ಹರಿಹರ: ಭರತನಾಟ್ಯ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯ ಕಲೆಗಳು ಇಂದು ವಿಶ್ವದೆಲ್ಲೆಡೆ ದೇಶದ ಪರಂಪರೆಯನ್ನು ಬಿಂಬಿಸುತ್ತಿದೆ. ಇಂತಹ ಕಲೆಗಳನ್ನು ಪ್ರೋತ್ಸಾಹಿಸುವ ಮೂಲಕ ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಗುರುಭವನದಲ್ಲಿ ಇತ್ತೀಚೆಗೆ ನಡೆದ ಸಂಕಷರ್ಣ ನೃತ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೃತ್ಯ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ದೇಶದ ದೊಡ್ಡ ಆಸ್ತಿ. ಪ್ರಾಚೀನ ಕಾಲದಿಂದಲೂ ಕಲೆಯ ತನ್ನದೇ ಆದ ವೈಶಿಷ್ಟತೆ ಹೊಂದಿರುವ ಕಾರಣದಿಂದ ಕಲೆ ಬಹಳ ಶ್ರೇಷ್ಠ ಸ್ಥಾನ ಪಡೆದಿದೆ. ಸರ್ಕಾರ ಕೂಡಾ ಇಂದಿನ ದಿನಮಾನಗಳಲ್ಲಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.
ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಎಸ್. ಕೇಶವಕುಮಾರ್ ಪಿಳ್ಳೆ ಮಾತನಾಡಿ, ಕಲೆ ಒಂದು ರೀತಿ ತಪಸ್ಸು. ಕಲೆಯಿಂದ ದೈಹಿಕ ಮಾನಸಿಕ ಭಾವನಾತ್ಮಕ ಆರೋಗ್ಯ ಸದೃಢವಾಗಿಟ್ಟುಕೊಳ್ಳಬಹುದು ಎಂದರು.
ಪಾಲಕರು ತಮ್ಮ ಮಗು ಯಾವುದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತದೆ ಎಂಬುದನ್ನರಿತು ಅವರಲ್ಲಿರುವ ಪ್ರತಿಭೆ ಗುರುತಿಸಿ, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಸಂಕಷರ್ಣ ನೃತ್ಯಾಲಯದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ತರಬೇತಿ ಹೊಂದಿದರೆ ಅವರಿಗೆ ಅಕ್ಕ ಸಮ್ಮೇಳನ ಹಾಗೂ ಈ ಬಾರಿ ನಡೆಯುವ ದಸರಾ ಮಹೋತ್ಸವ ಸಂದರ್ಭದಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.
ಹರಿಹರದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಶಿವದೇವಿ ಅಕ್ಕ ಮಾತನಾಡಿದರು. ಇದೇ ವೇಳೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ನೃತ್ಯಾಲಯದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಹುಬ್ಬಳ್ಳಿ ತಕ್ಷಶಿಲಾ ಗುರುಕುಲದ ಸಹ ಸಂಸ್ಥಾಪಕ ಸಂದೇಶ ಹುಟಿಗಿ, ಸಂಕಷರ್ಣ ನೃತ್ಯಾಲಯ ಅಧ್ಯಕ್ಷೆ ವಿದುಷಿ ರಾಧಾ, ಕಾರ್ಯದರ್ಶಿ ಎಸ್.ಡಿ. ರಜನಿ ಹಾಗೂ ಸಂಕಷರ್ಣ ನೃತ್ಯಾಲಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.