ಮೈಸೂರು: ದೇಹ ಮತ್ತು ಮನಸ್ಸಿನ ಸಮ್ಮಿಲನಕ್ಕೆ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆಗಳು ಸಹಕಾರಿ ಎಂದು ವಿಜಯವಾಣಿ ಪತ್ರಿಕೆಯ ಬ್ಯುರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಹೇಳಿದರು.
ಚಂಪಕ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ರಾಮಕೃಷ್ಣನಗರದ ಚಂಪಕ ಸಭಾಂಗಣದಲ್ಲಿ ಶನಿವಾರ ಆಯೋಜಿಸ್ದ ಚಂಪಕ ರಾಷ್ಟ್ರೀಯ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದರು.
ನೃತ್ಯಕಲೆಯನ್ನು ದೈವತ್ವದ ಕಲೆ ಎನ್ನುತ್ತೇವೆ. ನಮ್ಮ ಮನಸ್ಸು ಮತ್ತು ಬುದ್ಧಿ ಏನನ್ನು ಹೇಳುತ್ತದೆ ಯೋ ಅದನ್ನು ನಮ್ಮ ದೇಹ ಮಾಡಿ ತೋರಿಸುತ್ತದೆ. ಬುದ್ಧಿ, ಆತ್ಮ ಮತ್ತು ದೇಹ ಒಂದೇ ಸಮಯದಲ್ಲಿ ಕೆಲಸ ಮಾಡುವುದು ನೃತ್ಯ ಕಲೆಯಲ್ಲಿ ಮಾತ್ರ. ಆದ್ದರಿಂದ ಇದು ದೇಹದಲ್ಲಿ ಎಲ್ಲದರ ಸಮನ್ವಯ ಸಾಧಿಸುವಂತಹ ಕಲೆಯೂ ಹೌದು. ನೃತ್ಯದಿಂದ ಮಕ್ಕಳಲ್ಲಿ ಏಕಾಗ್ರತೆಯೂ ಬೆಳೆಯುತ್ತದೆ. ಇದರಿಂದ ಓದಿನಲ್ಲೂ ಆಸಕ್ತಿ ಬೆಳೆಸುತ್ತದೆ. ಮಕ್ಕಳಲ್ಲಿ ಸಹನೆ ಕಲಿಸುತ್ತದೆ ಎಂದರು.
ನೃತ್ಯ ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇದು ನಾಟ್ಯಕಲೆಗಳಲ್ಲಿ ಒಂದು. ನೃತ್ಯದಲ್ಲಿ ಹಲವು ಪ್ರಾಕಾರಗಳನ್ನು ನೋಡಬಹುದು. ಭಾರತೀಯ ನೃತ್ಯಕಲೆಗಳ ಪರಂಪರೆ ಜಗತ್ತಿನ ಉಳಿದೆಲ್ಲ ನೃತ್ಯಕಲೆಗಳಿಗೊಂದು ಆದರ್ಶ ಎಂದರು.
ಧಾರವಾಡದಲ್ಲಿ ಒಂದು ಕಲ್ಲು ಎಸೆದರೆ ಅದು ಸಾಹಿತಿಯ ಮನೆ ಮೇಲೆ ಬೀಳುತ್ತದೆ ಎಂಬ ಮಾತಿದೆ. ಅದೇ ರೀತಿ ಕಲ್ಲನ್ನು ಮೈಸೂರಿನಲ್ಲಿ ಎಸೆದರೆ ಅದು ಕಲೆ, ನೃತ್ಯ ಸಂಗೀತ ಹೇಳಿಕೊಡುವ ಕಲಾ ಕೇಂದ್ರಗಳ ಮೇಲೆ ಬೀಳುತ್ತದೆ ಎಂಬ ಮಾತೂ ನಿಜ. ಇಲ್ಲಿನ ಕಲಾ ಕೇಂದ್ರಗಳು ಮೈಸೂರನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿವೆ. ಇದರಲ್ಲಿ ಚಂಪಕ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಕೂಡ ಒಂದು ಎಂದರು.
ವಿದುಷಿ ನಾಗಲಕ್ಷ್ಮೀ ನಾಗರಾಜನ್, ನಾಗರಾಜನ್, ವಿದುಷಿ ಭಾರತಿ ವಿಠ್ಠಲ್, ವಿದುಷಿ ಭಾವನಾ ಡಿ.ರಾವ್ ಇದ್ದರು.