ಲಕ್ಷ್ಮೇಶ್ವರ: ಡಾ. ಸುಧಾಮೂರ್ತಿ ಅವರ ಇನ್ಪೋಸಿಸ್ ಪ್ರತಿಷ್ಠಾನ ಕರ್ನಾಟಕವಷ್ಟೇ ಅಲ್ಲದೆ, ದೇಶ- ವಿದೇಶಗಳಲ್ಲಿಯೂ ಕರ್ನಾಟಕ ಸಂಗೀತ, ಕಲೆ, ಸಾಂಸ್ಕೃತಿಕ ವೈಭವವನ್ನು ವಿಜೃಂಭಿಸುವ ಶ್ರೇಷ್ಠ ಕಾರ್ಯ ಮಾಡುತ್ತಿದೆ ಎಂದು ಇನ್ಪೋಸಿಸ್ ಪ್ರತಿಷ್ಠಾನದ ವ್ಯವಸ್ಥಾಪಕ ಪ್ರಶಾಂತ ಹೆಗಡೆ ಹೇಳಿದರು.
ಸೋಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರದಿಂದ ಪ್ರಾರಂಭಗೊಂಡಿರುವ ಪುಲಿಗೆರೆ ಉತ್ಸವದ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ಪೋಸಿಸ್ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಬಡವರ ಕಲ್ಯಾಣಕ್ಕಾಗಿ ಪ್ರತಿ ವರ್ಷ 500 ಕೋಟಿ ರೂ. ವಿನಿಯೋಗಿಸುತ್ತಿದೆ. ಡಾ. ಸುಧಾಮೂರ್ತಿ ಅವರು ನಾಡಿನ ಪ್ರಾಚೀನ ದೇವಸ್ಥಾನ, ಶಿಲ್ಪಕಲೆ, ಸಾಂಸ್ಕೃತಿಕ ವೈಶಿಷ್ಟ್ಯೆಯತೆಯನ್ನು ಉಳಿಸಿ-ಬೆಳೆಸುವ ಸೇವೆ ಮಾಡುತ್ತಿದ್ದಾರೆ. ಅದರಂತೆ ಸೋಮೇಶ್ವರ ದೇವಸ್ಥಾನ ಜೀಣೋದ್ಧಾರಗೊಳಿಸಿ ಕಳೆದ 7 ವರ್ಷದಿಂದ ದೇವಸ್ಥಾನದಲ್ಲಿ 3 ದಿನಗಳ ಕಾಲ ಸಂಗೀತ, ನೃತ್ಯ, ಚಿತ್ರ ಸಂಭ್ರಮದ ಪುಲಿಗೆರೆ ಉತ್ಸವ ಆಯೋಜಿಸುತ್ತಾ ಬಂದಿದ್ದಾರೆ. ಈ ಕಾರ್ಯ ನಿರಂತರವಾಗಿ ಮುಂದುವರಿಸುವ ಅವರ ಉದ್ದೇಶಕ್ಕೆ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದರು.
2ನೇ ದಿನದ ಪುಲಿಗೆರೆ ಉತ್ಸವದ ಸಂಜೆ ಕಾರ್ಯಕ್ರಮದಲ್ಲಿ ಪಂ. ಬಸವರಾಜ ರಾಜಗುರು ಅವರ ಶಿಷ್ಯ ಹೆಸರಾಂತ ಹಿಂದುಸ್ತಾನಿ ಗಾಯಕ ಮತ್ತು ಸಾವಿರಾರು ಸಂಗೀತ ಕಲಾವಿದರನ್ನು ನಾಡಿಗೆ ನೀಡುತ್ತಿರುವ ಹುಬ್ಬಳ್ಳಿಯ ಡಾ.ಪಂ. ಅಶೋಕ ಹುಗ್ಗಣ್ಣವರ ಅವರ ಹಿಂದುಸ್ತಾನಿ ಗಾಯನ ಸೇರಿದ್ದ ಸಂಗೀತಾಸ್ತಕರನ್ನು ರಾಗದ ಅಲೆಯಲ್ಲಿ ತೇಲುವಂತೆ ಮಾಡಿತು.
ಮಾರು ಬಿಹಾಗ ರಾಗದಲ್ಲಿ ತಮ್ಮ ಗಾಯನ ಆರಂಭಿಸಿದ ಡಾ. ಅಶೋಕ ಅವರು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಂಚಿನ ಕಂಠದ ಮೂಲಕ ಎಲ್ಲರ ಮನಸೆಳೆದರು. ನಂತರ ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ… ವಚನ, ಪುರಂದರ ದಾಸರ ಬಾರೋ ನಮ್ಮ ಮನೆಗೆ…… ದಾಸರ ಪದದ ನಂತರ ಶಿಶುನಾಳ ಶರೀಫರ ತತ್ವಪದ ಮುತ್ತು ತಂದೆನ… ತಂಗೀ ಊರಾಗ… ಪ್ರಸ್ತುತ ಪಡಿಸಿದರು.
ಭಾರತಿ ವಿದ್ಯಾಭವನದ ನಿರ್ದೇಶಕಿ ನಾಗಲಕ್ಷ್ಮೀ ರಾವ್ ನಿರೂಪಿಸಿದರು.