ಡಂಬಳದ ತೋಂಟದಾರ್ಯ ಮಠದ ಮುಂಭಾಗದ ಕಾಲುವೆಯಲ್ಲಿ ರೈತರೇ ಇಳಿದು ಚರಂಡಿ, ತಾಜ್ಯವನ್ನು ಸ್ವಚ್ಛಗೊಳಿಸುತ್ತಿರುವುದು. 
ಜಿಲ್ಲೆ

ಕೆರೆ ನೀರಿಗಾಗಿ ಕಾಲುವೆ ಸ್ವಚ್ಛತೆಗೊಳಿಸಿದ ಡಂಬಳ ರೈತರು

ಡಂಬಳ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ರೈತರು ಸಣ್ಣ ನೀರಾವರಿ ಇಲಾಖೆಯ ಕಾಲುವೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಕಾಲುವೆಯಲ್ಲಿದ್ದ ಕೊಳಚೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎರಡು ದಿನಗಳಿಂದ ತೆರವು ಮಾಡುತ್ತಿದ್ದಾರೆ.

ಐತಿಹಾಸಿಕ ಡಂಬಳ ಕೆರೆಯಿಂದ ರೈತರ ಜಮೀನಿಗೆ ನೀರು ಹರಿಸುವ ಕಾಲುವೆಗೆ ಗ್ರಾಮದ ಗಟಾರದ ನೀರು ಸೇರಿಕೊಳ್ಳುತ್ತಿದೆ. ಜಮೀನುಗಳಿಗೆ ನೀರೊದಗಿಸುವ ಕಾಲುವೆಯು ಚರಂಡಿ ನೀರಿನಿಂದ ಕಟ್ಟಿಕೊಂಡಿದೆ. ಇದರಿಂದ ಬಿತ್ತನೆ ಮಾಡಿರುವ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾಲುವೆ ಸ್ವಚ್ಛಗೊಳಿಸುವಂತೆ ಡಂಬಳ ಗ್ರಾಪಂ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ ಮುಂತಾದ ಬೀಜಗಳನ್ನು ಬಿತ್ತನೆ ಮಾಡಿದ್ದೇವೆ. ಬೀಜಗಳು ಮೊಳಕೆಯೊಡೆದಿಲ್ಲ. ಕಾಲುವೆ ಸ್ವಚ್ಛತೆಗೆ ಗ್ರಾಪಂ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಗುರುವಾರದಿಂದ ನಾವೇ ನೀರು ಹೊರಕ್ಕೆ ಹಾಕಿ, ಕೊಳಚೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಟ್ರಾೃಕ್ಟರ್ ಮೂಲಕ ಸಾಗಿಸುತ್ತಿದ್ದೇವೆ ಎಂದು ರೈತರಾದ ಕುಬೇರಪ್ಪ ತುಂಬರಗುದ್ದಿ, ಶಂಭುಲಿಂಗಪ್ಪ ಗಡಗಿ ತಿಳಿಸಿದರು.

ಕೆರೆಯಲ್ಲಿ ನೀರು ಸಾಕಷ್ಟು ನೀರಿದ್ದರೂ ರೈತರಿಗೆ ಪ್ರಯೋಜನ ಆಗುತ್ತಿಲ್ಲ. ಎಷ್ಟೇ ಕಷ್ಟವಾದರೂ ಕಾಲುವೆ ನೀರು ಜಮೀನಿಗೆ ಹರಿಸಿಯೇ ತೀರುತ್ತೇವೆ ಎನ್ನುತ್ತಾರೆ ರೈತರಾದ ಮಳ್ಳಸಿದ್ದಪ್ಪ ಚೌಡಕಿ, ಅಲ್ಲಾಸಾಬ್ ಸರ್ಕವಾಸ, ಬಾಸುಸಾಬ್ ಚಿಕ್ಕೊಪ, ಮೂಕಪ್ಪ ಹೊಂಬಳ. ಉಪತಹಸೀಲ್ದಾರ್ ಚಿದಾನಂದ ಬಳೂಟಗಿ ಭೇಟಿ ನೀಡಿ ಪರಿಶೀಲಿಸಿದರು.

ಕಾಲುವೆ ಕಟ್ಟಿಕೊಳ್ಳಲು ನಾವು ಕಾರಣರಲ್ಲ. ಚರಂಡಿ ನೀರು ಕಾಲುವೆಗೆ ಹೋಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವರ್ಷದ ಹಿಂದೆ ಗ್ರಾಪಂಗೆ ಪತ್ರ ಬರೆದಿದ್ದೇನೆ. ರೈತರ ಜಮೀನಿಗೆ ಕೊಳಚೆ ನೀರು ಹೋಗದಂತೆ ಸಮಸ್ಯೆ ಸರಿಪಡಿಸುವ ಪ್ರಯತ್ನ ಶೀಘ್ರದಲ್ಲೇ ಮಾಡುತ್ತೇವೆ.-ಪ್ರವೀಣ ಪಾಟೀಲ, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್