಂಯೋಜಕ ಶಶಿ ಮಾಸ್ಟರ್ ಉದ್ಘಾಟಿಸಿದರು. ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಬೆಂಗಳೂರಿನ ಉದ್ಯಮಿ ಜಯಂತಿ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ, ಉದ್ಯಮಿಗಳಾದ ಸವಿತಾ ಅರುಣ್, ಅನ್ಸಫ್, ಈಶ್ವರ್ ಕುಮಾರ್, ಕೊಡಗು ಜಿಲ್ಲಾ ನೃತ್ಯ ಸಂಯೋಜಕ ಸಂಘದ ಅಧ್ಯಕ್ಷ ಚೇತನ್, ನೃತ್ಯ ಸಂಯೋಜಕ ವಿನೋದ್ ಕರ್ಕೆರಾ ಹಾಗೂ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆ ಅಧ್ಯಕ್ಷ ಮಹೇಶ್ ಇದ್ದರು.